ನಿರ್ಭಯಾ ಪ್ರಕರಣ: ಅಪರಾಧಿಗಳಿಗೆ ಗಲ್ಲು ಜಾರಿಗೊಳಿಸಲು ದಿನಾಂಕ ನಿಗದಿಪಡಿಸುವಂತೆ ಕೋರ್ಟ್ ಗೆ ತಿಹಾರ್ ಜೈಲು ಮನವಿ

ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಲು ದಿನಾಂಕ ನಿಗದಿಪಡಿಸುವಂತೆ ಕೋರಿ ದೆಹಲಿ ಪಟಿಯಾಲ ಹೌಸ್ ಕೋರ್ಟ್ ಗೆ ಮನವಿ ಸಲ್ಲಿಸಲಾಗುವುದು ಎಂದು ಶನಿವಾರ ತಿಹಾರ್ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ನಿರ್ಭಯಾ ಅತ್ಯಾಚಾರಿಗಳು
ನಿರ್ಭಯಾ ಅತ್ಯಾಚಾರಿಗಳು

ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಲು ದಿನಾಂಕ ನಿಗದಿಪಡಿಸುವಂತೆ ಕೋರಿ ದೆಹಲಿ ಪಟಿಯಾಲ ಹೌಸ್ ಕೋರ್ಟ್ ಗೆ ಮನವಿ ಸಲ್ಲಿಸಲಾಗುವುದು ಎಂದು ಶನಿವಾರ ತಿಹಾರ್ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ಭಯ ಪ್ರಕರಣದ ಅಪರಾಧಿ ವಿನಯ್ ಕುಮಾರ್ ಶರ್ಮಾ ಕ್ಷಮಾದಾನದ ಅರ್ಜಿಯನ್ನು ರಾಷ್ಟ್ರಪತಿಗಳು ವಜಾಗೊಳಿಸಿದ ಹಿನ್ನೆಲೆಯಲ್ಲಿ, ಎಲ್ಲಾ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಲು ದಿನಾಂಕ ನಿಗದಿಪಡಿಸುವಂತೆ ತಿಹಾರ್ ಜೈಲು ಕೋರ್ಟ್ ಗೆ ಮನವಿ ಸಲ್ಲಿಸಲಿದೆ ಎಂದು ಪೊಲೀಸ್ ಮಹಾ ನಿರ್ದೇಶಕ(ಬಂಧಿಖಾನೆ) ಸಂದೀಪ್ ಗೋಯಲ್ ಅವರು ಹೇಳಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರು ಇಂದು ಬೆಳಗ್ಗೆಯಷ್ಟೇ ವಿನಯ್ ಕುಮಾರ್ ಶರ್ಮಾ ಸಲ್ಲಿಸಿದ್ದ ಕ್ಷಮಾದಾನದ ಅರ್ಜಿಯನ್ನು ವಜಾಗೊಳಿಸಿದ್ದರು. ಇದರ ಬೆನ್ನಲ್ಲೇ ಪ್ರಕರಣದ ಮತ್ತೊಬ್ಬ ಅಪರಾಧಿ ಅಕ್ಷಯ್ ಥಾಕೂರ್ ಇಂದು ಕ್ಷಮಾದಾನ ಕೋರಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದಾನೆ.

ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಇಂದು ಗಲ್ಲು ಶಿಕ್ಷೆ ಜಾರಿಗೊಳಿಸಬೇಕಾಗಿತ್ತು. ಆದರೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಅಪರಾಧಿಗಳಿಗೂ ಗಲ್ಲು ಶಿಕ್ಷೆ ಜಾರಿಗೊಳಿಸದಂತೆ ಆದೇಶಿಸಿದೆ.

ನಿರ್ಭಯಾ ಅಪರಾಧಿಗಳಿಗೆ ಮೇಲ್ಮನವಿಗಳನ್ನು ಸಲ್ಲಿಸಲು ಇನ್ನೂ ಕಾನೂನಿನಲ್ಲಿ ಅವಕಾಶವಿರುವ ಹಿನ್ನೆಲೆಯಲ್ಲಿ ಅವರನ್ನು ನೇಣಿಗೇರಿಸಲು ಸಮಯ ನಿಗದಿಪಡಿಸಿದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದ್ದರು.

ದೆಹಲಿ ಬಂಧಿಖಾನೆ ನಿಯಮದ ಪ್ರಕಾರ, ಒಂದೇ ಅಪರಾಧದ ನಾಲ್ವರು ಆರೋಪಿಗಳಲ್ಲಿ ಯಾರೊಬ್ಬರ ಕಾನೂನು ಅವಕಾಶಗಳು ಬಾಕಿಯಿದ್ದರೂ, ಉಳಿದವರನ್ನು ಗಲ್ಲಿಗೇರಿಸುವಂತಿಲ್ಲ ಎಂದು ವಾದಿಸಿದರು.

ಆದರೆ ತಿಹಾರ್ ಜೈಲಾಧಿಕಾರಿಗಳು, ನ್ಯಾಯಾಲಯದ ಆದೇಶದಂತೆ ಉಳಿದ ಮೂವರನ್ನು ಗಲ್ಲಿಗೇರಿಸಬಹುದು ಎಂದು ವಾದ ಮಂಡಿಸಿದ್ದರು. ಜೈಲು ಅಧಿಕಾರಿಗಳ ವಾದ ಒಪ್ಪದ ಕೋರ್ಟ್, ನಾಲ್ವರು ಅಪರಾಧಿಗಳ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com