ಉತ್ತರ ಪ್ರದೇಶ: ಶಾಲಾ ಕೊಠಡಿಯಲ್ಲಿ ಬೆಂಚ್ ಗಾಗಿ ಗಲಾಟೆ, ಪಿಸ್ತೂಲ್ ನಿಂದ ಗುಂಡು ಹಾರಿಸಿ ವಿದ್ಯಾರ್ಥಿ ಹತ್ಯೆ!
ಶಾಲಾ ಕೊಠಡಿಯಲ್ಲಿ 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ನಡುವೆ ಕುಳಿತುಕೊಳ್ಳವ ಬೆಂಚ್ ವಿಷಯದಲ್ಲಿ ನಡೆದ ಗಲಾಟೆಯಲ್ಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
Published: 31st December 2020 06:44 PM | Last Updated: 31st December 2020 06:44 PM | A+A A-

ಸಾಂದರ್ಭಿಕ ಚಿತ್ರ
ಲಖನೌ: ಶಾಲಾ ಕೊಠಡಿಯಲ್ಲಿ 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ನಡುವೆ ಕುಳಿತುಕೊಳ್ಳವ ಬೆಂಚ್ ವಿಷಯದಲ್ಲಿ ನಡೆದ ಗಲಾಟೆಯಲ್ಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಗಲಾಟೆ ನಡೆದ ಮರು ದಿನ ಒಬ್ಬ ವಿದ್ಯಾರ್ಥಿ ಮನೆಯಲ್ಲಿದ್ದ ತನ್ನ ಚಿಕ್ಕಪ್ಪನ ಪಿಸ್ತೂಲ್ ತೆಗೆದುಕೊಂಡು ಇನ್ನೊಬ್ಬ ವಿದ್ಯಾರ್ಥಿಯ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಪಿಸ್ತೂಲ್ ನಿಂದ ಹಾರಿಸಿದ ಮೂರು ಗುಂಡುಗಳು ತಲೆ, ಎದೆ ಹಾಗೂ ಹೊಟ್ಟೆಗೆ ನುಸುಳಿ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ನಂತರ ಗುಂಡು ಹಾರಿಸಿದ ವಿದ್ಯಾರ್ಥಿ ಶಾಲೆಯಿಂದ ಪರಾರಿಯಾಗುವ ಯತ್ನದಲ್ಲಿ ಒಮ್ಮೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಆದರೆ, ಶಾಲಾ ಶಿಕ್ಷಕರು ಚಾಕಚಕ್ಯತೆ ಪ್ರದರ್ಶಿಸಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ಗುರುವಾರ ಈ ಘಟನೆ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಇಬ್ಬರು ವಿದ್ಯಾರ್ಥಿಗಳು ಬುಧವಾರ ತಮ್ಮ ಶಾಲಾ ಕೊಠಡಿಯಲ್ಲಿ ಕುಳಿತುಕೊಳ್ಳುವ ಬೆಂಚ್ ಗಾಗಿ ಹೊಡೆದಾಟ ಮಾಡಿಕೊಂಡಿದ್ದರು. ಆದರೆ, ಶಿಕ್ಷಕರು ಮಧ್ಯ ಪ್ರವೇಶಿಸಿ ಇಬ್ಬರೂ ಬಾಲಕರನ್ನು ಸಮಾಧಾನ ಪಡಿಸಿದ್ದರು.
ಆದರೆ ಶಿಕ್ಷಕರ ಮಧ್ಯಪ್ರವೇಶದ ನಂತರವೂ ವಿದ್ಯಾರ್ಥಿಯೊಬ್ಬನಲ್ಲಿ ಕೋಪ ಮಡುಗಟ್ಟಿತ್ತು. ಗುರುವಾರ ಬೆಳಿಗ್ಗೆ ಮನೆಯಲ್ಲಿದ್ದ ಸೇನಾ ಯೋಧ ಚಿಕ್ಕಪ್ಪನ ಪರವಾನಗಿ ಪಡೆದ ಪಿಸ್ತೂಲಿನೊಂದಿಗೆ ಶಾಲೆಗೆ ಮರಳಿದ್ದ ವಿದ್ಯಾರ್ಥಿ, ತನ್ನೊಂದಿಗೆ ಗಲಾಟೆ ನಡೆಸಿದ್ದ ವಿದ್ಯಾರ್ಥಿಯ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.