ರೈತರು ಅನ್ನದಾತರು, ಸರ್ಕಾರ ಅವರಿಗೆ ವಿರುದ್ಧವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ: ರಾಜನಾಥ್ ಸಿಂಗ್

ರೈತರು ನಮ್ಮ ಅನ್ನದಾತರು, ಈ ದೇಶದ ಆರ್ಥಿಕತೆಯ ಬೆನ್ನೆಲುಬು ಹೀಗಿರುವಾಗ ಯಾರೂ ಕೂಡ ಪ್ರತಿಭಟನಾ ನಿರತರ ರೈತರನ್ನು ನಕ್ಸಲೀಯರು ಅಥವಾ ಖಲಿಸ್ತಾನಿಯರು ಎಂದು ಕೆಟ್ಟದಾಗಿ ಉಲ್ಲೇಖಿಸಬಾರದು, ರೈತರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ನವದೆಹಲಿ: ರೈತರು ನಮ್ಮ ಅನ್ನದಾತರು, ಈ ದೇಶದ ಆರ್ಥಿಕತೆಯ ಬೆನ್ನೆಲುಬು ಹೀಗಿರುವಾಗ ಯಾರೂ ಕೂಡ ಪ್ರತಿಭಟನಾ ನಿರತರ ರೈತರನ್ನು ನಕ್ಸಲೀಯರು ಅಥವಾ ಖಲಿಸ್ತಾನಿಯರು ಎಂದು ಕೆಟ್ಟದಾಗಿ ಉಲ್ಲೇಖಿಸಬಾರದು, ರೈತರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಎಎನ್ಐ ಸುದ್ದಿಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅವರು, ರೈತರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಕೃಷಿ ಕಾಯ್ದೆ ತರಲಾಗಿದೆ. ಅವು ಜಾರಿಗೆ ಬರಲು ಎರಡು ವರ್ಷಗಳು ಬೇಕು. ರೈತರು ನಡೆಸುತ್ತಿರುವ ಪ್ರತಿಭಟನೆಯಿಂದ ಸರ್ಕಾರಕ್ಕೆ ತೀವ್ರ ಬೇಸರವಾಗಿದೆ ಎಂದರು.

ಪ್ರತಿಭಟನಾ ನಿರತ ರೈತರು ನಕ್ಸಲರು, ಖಲಿಸ್ತಾನೀಯರು ಎಂಬೆಲ್ಲ ಆರೋಪಗಳು ಕೇಳಿಬರುತ್ತಿವೆಯಲ್ಲಾ ಎಂದು ಕೇಳಿದಾಗ, ರೈತರ ವಿರುದ್ಧ ಯಾರೂ ಕೂಡ ಆರೋಪ ಮಾಡಬಾರದು. ರೈತರ ಬಗ್ಗೆ ನಾವು ಗೌರವ ತೋರಿಸಬೇಕು. ದೇಶದ ವಿಚಾರ ಬಂದಾಗ ಸೈನಿಕರು ಮತ್ತು ರೈತರು ಎಂದ ಕೂಡಲೇ ನಮ್ಮ ತಲೆಬಾಗಬೇಕು. ರೈತರು ಅನ್ನದಾತರು, ದೇಶದ ಆರ್ಥಿಕತೆ ಸಂಕಷ್ಟದಲ್ಲಿರುವಾಗ ರೈತರು ಅದರಿಂದ ಹೊರತರಲು ನೋಡುತ್ತಾರೆ, ಅವರು ಆರ್ಥಿಕತೆಯ ಬೆನ್ನೆಲುಬು ಎಂದರು.

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಸರ್ಕಾರ ಜೊತೆಗೆ ತಾತ್ವಿಕ ಚರ್ಚೆಗೆ ಮುಂದಾಗಬೇಕು, ರೈತರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಎಂದು ಅನಿಸಿದರೆ ಅವರ ಪ್ರತಿಯೊಂದು ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಸಿದ್ದವಿದೆ ಎಂದರು.

ಸರ್ಕಾರ ಯಾವತ್ತಿಗೂ ದೇಶದ ಬಡವರು, ನಿರ್ಗತಿಕರು ಮತ್ತು ಕಷ್ಟದಲ್ಲಿರುವವರ ಪರವಾಗಿ ಕೆಲಸ ಮಾಡಲು ಮುಂದಾಗಿದೆ. ರೈತರ ಮಧ್ಯೆ ಕೆಲವು ತಪ್ಪು ಗ್ರಹಿಕೆಯನ್ನು ಸೃಷ್ಟಿಸಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ. ಬುದ್ಧಿವಂತಿಕೆಯಿಂದ ಸರ್ಕಾರದ ಜೊತೆ ತಾತ್ವಿಕ ಚರ್ಚೆಗೆ ಮುಂದೆ ಬನ್ನಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ ಎಂಬುದೊಂದೇ ನನ್ನ ಮನವಿ. ಸರ್ಕಾರದ ಕಾಯ್ದೆ ಬಗ್ಗೆ ನನಗೆ ಅರಿವಿದೆ, ರೈತರ ಸಮಸ್ಯೆಗಳ ಬಗ್ಗೆಯೂ ತಿಳಿದುಕೊಂಡಿದ್ದೇನೆ. ಈ ನೂತನ ಕಾಯ್ದೆಗಳನ್ನು ಪ್ರಾಯೋಗಿಕ ಮಾದರಿಯಲ್ಲಿ ಎರಡು ವರ್ಷಗಳ ಕಾಲ ಜಾರಿಗೆ ತರುವುದನ್ನು ರೈತರು ನೋಡಬೇಕು. ಅಗತ್ಯವಿದ್ದರೆ ಕಾಯ್ದೆಗೆ ತಿದ್ದುಪಡಿ ಮಾಡೋಣ, ಈ ಬಗ್ಗೆ ತಜ್ಞರ ಜೊತೆ ಮಾತುಕತೆ ನಡೆಸಬೇಕೆಂದು ರೈತರು ಬಯಸಿದರೆ ಅದಕ್ಕೂ ಸರ್ಕಾರ ಸಿದ್ದವಿದೆ ಎಂದರು. 

ರೈತರ ಆದಾಯವನ್ನು ಹೆಚ್ಚಿಸಲು ಸರ್ಕಾರ ಕೆಲಸ ಮಾಡುತ್ತಿದ್ದು, ಈ ಬಗ್ಗೆ ಪ್ರಧಾನಿ ಮೋದಿಯವರಿಗೆ 2014ರ ಲೋಕಸಭೆ ಚುನಾವಣೆಗೆ ಮೊದಲೇ ಕಾಳಜಿಯಿದ್ದಿತು. ರೈತರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡೇ ಈ ಮೂರು ಕಾಯ್ದೆಗಳನ್ನು ತರಲಾಗಿದೆ. ಕೇಂದ್ರ ಸರ್ಕಾರ ಸಂಪುಟದ ಹಿರಿಯ ಸಚಿವನಾಗಿ ಪ್ರಧಾನಿ ಮೋದಿಯವರ ಜೊತೆ ಹಲವು ವಿಷಯಗಳ ಜೊತೆ ಚರ್ಚೆ ನಡೆಸಲು ನನಗೆ ಅವಕಾಶ ಸಿಕ್ಕಿದೆ. ರೈತರ ಬಗ್ಗೆ ಅವರಿಗೆ ಅಪಾರ ಕಾಳಜಿಯಿದೆ ಎಂದರು.

ಕನಿಷ್ಠ ಬೆಂಬಲ ಬೆಲೆ ಮುಂದುವರಿಯುತ್ತದೆ ಎಂದು ಸರ್ಕಾರ ಪದೇ ಪದೇ ಹೇಳಿದೆ. ನಮ್ಮ ಭರವಸೆಗಳಿಂದ ಪಲಾಯನವಾದವಾಗಲು ಹೇಗೆ ಸಾಧ್ಯ?ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಕೊಟ್ಟ ಆಶ್ವಾಸನೆಗಳಿಂದ ದೂರ ಸರಿದರೆ ಅದಕ್ಕೆ ತಕ್ಕ ಶಿಕ್ಷೆಯನ್ನು ಚುನಾವಣೆಯಲ್ಲಿ ಕೊಡುತ್ತಾರೆ. ರೈತರ ಆದಾಯ ಹೆಚ್ಚಿಸುವುದೇ ನಮ್ಮ ಗುರಿಯಾಗಿದೆ ಎಂದರು.

ಪ್ರಧಾನಿಗೆ ನೋವಾಗಿದೆ: ರೈತರು ನಡೆಸುತ್ತಿರುವ ಪ್ರತಿಭಟನೆಯಿಂದ ಪ್ರಧಾನಿ ಮೋದಿಯವರಿಗೆ ಬಹಳ ಬೇಸರವಾಗಿದೆ. ರೈತರ ವಿಷಯದಲ್ಲಿ ಯಾವತ್ತಿಗೂ ಅಸೂಕ್ಷ್ಮವಾಗಿ ನಡೆದುಕೊಳ್ಳುವ ಪ್ರಶ್ನೆಯೇ ಇಲ್ಲ, ನಮ್ಮ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ, ಈ ಬಗ್ಗೆ ನನಗೆ ಮಾತ್ರವಲ್ಲ, ಪ್ರಧಾನಿಯವರಿಗೂ ಬೇಸರವಿದೆ ಎಂದರು.

ರಾಹುಲ್ ಗಾಂಧಿ ನನಗಿಂತ ಚಿಕ್ಕವರು, ಕೃಷಿ ಬಗ್ಗೆ ಅವರಿಗಿಂತ ನನಗೆ ಹೆಚ್ಚು ಗೊತ್ತಿದೆ, ನಾನು ರೈತ ಮಹಿಳೆಯ ಹೊಟ್ಟೆಯಲ್ಲಿ ಹುಟ್ಟಿದವನು, ರೈತರ ವಿರುದ್ಧವಾಗಿ ನಾವು ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com