ಪೂರ್ವ ಲಡಾಕ್ ಗಡಿಭಾಗದ ಸಂಘರ್ಷ ವಿಚಾರದಲ್ಲಿ ಭಾರತ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದಿಲ್ಲ: ರಕ್ಷಣಾ ಸಚಿವ ರಾಜನಾಥ್ ಸಿಂಗ್ 

ಚೀನಾ ಗಡಿಭಾಗ ಪೂರ್ವ ಲಡಾಕ್ ನಲ್ಲಿ ಭಾರತ ಮತ್ತು ಚೀನಾ ದೇಶಗಳ ಸೇನಾಪಡೆ ನಿಯೋಜನೆಗೊಂಡು ಏಳು ತಿಂಗಳಿಗೂ ಅಧಿಕ ಸಮಯ ಕಳೆದಿದೆ. ಇದುವರೆಗೆ ಯಾವುದೇ ಪರಿಹಾರ ಸಿಕ್ಕಿದಂತೆ ಕಾಣುತ್ತಿಲ್ಲ.
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ನವದೆಹಲಿ: ಚೀನಾ ಗಡಿಭಾಗ ಪೂರ್ವ ಲಡಾಕ್ ನಲ್ಲಿ ಭಾರತ ಮತ್ತು ಚೀನಾ ದೇಶಗಳ ಸೇನಾಪಡೆ ನಿಯೋಜನೆಗೊಂಡು ಏಳು ತಿಂಗಳಿಗೂ ಅಧಿಕ ಸಮಯ ಕಳೆದಿದೆ. ಇದುವರೆಗೆ ಯಾವುದೇ ಪರಿಹಾರ ಸಿಕ್ಕಿದಂತೆ ಕಾಣುತ್ತಿಲ್ಲ.

ಈ ಹೊತ್ತಿನಲ್ಲಿ ಭಾರತ ಗಡಿ ವಾಸ್ತವ ರೇಖೆ(ಎಲ್ಎಸಿ)ಬಳಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ, ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಸಿಗುವ ಆಶಾವಾದ ವ್ಯಕ್ತಪಡಿಸಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್.

ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು, ಭಾರತ ಯಾವತ್ತಿಗೂ ಶಾಂತಿಯ ಪರವಾಗಿದೆ, ಹಾಗೆಂದು ಆತ್ಮ ಗೌರವದ ವಿಷಯ ಬಂದಾಗ ಯಾವತ್ತಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಇನ್ನಷ್ಟು ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಮಾತುಕತೆ ಸಾಧ್ಯವಿದೆ ಎಂದು ಹೇಳಿದ್ದಾರೆ.

ಕಳೆದ ಮೇ ಆರಂಭದಿಂದ ಪೂರ್ವ ಲಡಾಕ್ ನ ಗಡಿಭಾಗದಲ್ಲಿ ಭಾರತ ಮತ್ತು ಚೀನಾ ದೇಶಗಳ ಮಿಲಿಟರಿ ಪಡೆಗಳು ನಿಯೋಜನೆಗೊಂಡಿದ್ದು ಈಗಾಗಲೇ ಹಲವು ಸುತ್ತಿನ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಮಾತುಕತೆಗಳು ನಡೆದಿವೆ, ಆದರೆ ಯಾವುದೇ ಶಾಶ್ವತ ವಾಸ್ತವ ಪರಿಹಾರಕ್ಕೆ ಬರುವಲ್ಲಿ ವಿಫಲವಾಗಿವೆ.

ಪೂರ್ವ ಲಡಾಕ್ ಗಡಿಯಲ್ಲಿನ ಪರಿಸ್ಥಿತಿ ಹಿಂದಿನಂತೆಯೇ ಮುಂದುವರಿದಿದೆ. ಏಕಪಕ್ಷೀಯ ಬದಲಾವಣೆಯನ್ನು ಭಾರತ ತೆಗೆದುಕೊಳ್ಳುವುದಿಲ್ಲ ಎಂದರು.

ಪೂರ್ವ ಲಡಾಕ್ ನಲ್ಲಿ ಶೂನ್ಯ ತಾಪಮಾನದಲ್ಲಿ ಹಲವು ಪರ್ವತ ಪ್ರದೇಶಗಳಲ್ಲಿ ಯಾವುದೇ ಕ್ಷಣದಲ್ಲಿ ಚೀನಾ ಸೇನೆ ಎದುರಾದರೆ ಯುದ್ಧ ಮಾಡಲು ಸುಮಾರು 50 ಸಾವಿರ ಭಾರತೀಯ ಸೈನಿಕರು ಹಗಲಿರುಳು ಕಾಯುತ್ತಿದ್ದಾರೆ. ಚೀನಾ ಕೂಡ ಸರಿಸುಮಾರು ಅಷ್ಟೇ ಸಂಖ್ಯೆಯಲ್ಲಿ ಸೇನಾಪಡೆ ಯೋಧರನ್ನು ನಿಯೋಜಿಸಿದೆ.

ಪೂರ್ವ ಲಡಾಕ್ ನ ಪಾಂಗೊಂಗ್ ಲೇಕ್ ಪ್ರದೇಶದಲ್ಲಿ ಎರಡೂ ದೇಶಗಳ ಮಧ್ಯೆ ಕಳೆದ ಮೇ 5ರಿಂದ ಮುಖಾಮುಖಿ ನಡೆಯುತ್ತಿದೆ. ನಂತರ ಮೇ 9ರಂದು ಉತ್ತರ ಸಿಕ್ಕಿಮ್ ನಲ್ಲಿ ಕೂಡ ಇಂತಹದ್ದೇ ಘಟನೆ ನಡೆಯಿತು. ಎರಡೂ ದೇಶಗಳ ಮಧ್ಯೆ ಈಗಾಗಲೇ 8 ಸುತ್ತಿನ ಮಾತುಕತೆ ನಡೆದಿದ್ದು ಯಾವುದೇ ಫಲ ಕಂಡುಬಂದಿಲ್ಲ. 9ನೇ ಸುತ್ತಿನ ಮಾತುಕತೆ ಯಾವಾಗ ನಡೆಯಲಿದೆ ಎಂಬುದು ನಿಗದಿಯಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com