ರೈತ ದಿನಾಚರಣೆ: 'ಒಂದು ಹೊತ್ತಿನ ಊಟ ಬಿಟ್ಟು ನಮಗೆ ಬೆಂಬಲ ನೀಡಿ' ಎಂದ ಪ್ರತಿಭಟನಾಕಾರರು, ಚೌಧರಿ ಚರಣ್ ಸಿಂಗ್ ಗೆ ಗೌರವ ನಮನ 

ನೂತನ ಕೃಷಿ ಮಸೂದೆಯನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ದೆಹಲಿ ಗಡಿಭಾಗಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಬುಧವಾರ 26ನೇ ದಿನಕ್ಕೆ ಕಾಲಿಟ್ಟಿದೆ.
ಸಿಂಘು ಗಡಿಭಾಗದಲ್ಲಿ ಮುಂದುವರಿದ ರೈತರ ಪ್ರತಿಭಟನೆ
ಸಿಂಘು ಗಡಿಭಾಗದಲ್ಲಿ ಮುಂದುವರಿದ ರೈತರ ಪ್ರತಿಭಟನೆ

ನವದೆಹಲಿ: ನೂತನ ಕೃಷಿ ಮಸೂದೆಯನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ದೆಹಲಿ ಗಡಿಭಾಗಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಬುಧವಾರ 26ನೇ ದಿನಕ್ಕೆ ಕಾಲಿಟ್ಟಿದೆ.

ಇಂದು ದೇಶಾದ್ಯಂತ ರೈತ ದಿನವನ್ನು ಆಚರಿಸಲಾಗುತ್ತಿದ್ದು, ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜಯಂತಿಯ ಅಂಗವಾಗಿ ರೈತರು ಇಂದು ಒಂದು ಹೊತ್ತಿನ ಊಟವನ್ನು ಬಿಟ್ಟು ತಮ್ಮ ಪ್ರತಿಭಟನೆಗೆ ಬೆಂಬಲ ನೀಡಬೇಕೆಂದು ಪ್ರತಿಭಟನಾ ನಿರತ ರೈತರು ಮನವಿ ಮಾಡಿದ್ದಾರೆ.

ಇಂದು ಬೆಳಗ್ಗೆ ದೆಹಲಿಯಲ್ಲಿರುವ ಕಿಸಾನ್ ಘಾಟ್ ಗೆ ಭೇಟಿ ನೀಡಿದ ಹಲವು ರೈತರು ಚೌಧರಿ ಚರಣ್ ಸಿಂಗ್ ಅವರಿಗೆ ಗೌರವ ನಮನ ಸಲ್ಲಿಸಿದರು. ಸರ್ಕಾರ ರೈತರ ಜೊತೆ ಹೊಸ ಮಾತುಕತೆಗೆ ಪ್ರಸ್ತಾಪ ಮುಂದಿಟ್ಟಿದ್ದು ಈ ನಿಟ್ಟಿನಲ್ಲಿ ಮುಂದೆ ಏನು ಕ್ರಮ ಕೈಗೊಳ್ಳಬೇಕು ಎಂಬ ಕುರಿತು ಚರ್ಚೆ ನಡೆಸಲು ರೈತರ ಸಭೆ ಇಂದು ಅಪರಾಹ್ನ ನಡೆಯಲಿದೆ.

ಕಳೆದ ಭಾನುವಾರ ಕೇಂದ್ರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಮಾರು 40 ರೈತ ಒಕ್ಕೂಟಗಳ ನಾಯಕರಿಗೆ ಪತ್ರ ಬರೆದು, ಸರ್ಕಾರದ ಈ ಹಿಂದಿನ ಮಸೂದೆ ತಿದ್ದುಪಡಿ ಕುರಿತು ತಮಗೆ ಏನು ಕಳವಳವಿದೆ, ಅಸಮಾಧಾನಗಳಿವೆ ಎಂದು ತಿಳಿಸುವಂತೆ ಹಾಗೂ ಮುಂದಿನ ಸುತ್ತಿನ ಮಾತುಕತೆಗೆ ಅನುಕೂಲಕರ ದಿನಾಂಕವನ್ನು ನಿಗದಿಪಡಿಸುವಂತೆ ಸೂಚಿಸಿದ್ದರು.

ನಿನ್ನೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್, ಪ್ರತಿಭಟನಾ ನಿರತ ರೈತ ಸಂಘಟನೆಗಳು ಸದ್ಯದಲ್ಲಿಯೇ ತಮ್ಮ ಆಂತರಿಕ ಚರ್ಚೆಗಳನ್ನು ಮುಗಿಸಿ ಸರ್ಕಾರದೊಂದಿಗೆ ಮಾತುಕತೆಗೆ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ರೈತ ಸಂಘಟನೆಗಳು ಇಂದಿನಿಂದ ನಾಡಿದ್ದು ಶನಿವಾರದವರೆಗೆ ಶಹೀದಿ ದಿವಸವನ್ನು ಆಚರಿಸಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com