ಗಣರಾಜ್ಯೋತ್ಸವ ಪರೇಡ್ ಮೇಲೆ ಕೋವಿಡ್ ಕರಿನೆರಳು; ದೆಹಲಿಯಲ್ಲಿ 150 ಮಂದಿ ಸೈನಿಕರಿಗೆ ಕೊರೋನಾ ಸೋಂಕು

ಗಣರಾಜ್ಯೋತ್ಸವ ಪರೇಡ್ ಪಾಲ್ಗೊಳ್ಳಲು ದೆಹಲಿಯಲ್ಲಿ ಸಿದ್ಧತೆ ನಡೆಸಿದ್ದ ಸೈನಿಕರ ಪೈಕಿ 150 ಮಂದಿ ಸೈನಿಕರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಗಣರಾಜ್ಯೋತ್ಸವ ಪರೇಡ್ ಪಾಲ್ಗೊಳ್ಳಲು ದೆಹಲಿಯಲ್ಲಿ ಸಿದ್ಧತೆ ನಡೆಸಿದ್ದ ಸೈನಿಕರ ಪೈಕಿ 150 ಮಂದಿ ಸೈನಿಕರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ.

ಹೌದು.. ಗಣರಾಜ್ಯೋತ್ಸವ ಮತ್ತು ಸೇನಾ ದಿನದ ಮೆರವಣಿಗೆಯಲ್ಲಿ ಭಾಗವಹಿಸಲು ದೇಶದ ವಿವಿಧೆಡೆಯಿಂದ ಕಳೆದ ವಾರ ದೆಹಲಿಗೆ ಆಗಮಿಸಿದ್ದ ಸಾವಿರಾರು ಸೈನಿಕರ ಪೈಕಿ 150 ಸೇನಾ ಸಿಬ್ಬಂದಿಗೆ ಕೋವಿಡ್ 19 ಸೋಕು ತಗುಲಿರುವುದು ಧೃಡಪಟ್ಟಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ನೀಡಿದ್ದು,  2 ಮೆರವಣಿಗೆಯಲ್ಲಿ ಭಾಗವಹಿಸುವ ಎಲ್ಲ ಸಿಬ್ಬಂದಿಯ ಸುರಕ್ಷತಾ ದೃಷ್ಟಿಯಿಂದ ರೂಪಿಸಲಾದ ಕಟ್ಟುನಿಟ್ಟಾದ ಪ್ರೋಟೋಕಾಲ್ ಅಡಿ ಕೋವಿಡ್ 19 ಕಡ್ಡಾಯ ಪರೀಕ್ಷೆಯ ಸಮಯದಲ್ಲಿ ಸೇನಾ ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ನವೆಂಬರ್ ತಿಂಗಳಾಂತ್ಯದಿಂದ 2,000ಕ್ಕೂ ಅಧಿಕ ಸೇನಾ ಸಿಬ್ಬಂದಿ ಗಣರಾಜ್ಯೋತ್ಸವ ಮತ್ತು ಸೇನಾ ದಿನದ ಮೆರವಣಿಗೆಯಲ್ಲಿ ಭಾಗವಹಿಸಲು ವಿವಿಧ ಸಾರಿಗೆ ಮೂಲಕ ದೆಹಲಿಗೆ ಆಗಮಿಸಿದ್ದಾರೆ. ಅವರನ್ನು ಸುರಕ್ಷಿತ ಚೌಕಟ್ಟಿಗೆ ಸೇರಿಸುವ ಮುನ್ನ ಅವರೆಲ್ಲರೂ ಕೋವಿಡ್ 19 ಪರೀಕ್ಷೆಗೆ ಒಳಪಡಬೇಕಿದೆ. ಯಾರಿಗೆಲ್ಲ  ಕೋವಿಡ್ 19 ನೆಗೆಟಿವ್ ಬಂದಿದೆಯೋ ಅವರನ್ನೆಲ್ಲ ಮೆರವಣಿಗೆಯಲ್ಲಿ ಭಾಗವಹಿಸುವ ಸೇನಾ ಸಿಬ್ಬಂದಿ ಉಳಿದುಕೊಳ್ಳಲೆಂದೇ ವ್ಯವಸ್ಥೆ ಮಾಡಲಾಗಿರುವ ಸುರಕ್ಷಿತ ಪ್ರದೇಶ (ಸೇಫ್ ಬಬಲ್)ಕ್ಕೆ ಕಳುಹಿಸಲಾಗುತ್ತಿದೆ. 

ಮೂಲಗಳ ಪ್ರಕಾರ ಕಂಟೋನ್ಮೆಂಟ್ ಪ್ರದೇಶದಲ್ಲಿ ಸೇಫ್ ಬಬಲ್ ವ್ಯವಸ್ಥೆ ಮಾಡಲಾಗಿದ್ದು, ಈ ವಿಶಾಲ ಕ್ಯಾಂಪಸ್‌ನಲ್ಲಿ ಉಳಿಯುವ ಸೇನಾ ಸಿಬ್ಬಂದಿ ಗಣರಾಜ್ಯೋತ್ಸವದ ಆಚರಣೆ ಮುಗಿಯುವವರೆಗೂ ಹೊರಜಗತ್ತಿನ ಜೊತೆ ಸಂಪರ್ಕ ಹೊಂದಿರುವುದಿಲ್ಲ. ಜನವರಿ 15ಕ್ಕೆ ಸೇನಾ ದಿನ ಆಚರಣೆ ಮಾಡಲಾಗುತ್ತಿದ್ದು,  ಕೋವಿಡ್ 19 ಪಾಸಿಟಿವ್ ಬಂದಿರುವ ಸೇನಾ ಸಿಬ್ಬಂದಿ ಅಷ್ಟರೊಳಗೆ ಕ್ವಾರಂಟೈನ್ ಮುಗಿಸಿಕೊಂಡು ಚೇತರಿಸಿಕೊಂಡು ಸೇಫ್ ಬಬಲ್ ಸೇರಬಹುದಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com