ಪಿಎಂಸಿ ಬ್ಯಾಂಕ್ ಹಗರಣ: ಮತ್ತೆ ಇಡಿ ವಿಚಾರಣೆಗೆ ಸಂಜಯ್ ರಾವತ್ ಪತ್ನಿ ಗೈರು!

ಪಿಎಂಸಿ ಬ್ಯಾಂಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಮುಖಂಡ ಸಂಜಯ್ ರಾವತ್ ಪತ್ನಿ ವರ್ಷಾ ರಾವತ್ ಅವರು ಮತ್ತೆ ಗೈರಾಗಿದ್ದಾರೆ.
ವರ್ಷಾ ರಾವತ್
ವರ್ಷಾ ರಾವತ್

ನವದೆಹಲಿ: ಪಿಎಂಸಿ ಬ್ಯಾಂಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಮುಖಂಡ ಸಂಜಯ್ ರಾವತ್ ಪತ್ನಿ ವರ್ಷಾ ರಾವತ್ ಅವರು ಮತ್ತೆ ಗೈರಾಗಿದ್ದಾರೆ.

ಹೌದು..4,300 ಕೋಟಿ ರೂ ಮೌಲ್ಯದ ಪಿಎಂಸಿ ಬ್ಯಾಂಕಿಂಗ್ ಹಗರಣದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ನೊಟೀಸ್ ಪಡೆದಿರುವ ಸಂಜಯ್ ರಾವತ್ ಪತ್ನಿ ವರ್ಷ ರಾವತ್ ಇಂದು ಇಡಿ ಮುಂದೆ ಹಾಜರಾಗಿಲ್ಲ. ಇ.ಡಿ ವಿಚಾರಣೆಗೆ ಹಾಜರಾಗಲು ಜನವರಿ 5 ತನಕ ಸಮಯ ಕೇಳಿದ್ದಾರೆ ಎಂದು ತಿಳಿದುಬಂದಿದೆ.

ವರ್ಷಾ ರಾವತ್ ಅವರ ಮನವಿಗೆ ಸ್ಪಂದಿಸಿರುವ ಇಡಿ ಅಧಿಕಾರಿಗಳು ಮುಂದಿನ ವಿಚಾರಣೆಗೆ ಹಾಜರಾಗುವಾಗ ವೈಯುಕ್ತಿಕ ಮತ್ತು ಆರ್ಥಿಕ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ದಾಖಲೆಗಳನ್ನು ಪರಿಶೀಲನೆ ನಡೆಸಿ ಬಳಿಕ ವರ್ಷಾ ರಾವತ್ ಮತ್ತು ಸಂಜಯ್ ರಾವತ್ ರನ್ನು ಇಡಿ ಅಧಿಕಾರಿಗಳು  ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಶಿವಸೇವಾ ಮುಖಂಡ ಸಂಜಯ್ ರಾವತ್ ಅವರ ವರ್ಷಾ ರಾವತ್ ಗೆ ಜಾರಿ ನಿರ್ದೇಶನಾಲಯ ನೀಡಿರುವ ನೊಟೀಸ್ ವಿಚಾರ ಮಹಾರಾಷ್ಟ್ರ ರಾಜಕಾರಣದಲ್ಲಿ ಬಹುದೊಡ್ಡ ಸಂಚಲನ ಸೃಷ್ಟಿಸಿದ್ದು, ಆಡಳಿತಾರೂಢ ಶಿವಸೇನೆ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವರ್ಷಾ ರಾವತ್ ಅವರಿಗೆ ಕಳೆದ  ಭಾನುವಾರ ನೊಟೀಸ್ ರವಾನಿಸಿದ್ದ ಜಾರಿ ನಿರ್ದೇಶನಾಲಯವು ಡಿಸೆಂಬರ್ 29, ಅಂದರೆ ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಜಾರಿ ನಿರ್ದೇಶನಾಲಯ ರವಾನಿಸಿರುವ ಮೂರನೇ ನೊಟೀಸ್ ಇದಾಗಿದ್ದು, ಈ ಹಿಂದಿನ ಎರಡು ವಿಚಾರಣೆಗೆ ವರ್ಷಾ ರಾವತ್ ಗೈರಾಗಿದ್ದರು. ಹೀಗಾಗಿ ಇಡಿ ಮೂರನೇ  ನೋಟಿಸ್ ಜಾರಿ ಮಾಡಿತ್ತು. 

ಆರೋಗ್ಯ ಕಾರಣದಿಂದಾಗಿ ವರ್ಷಾ ರಾವತ್ ಹಿಂದಿನ ಎರಡು ನೊಟೀಸ್ ಗಳಿಗೆ ಸ್ಪಂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೂರನೇ ನೊಟೀಸ್ ಜಾರಿಯಾಗಿತ್ತು.  ಇಡಿ ಮೂರನೇ ನೊಟೀಸ್ ಜಾರಿ ಮಾಡಿದ ಬೆನ್ನಲ್ಲೇ, ಸೋಮವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ನೇತೃತ್ವದ ಮಹಾವಿಕಾಸ ಅಘಾಡಿ  ಸರ್ಕಾರದ ಹಿರಿಯ ನಾಯಕರ ಸಭೆ ನಡೆಸಿದ್ದರು. ಸಂಸದ ಸಂಜಯ್ ರಾವತ್ ಕೂಡಾ ಈ ಸಭೆಯಲ್ಲಿ ಹಾಜರಿದ್ದರು. ಸುಮಾರು ಒಂದೂವರೆ ಗಂಟೆ ನಡೆದ ಈ ಸಭೆಯಲ್ಲಿ ಸಮನ್ಸ್ ಕುರಿತಂತೆ ವಕೀಲರ ಸಲಹೆ ಪಡೆಯಲು ನಿರ್ಧರಿಸಲಾಗಿದೆ ಎನ್ನಲಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com