ದೆಹಲಿ-ಬೆಂಗಳೂರು ವಿಮಾನದಲ್ಲಿ ಅನಾರೋಗ್ಯ ಪೀಡಿತ ಮಗು ಸಾವು; ಪೈಲಟ್ ಪ್ರಯತ್ನ ವಿಫಲ
ದೆಹಲಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವಿಮಾನದಲ್ಲಿ ಅನಾರೋಗ್ಯ ಪೀಡಿತ ಮಗು ಪೈಲಟ್ ನ ಹರಸಾಹಸದ ಹೊರತಾಗಿಯೂ ಸಾವನ್ನಪ್ಪಿರುವ ಘಟನೆ ಇಂದೋರ್ ನಲ್ಲಿ ನಡೆದಿದೆ.
Published: 31st December 2020 01:02 AM | Last Updated: 31st December 2020 12:36 PM | A+A A-

ವಿಮಾನದಲ್ಲಿ ಅನಾರೋಗ್ಯ ಪೀಡಿತ ಮಗು ಸಾವು
ಇಂದೋರ್: ದೆಹಲಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವಿಮಾನದಲ್ಲಿ ಅನಾರೋಗ್ಯ ಪೀಡಿತ ಮಗು ಪೈಲಟ್ ನ ಹರಸಾಹಸದ ಹೊರತಾಗಿಯೂ ಸಾವನ್ನಪ್ಪಿರುವ ಘಟನೆ ಇಂದೋರ್ ನಲ್ಲಿ ನಡೆದಿದೆ.
ದೆಹಲಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ವಿಮಾನದಲ್ಲಿ ಅನಾರೋಗ್ಯಕ್ಕೀಡಾಗಿದ್ದ 7 ತಿಂಗಳ ಶಿಶು ಮಾರ್ಗ ಮಧ್ಯೆಯೇ ಸಾವನ್ನಪ್ಪಿದೆ. ಇಂದೋರ್ ನ ದೇವಿ ಅಹಿಲಿಬಾಯಿ ಹೊಲ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದರೂ ಮಗು ಮಾರ್ಗ ಮಧ್ಯೆಯೇ ಸಾವನ್ನಪ್ಪಿದೆ.
ಮೂಲಗಳ ಪ್ರಕಾರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಖಾಸಗಿ ವಿಮಾನದಲ್ಲಿ ದಂಪತಿಗಳೊಂದಿಗೆ ಮಗು ಕೂಡ ಪ್ರಯಾಣಿಸುತ್ತಿತ್ತು. ಮಾರ್ಗ ಮಧ್ಯೆಯೇ ಮಗು ಅನಾರೋಗ್ಯಕ್ಕೀಡಾಗಿದ್ದು, ಮಗು ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿತ್ತು. ಇದನ್ನು ಗಮನಿಸಿದ ಪೋಷಕರು ಕೂಡಲೇ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಎಚ್ಚೆತ್ತ ಪೈಲಟ್ ವಿಮಾನದ ಮಾರ್ಗ ಬದಲಿಸಿ ಇಂದೋರ್ ನತ್ತ ತಿರುಗಿಸಿದ್ದಾರೆ. ಇಂದೋರ್ ನ ದೇವಿ ಅಹಿಲಿಬಾಯಿ ಹೊಲ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತಾದರೂ ಅಷ್ಟು ಹೊತ್ತಿಗೆ ಮಗು ಆರೋಗ್ಯ ಪರಿಸ್ಥಿತಿ ತೀವ್ರ ಬಿಗಡಾಯಿಸಿತ್ತು.
ಮಗುವನ್ನು ಇಂದೋರ್ ನ SAIMS ಆಸ್ಪತ್ರೆಗೆ ದಾಖಲಿಸಲಾಯಿತು. ಮಗುವನ್ನು ಪರೀಕ್ಷಿಸಿದ ವೈದ್ಯರು ಮಗು ಸಾವನ್ನಪ್ಪಿದೆ ಎಂದು ಘೋಷಣೆ ಮಾಡಿದರು. ಮೃತ ಮಗುವನ್ನು ಉತ್ತರ ಪ್ರದೇಶ ಗೋರಕ್ ಪುರ ದಂಪತಿಗಳ ಮಗು ದೇವ್ ಜೈಸ್ವಾಲ್ ಎಂದು ಗುರುತಿಸಲಾಗಿದೆ. ಮೃತ ಮಗು ಜಲಮಸ್ತಿಷ್ಕ ರೋಗ (Hydrocephalus)ದಿಂದ ಬಳಲುತ್ತಿತ್ತು. ಇದು ಅಪರೂಪದ ಖಾಯಿಲೆಯಾಗಿದ್ದು, ಮಗುವಿನ ಚಿಕಿತ್ಸೆಗಾಗಿ ಮಗುವಿನ ಪೋಷಕರು ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿದ್ದರು ಎನ್ನಲಾಗಿದೆ.