ವಯಸ್ಕಳು ತನ್ನ ಇಚ್ಛೆಯಂತೆ ಮದುವೆಯಾಗಿ ಮತಾಂತರಗೊಂಡರೆ ಯಾರೂ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ: ಕೋಲ್ಕತ್ತಾ ಹೈಕೋರ್ಟ್
ವಯಸ್ಕ ಹೆಣ್ಣು ಮಗಳು ತನ್ನ ಇಚ್ಛೆಯಂತೆ ಮದುವೆಯಾಗಿ ಧರ್ಮ ಮತಾಂತರಗೊಂಡರೆ ಯಾರೂ ಹಸ್ತಕ್ಷೇಪ ಮಾಡಿ ತಡೆಯಲು ಸಾಧ್ಯವಿಲ್ಲ ಎಂದು ಕೋಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿದೆ.
Published: 23rd December 2020 02:37 PM | Last Updated: 23rd December 2020 02:37 PM | A+A A-

ಕೋಲ್ಕತ್ತಾ ಹೈಕೋರ್ಟ್
ಕೋಲ್ಕತ್ತಾ: ವಯಸ್ಕ ಹೆಣ್ಣು ಮಗಳು ತನ್ನ ಇಚ್ಛೆಯಂತೆ ಮದುವೆಯಾಗಿ ಧರ್ಮ ಮತಾಂತರಗೊಂಡರೆ ಯಾರೂ ಹಸ್ತಕ್ಷೇಪ ಮಾಡಿ ತಡೆಯಲು ಸಾಧ್ಯವಿಲ್ಲ ಎಂದು ಕೋಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿದೆ.
19 ವರ್ಷದ ಯುವತಿ ಅನ್ಯಧರ್ಮೀಯ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದಳು. ನಂತರ ಕೋಲ್ಕತ್ತಾ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ಆಕೆಯ ತಂದೆ, ತಮ್ಮ ಮಗಳ ಮೇಲೆ ಪ್ರಭಾವ ಬೀರಿ ಅನ್ಯ ಧರ್ಮದ ವ್ಯಕ್ತಿ ಮದುವೆಯಾಗಿದ್ದು, ತನ್ನ ಮಗಳ ಹೇಳಿಕೆಯನ್ನು ಮ್ಯಾಜಿಸ್ಟ್ರೇಟರ ಮುಂದೆ ದಾಖಲು ಸಹ ಮಾಡಿಕೊಳ್ಳಲು ಬಿಡಲಿಲ್ಲ ಎಂದು ಆರೋಪಿಸಿದ್ದರು.
ಯುವತಿಯ ತಂದೆ ಸಲ್ಲಿಸಿದ ಎಫ್ಐಆರ್ ಪ್ರಕಾರ, ಪೊಲೀಸರು ಯುವತಿಯನ್ನು ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದಾಗ ಆಕೆ ತನ್ನ ಇಷ್ಟದ ಪ್ರಕಾರವೇ ಮದುವೆಯಾಗಿರುವುದಾಗಿ ತಿಳಿಸಿದಳು.
ವಯಸ್ಕ ಹೆಣ್ಣುಮಗಳು ಆಕೆಯ ಆಯ್ಕೆ ಪ್ರಕಾರ ಮದುವೆಯಾಗಿ ಪತಿಯ ಧರ್ಮಕ್ಕೆ ಮತಾಂತರವಾಗಲು ಬಯಸಿದರೆ ಮತ್ತು ತನ್ನ ತಾಯಿಯ ಮನೆಗೆ ಹಿಂತಿರುಗಲು ಮನಸ್ಸು ತೋರದಿದ್ದರೆ ಆಕೆಯ ನಿರ್ಧಾರವನ್ನು ತಡೆಯಲು ಅಥವಾ ಬದಲಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಿಬ್ ಬ್ಯಾನರ್ಜಿ ಮತ್ತು ಅರಿಜಿತ್ ಬ್ಯಾನರ್ಜಿ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.