ಕರೋನಾ ವೈರಸ್: ದೆಹಲಿಗೆ ಬಂದಿಳಿದ ಭಾರತೀಯರನ್ನು ಹೊತ್ತ 2ನೇ ವಿಮಾನ

ಚೀನಾದಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕರೋನಾ ವೈರಸ್ ಪರಿಣಾಮ ಚೀನಾದ ವುಹಾನ್ ನಲ್ಲಿರುವ ಭಾರತೀಯರ ಸ್ಥಳಾಂತರಕ್ಕೆ ಹೊರಟ ಇಂಡಿಯನ್ ಏರ್ ಲೈನ್ಸ್ ವಿಮಾನ ಪ್ರಯಾಣಿಕರನ್ನು ಹೊತ್ತು ದೆಹಲಿಗೆ ಬಂದಿಳಿದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಚೀನಾದಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕರೋನಾ ವೈರಸ್ ಪರಿಣಾಮ ಚೀನಾದ ವುಹಾನ್ ನಲ್ಲಿರುವ ಭಾರತೀಯರ ಸ್ಥಳಾಂತರಕ್ಕೆ ಹೊರಟ ಇಂಡಿಯನ್ ಏರ್ ಲೈನ್ಸ್ ವಿಮಾನ ಪ್ರಯಾಣಿಕರನ್ನು ಹೊತ್ತು ದೆಹಲಿಗೆ ಬಂದಿಳಿದಿದೆ.

ವುಹಾನ್ ವಿಮಾನ ನಿಲ್ದಾಣದಿಂದ ಸುಮಾರು 324 ಮಂದಿ ಭಾರತೀಯರನ್ನು ಹೊತ್ತು ಭಾರತದತ್ತ ಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾದ ಬೋಯಿಂಗ್ 747 ವಿಮಾನ ಇದೀಗ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ವಿಮಾನದ ಒಟ್ಟು 324 ಮಂದಿ ಪ್ರಯಾಣಿಕರ ಪೈಕಿ  ಮಾಲ್ಡೀವ್ಸ್ ಪ್ರಜೆಗಳೂ ಇದ್ದಾರೆ ಎಂದು ತಿಳಿದುಬಂದಿದೆ. ವಿಮಾನ ನಿಲ್ದಾಣದಲ್ಲಿ ಎಲ್ಲ ಪ್ರಯಾಣಿಕರಿಗೆ ವಿಶೇಷ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ. ಇದಕ್ಕಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ವಿಭಾಗ ತೆರೆಯಲಾಗಿದ್ದು, ಅಲ್ಲಿಯೇ ಎಲ್ಲ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಚೀನಾದಲ್ಲಿ ಕರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಈ ವರೆಗೂ ಮಾರಣಾಂತಿಕ ವೈರಸ್ ದಾಳಿಗೆ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 304ಕ್ಕೆ ಏರಿಕೆಯಾಗಿದೆ. ಈ ಕುರಿತಂತೆ ಚೀನಾ ಸರ್ಕಾರ ಮಾಹಿತಿ ನೀಡಿದ್ದು, ಶನಿವಾರ ಒಂದೇ ದಿನದಲ್ಲಿ ಕರೋನಾ ವೈರಸ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ 45 ಮಂದಿ ಸಾವನ್ನಪ್ಪಿದ್ದಾರೆ. ಆ ಮೂಲಕ ವೈರಸ್ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದವರ ಸಂಖ್ಯೆ 304ಕ್ಕೆ ಏರಿಕೆಯಾಗಿದೆ.

ಅಂತೆಯೇ ಈ ವರೆಗೂ ಈ ಮಾರಣಾಂತಿಕ ಸೋಂಕಿಗೆ ತುತ್ತಾದವರ ಸಂಖ್ಯೆ ಕೂಡ 14000 ಕ್ಕೆ ಏರಿಕೆಯಾಗಿದ್ದು ಸಮರೋಪಾದಿಯಲ್ಲಿ ಮುಂಜಾಗ್ರತಾ ಕ್ರಮ ನಡೆಸಲಾಗುತ್ತಿದೆ. ವೈರಸ್ ಕೊಲ್ಲುವ ನಾಶಕಗಳನ್ನು ಚೀನಾದ ಪ್ರಮುಖ ನಗರಗಳಾದ್ಯಂತ ಸಿಂಪಡಿಸಲಾಗುತ್ತಿದ್ದು, ವೈರಸ್ ಅನ್ನು ಹತೋಟಿಗೆ ತರಲು ವಿಜ್ಞಾನಿಗಳು ಇನ್ನಿಲ್ಲದಂತೆ ಶ್ರಮಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com