ನಾಳೆ ಸಿಬಿಎಸ್‌ಇ ಪರೀಕ್ಷಾ ವೇಳಾಪಟ್ಟಿ ಪ್ರಕಟ: ಕೇಂದ್ರ ಸಚಿವ ಪೋಖ್ರಿಯಾಲ್
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಇ)ಯು 10 ಹಾಗೂ 12 ತರಗತಿಯ ಪರೀಕ್ಷಾ ವೇಳಾಪಟ್ಟಿಯನ್ನು ಗುರುವಾರ ಪ್ರಕಟಿಸುವುದಾಗಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಹೇಳಿದ್ದಾರೆ.
Published: 30th December 2020 07:08 PM | Last Updated: 30th December 2020 07:08 PM | A+A A-

ರಮೇಶ್ ಪೋಖ್ರಿಯಾಲ್
ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಇ)ಯು 10 ಹಾಗೂ 12 ತರಗತಿಯ ಪರೀಕ್ಷಾ ವೇಳಾಪಟ್ಟಿಯನ್ನು ಗುರುವಾರ ಪ್ರಕಟಿಸುವುದಾಗಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಆತ್ಮೀಯ ವಿದ್ಯಾರ್ಥಿಗಳೇ ಮತ್ತು ಪೋಷಕರೇ, ಡಿ. 31ರಂದು ಸಂಜೆ 6 ಗಂಟೆಗೆ 2020-2021ನೇ ಸಾಲಿನ ಸಿಬಿಎಸ್‌ಇ ಮಂಡಳಿ ಪರೀಕ್ಷೆಗಳ ಆರಂಭದ ದಿನಾಂಕವನ್ನು ಪ್ರಕಟಿಸಲಿದ್ದೇನೆ" ಎಂದು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮುನ್ನ ಶಿಕ್ಷಕರೊಂದಿಗೆ ವರ್ಚ್ಯುವಲ್ ಮೂಲಕ ಸಂವಾದ ನಡೆಸಿದ ಅವರು, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಸಲಹೆಗಳನ್ನು ಪಡೆದ ನಂತರ 2021ರ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಮಂಡಳಿ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ ಎಂದಿದ್ದಾರೆ.
ಸಿಬಿಎಸ್‌ಇ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸಲಾಗುವುದಿಲ್ಲ ಮತ್ತು ಕೋವಿಡ್ -19 ಪ್ರೋಟೋಕಾಲ್‌ಗಳಿಗೆ ಅನುಸಾರವಾಗಿ ಪರೀಕ್ಷೆ ನಡೆಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವರು ಸ್ಪಷ್ಟಪಡಿಸಿದ್ದಾರೆ.