'ವಿರೋಧಿಗಳನ್ನು ಟಾರ್ಗೆಟ್ ಮಾಡಲು ಕೇಂದ್ರ ತನಿಖಾ ಸಂಸ್ಥೆಗಳ ಬಳಕೆ': ಪತ್ನಿಗೆ ಇಡಿ ಸಮನ್ಸ್ ಗೆ ಸಂಜಯ್ ರೌತ್ ಕಿಡಿ
ತಮ್ಮ ಪತ್ನಿಗೆ ಜಾರಿ ನಿರ್ದೇಶನಾಲಯ(ಇಡಿ) ಸಮನ್ಸ್ ನೀಡಿದ ನಂತರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶಿವಸೇನೆ ಸಂಸದ ಸಂಜಯ್ ರೌತ್ ಅವರು, ರಾಜಕೀಯ ವಿರೋಧಿಗಳ ಕುಟುಂಬ ಸದಸ್ಯರ...
Published: 28th December 2020 04:16 PM | Last Updated: 28th December 2020 04:20 PM | A+A A-

ಶಿವಸೇನಾ ಸಂಸದ ಸಂಜಯ್ ರೌತ್
ಮುಂಬೈ: ತಮ್ಮ ಪತ್ನಿಗೆ ಜಾರಿ ನಿರ್ದೇಶನಾಲಯ(ಇಡಿ) ಸಮನ್ಸ್ ನೀಡಿದ ನಂತರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶಿವಸೇನೆ ಸಂಸದ ಸಂಜಯ್ ರೌತ್ ಅವರು, ರಾಜಕೀಯ ವಿರೋಧಿಗಳ ಕುಟುಂಬ ಸದಸ್ಯರ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳನ್ನು "ಅಸ್ತ್ವವಾಗಿ" ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕಳೆದ ವರ್ಷ ಮಹಾ ವಿಕಾಸ್ ಅಘಾಡಿ(ಎಂವಿಎ) ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದೆ ಮತ್ತು ಅದನ್ನು ಅಸ್ಥಿರಗೊಳಿಸುವ ಒತ್ತಡಕ್ಕೆ ಮಣಿಯದ ಕಾರಣ ಇಡಿ ಸಮನ್ಸ್ ನೀಡಿದ್ದು, ಇದು ಬಿಜೆಪಿ "ಹತಾಶೆಯನ್ನೆ" ಪ್ರತಿಬಿಂಬಿಸುತ್ತದೆ ಎಂದು ರೌತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದಕ್ಕೆ ಶಿವಸೇನಾ ತಕ್ಕ ಪ್ರತಿಕ್ರಿಯೆ ನೀಡುತ್ತದೆ ಎಂದಿರುವ ರೌತ್, "ನನ್ನ ಹೆಂಡತಿ ಹತ್ತು ವರ್ಷಗಳ ಹಿಂದೆ ಸ್ನೇಹಿತರಿಂದ ಮನೆ ಖರೀದಿಸಲು ತೆಗೆದುಕೊಂಡ 50 ಲಕ್ಷ ರೂಪಾಯಿ ಸಾಲಕ್ಕೆ ಸಂಬಂಧಿಸಿದಂತೆ ಕಳೆದ ಒಂದೂವರೆ ತಿಂಗಳಿನಿಂದ ನಾನು ಜಾರಿ ನಿರ್ದೇಶನಾಲಯದೊಂದಿಗೆ(ಇಡಿ) ನಿಯಮಿತವಾಗಿ ಪತ್ರವ್ಯವಹಾರ ಮಾಡುತ್ತಿದ್ದೇನೆ" ಎಂದು ಹೇಳಿದ್ದಾರೆ.
ಈ ಸಾಲಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಈಗಾಗಲೇ ಪತ್ರವ್ಯವಹಾರದ ಸಮಯದಲ್ಲಿ ಇಡಿಗೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಯುವಸೇನಾ ಅಧ್ಯಕ್ಷ ಮತ್ತು ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಅವರು ಸಹ ಶಿವಸೇನಾ ಸಂಸದ ಸಂಜಯ್ ರೌತ್ ಅವರ ಪತ್ನಿಗೆ ಇಡಿ ನೀಡಿರುವ ಸಮನ್ಸ್ "ರಾಜಕೀಯ ಪ್ರೇರಿತ" ಎಂದು ಹೇಳಿದ್ದಾರೆ.
ಪಿಎಂಸಿ ಬ್ಯಾಂಕ್ ಹಣ ವರ್ಗಾವಣೆ ಪ್ರಕರಣದ ಸಂಬಂಧ ಡಿಸೆಂಬರ್ 29 ರಂದು ವಿಚಾರಣೆಗೆ ಹಾಜರಾಗುವಂತೆ ವರ್ಷಾ ರೌತ್ ಅವರಿಗೆ ಸಮನ್ಸ್ ನೀಡಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.