ಅಭಿವೃದ್ಧಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬೇಡಿ, ಸರ್ಕಾರ ಎಲ್ಲಾ ಧರ್ಮವನ್ನು ಸಮಾನವಾಗಿ ಕಾಣುತ್ತದೆ: ಪ್ರಧಾನಿ ಮೋದಿ
ಧರ್ಮ, ಜಾತಿ, ವರ್ಗಗಳನ್ನು ಮೀರಿ ದೇಶದ ಪ್ರತಿಯೊಬ್ಬರೂ ತಮ್ಮ ಸಾಂವಿಧಾನಿಕ ಹಕ್ಕುಗಳು ಮತ್ತು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಿರುವ ಮಾರ್ಗದಲ್ಲಿ ಹೆಜ್ಜೆಯಿಡಲು ಇಂದು ಸಾಧ್ಯವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
Published: 22nd December 2020 01:07 PM | Last Updated: 22nd December 2020 01:17 PM | A+A A-

ಪ್ರಧಾನಿ ಮೋದಿ
ಆಲಿಘಢ: ಧರ್ಮ, ಜಾತಿ, ವರ್ಗಗಳನ್ನು ಮೀರಿ ದೇಶದ ಪ್ರತಿಯೊಬ್ಬರೂ ತಮ್ಮ ಸಾಂವಿಧಾನಿಕ ಹಕ್ಕುಗಳು ಮತ್ತು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಿರುವ ಮಾರ್ಗದಲ್ಲಿ ಹೆಜ್ಜೆಯಿಡಲು ಇಂದು ಸಾಧ್ಯವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮವನ್ನು ಇಂದು ವರ್ಚುವಲ್ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದ ಅವರು, ಬಡವರ ಪರ ಇರುವ ತಮ್ಮ ಸರ್ಕಾರದ ಯೋಜನೆಗಳು ಎಲ್ಲಾ ವರ್ಗಗಳನ್ನು ತಲುಪುತ್ತಿವೆ. ಇಲ್ಲಿ ಯಾವುದೇ ಧರ್ಮ, ಜಾತಿಯ ತಾರತಮ್ಯ ಮಾಡುವುದಿಲ್ಲ, ದೇಶದ ಬೆಳವಣಿಗೆ, ಅಭಿವೃದ್ಧಿಯ ವಿಚಾರ ಬಂದಾಗ ಸೈದ್ದಾಂತಿಕ ಭಿನ್ನಾಭಿಪ್ರಾಯಗಳನ್ನು ಮರೆಯುವುದು ಮುಖ್ಯವಾಗುತ್ತದೆ ಎಂದರು.
ಯಾವುದೇ ತಾರತಮ್ಯವಿಲ್ಲದೆ ಸರ್ಕಾರದ ಯೋಜನೆಗಳ ಲಾಭಗಳು ಎಲ್ಲಾ ವರ್ಗಗಳ ಜನರನ್ನು ತಲುಪುವತ್ತ ದೇಶ ಮುನ್ನಡೆಯುತ್ತಿದೆ. ಧರ್ಮದಿಂದಾಗಿ ಯಾರು ಕೂಡ ಹಿಂದೆ ಬೀಳಬಾರದು ಎಂಬ ತತ್ವದಡಿಯಲ್ಲಿ ನಾವು ಮುಂದುವರಿಯುತ್ತಿದ್ದು ಪ್ರತಿಯೊಬ್ಬರೂ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗಬೇಕು ಎಂದು ಹೇಳಿದರು.
ನಾವು ಯಾವುದೇ ಧರ್ಮದಲ್ಲಿ ಜನಿಸಿದರೂ, ನಮ್ಮ ಆಕಾಂಕ್ಷೆಗಳನ್ನು ರಾಷ್ಟ್ರೀಯ ಗುರಿಗಳೊಂದಿಗೆ ಹೇಗೆ ಬೆರೆಸಬೇಕು ಎಂಬುದನ್ನು ನೋಡಬೇಕು. ಸಮಾಜದಲ್ಲಿ ಸೈದ್ಧಾಂತಿಕ ವಿಭಜನೆಗಳಿರಬಹುದು ಆದರೆ ರಾಷ್ಟ್ರದ ಅಭಿವೃದ್ಧಿಯ ವಿಷಯಕ್ಕೆ ಬಂದರೆ ಉಳಿದವೆಲ್ಲವೂ ದ್ವಿತೀಯವಾಗಬೇಕು. ರಾಷ್ಟ್ರದ ವಿಷಯಕ್ಕೆ ಬಂದಾಗ, ಸೈದ್ಧಾಂತಿಕ ಭಿನ್ನತೆಗಳ ಪ್ರಶ್ನೆಯೇ ಇಲ್ಲ. ಆಲಿಘಡ ವಿಶ್ವವಿದ್ಯಾಲಯವು ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಸೃಷ್ಟಿ ಮಾಡಿದೆ, ಇಲ್ಲಿಯವರು ತಮ್ಮ ಸೈದ್ಧಾಂತಿಕ ಭಿನ್ನತೆಗಳನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಬದಿಗಿಟ್ಟರು. ಸ್ವಾತಂತ್ರ್ಯವು ಅವರನ್ನು ಒಂದುಗೂಡಿಸಿದಂತೆ, ನಯ ಭಾರತದ ವಿಷಯಕ್ಕೆ ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕಾಗಿದೆ ಎಂದರು.
ರಾಜಕೀಯ ಪ್ರಗತಿಯ ಮೂಲಕ ದೇಶದ ಪ್ರಗತಿಯನ್ನು ಕಾಣಬಾರದು ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ನಮ್ಮ ಗುರಿ ಸಾಧನೆಗಾಗಿ ಒಗ್ಗೂಡಿದಾಗ, ನಮ್ಮಲ್ಲಿರುವ ನಕಾರಾತ್ಮಕ ಅಂಶಗಳು ದೂರವಾಗುತ್ತವೆ. ರಾಜಕೀಯ ಮತ್ತು ಸಮಾಜವು ಕಾಯಬಹುದು ಆದರೆ ದೇಶದ ಅಭಿವೃದ್ಧಿ ಕಾಯಲು ಸಾಧ್ಯವಿಲ್ಲ. ಕಳೆದ ಶತಮಾನದಲ್ಲಿ ವ್ಯತ್ಯಾಸಗಳ ಮೇಲೆ ಸಾಕಷ್ಟು ಸಮಯ ಕಳೆದುಹೋಗಿದೆ. ಕಳೆದುಕೊಳ್ಳಲು ಹೆಚ್ಚು ಸಮಯವಿಲ್ಲ ಈಗ ಎಂದರು.
ಸ್ವಾತಂತ್ರ್ಯ ಪೂರ್ವದ ಮೊಹಮ್ಮದನ್ ಆಂಗ್ಲೋ-ಓರಿಯಂಟಲ್ ಕಾಲೇಜು 1920 ರ ಡಿಸೆಂಬರ್ 1 ರಂದು ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯವಾಯಿತು. ಎಎಂಯು ಔಪಚಾರಿಕವಾಗಿ ಅದೇ ವರ್ಷ ಡಿಸೆಂಬರ್ 17 ರಂದು ವಿಶ್ವವಿದ್ಯಾಲಯವಾಗಿ ಉದ್ಘಾಟಿಸಲ್ಪಟ್ಟಿತು.