ನ್ಯುಮೋನಿಯಾ ವಿರುದ್ಧ ಸ್ವದೇಶಿ ಲಸಿಕೆ ಅಭಿವೃದ್ಧಿಪಡಿಸಿದ ಪುಣೆಯ ಸೆರಂ ಇನ್ಸ್ಟಿಟ್ಯೂಟ್, ಮುಂದಿನ ವಾರ ಬಿಡುಗಡೆ

ನ್ಯುಮೋನಿಯಾ ವಿರುದ್ಧ ಹೋರಾಡುವ ಮೊದಲ ದೇಶೀಯ ಲಸಿಕೆಯನ್ನು ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಅಭಿವೃದ್ಧಿಪಡಿಸಿದ್ದು, ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಅದನ್ನು ಬಿಡುಗಡೆ ಮಾಡಲಿದ್ದಾರೆ. ಮುಂದಿನ ವಾರ ದೇಶೀಯ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ನ್ಯುಮೋನಿಯಾ ವಿರುದ್ಧ ಹೋರಾಡುವ ಮೊದಲ ದೇಶೀಯ ಲಸಿಕೆಯನ್ನು ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ(ಎಸ್ಐಐ) ಅಭಿವೃದ್ಧಿಪಡಿಸಿದ್ದು, ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಅದನ್ನು ಬಿಡುಗಡೆ ಮಾಡಲಿದ್ದಾರೆ. ಮುಂದಿನ ವಾರ ದೇಶೀಯ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈಗ ಎರಡು ವಿದೇಶಿ ಕಂಪೆನಿಗಳು ಉತ್ಪಾದನೆ ಮಾಡಿ ಮಾರಾಟ ಮಾಡುವ ಲಸಿಕೆಗಳಿಗಿಂತ ಅಗ್ಗದ ದರದಲ್ಲಿ ಸೆರಂ ಇನ್ಸ್ ಟಿಟ್ಯೂಟ್ ನ ಲಸಿಕೆ ದೊರಕಲಿದೆ ಎಂದು ತಿಳಿದುಬಂದಿದೆ.

ನ್ಯುಮೋನಿಯಾ ವಿರುದ್ಧ ಸೆಣಸಾಡುವ ಲಸಿಕೆ ಅಭಿವೃದ್ಧಿಗೆ ಸೆರಂ ಸಂಸ್ಥೆಗೆ ಕಳೆದ ಜುಲೈ ತಿಂಗಳಲ್ಲಿ ಭಾರತದ ಔಷಧ ಪ್ರಾಧಿಕಾರ ಮಾರುಕಟ್ಟೆಯ ಅನುಮತಿ ನೀಡಿತ್ತು. ಮೋಕೊಕಲ್ ಪಾಲಿಸ್ಯಾಕರೈಡ್ ಕಾಂಜುಗೇಟ್ ಲಸಿಕೆ ಎಂದು ಕರೆಯಲಾಗುತ್ತಿದ್ದು ಈಗಾಗಲೇ ಮೊದಲ, ಎರಡನೇ ಮತ್ತು ಮೂರನೇ ಹಂತದ ಪರಾಮರ್ಶೆಯನ್ನು ಭಾರತ ಮತ್ತು ಆಫ್ರಿಕಾ ರಾಷ್ಟ್ರ ಗಾಂಬಿಯಾದಲ್ಲಿ ನಡೆಸಿ ಪ್ರಾಯೋಗಿಕ ಅಂಕಿಅಂಶವನ್ನು ಸಲ್ಲಿಸಲಾಗಿದೆ.

ಈ ಲಸಿಕೆಯನ್ನು ಶಿಶುಗಳಲ್ಲಿ "ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾ" ದಿಂದ ಉಂಟಾಗುವ ಆಕ್ರಮಣಕಾರಿ ಕಾಯಿಲೆ ಮತ್ತು ನ್ಯುಮೋನಿಯಾ ವಿರುದ್ಧ ಸಕ್ರಿಯ ರೋಗನಿರೋಧಕ ಶಕ್ತಿಗಾಗಿ ಬಳಸಲಾಗುತ್ತದೆ ಎಂದು ಆರೋಗ್ಯ ಸಚಿವಾಲಯ ಈ ಹಿಂದೆ ತಿಳಿಸಿತ್ತು.

ನ್ಯುಮೋನಿಯಾ ವಿರುದ್ಧ ಸ್ವದೇಶಿಯವಾಗಿ ಅಭಿವೃದ್ಧಿಪಡಿಸಿದ ಮೊದಲ ಲಸಿಕೆ ಇದಾಗಿದೆ. ಈಗ ಮಾರುಕಟ್ಟೆಯಲ್ಲಿ ಸಿಗುವ ಫಿಜರ್ (ಎನ್ವೈಎಸ್ಇ: ಪಿಎಫ್ಇ) ಮತ್ತು ಗ್ಲಾಕ್ಸೊ ಸ್ಮಿತ್ಕ್ಲೈನ್ (ಎಲ್ಎಸ್ಇ: ಜಿಎಸ್ಕೆ)ಲಸಿಕೆಗಳಿಗಿಂತ ಹೆಚ್ಚು ಕೈಗೆಟಕುವ ದರದಲ್ಲಿ ಈ ಲಸಿಕೆ ಸಿಗಲಿದೆ. 

ಪ್ರಧಾನ ಮಂತ್ರಿಯವರ ಮೇಕ್ ಇನ್ ಇಂಡಿಯಾ, ಸ್ಥಳೀಯತೆಗೆ ಆದ್ಯತೆ, ಆತ್ಮನಿರ್ಭರ ಕನಸನ್ನು ಈ ಲಸಿಕೆ ಸಾಕಾರಗೊಳಿಸಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com