ಮಹಾತ್ಮಾ ಗಾಂಧಿ ನಿಮಗೆ ಟ್ರೇಲರ್ ಆಗಿರಬಹುದು, ನಮಗೆ ಬದುಕು: ಕಾಂಗ್ರೆಸ್ ಗೆ ಪ್ರಧಾನಿ ಮೋದಿ ತಿರುಗೇಟು  

ಮಹಾತ್ಮಾ ಗಾಂಧಿ ನಿಮಗೆ ಟ್ರೇಲರ್ (ರಾಜಕೀಯದ ಪ್ರಚಾರಕ್ಕೆ)ಆಗಿರಬಹುದು, ಆದರೆ ಅವರು ನಮಗೆ ಜೀವನ ಎಂದು ಹೇಳುವ ಮೂಲಕ ವಿರೋಧ ಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ.
ಲೋಕಸಭೆಯಲ್ಲಿ ಇಂದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
ಲೋಕಸಭೆಯಲ್ಲಿ ಇಂದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಮಹಾತ್ಮಾ ಗಾಂಧಿ ನಿಮಗೆ ಟ್ರೇಲರ್ (ರಾಜಕೀಯದ ಪ್ರಚಾರಕ್ಕೆ)ಆಗಿರಬಹುದು, ಆದರೆ ಅವರು ನಮಗೆ ಜೀವನ ಎಂದು ಹೇಳುವ ಮೂಲಕ ವಿರೋಧ ಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ.


ಇಂದು ವಿರೋಧ ಪಕ್ಷಗಳ ಸದಸ್ಯರು ಲೋಕಸಭೆಯಲ್ಲಿ 'ಮಹಾತ್ಮಾ ಗಾಂಧಿ ಅಮರ್ ರಹೇ' ಎಂದು ಘೋಷಣೆ ಕೂಗುತ್ತಾ ಗದ್ದಲ, ಕೋಲಾಹಲ ಮುಂದುವರಿಸುತ್ತಿರುವಾಗಲೇ ಎದ್ದುನಿಂತು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಮಂಡಿಸಿದ ಮೋದಿ, ಇಷ್ಟೆನಾ, ಅಲ್ಲ ಇನ್ನೂ ಇದೆಯಾ ಎಂದು ವಿರೋಧ ಪಕ್ಷಗಳ ಸದಸ್ಯರಿಗೆ ಕೇಳಿದರು. 


ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆಗೆ ಕಳೆದೆರಡು ಮೂರು ದಿನಗಳಿಂದ ಸದನದಲ್ಲಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಸದಸ್ಯರು ತೀವ್ರ ಗದ್ದಲ, ಕೋಲಾಹಲವನ್ನೇ ನಡೆಸುತ್ತಿದ್ದಾರೆ. ಪ್ರಧಾನಿಗಳು ಹೀಗೆ ಕೇಳುತ್ತಿದ್ದಂತೆ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಇದು ಟ್ರೈಲರ್ ಮಾತ್ರ ಎಂದರು. ಅದಕ್ಕೆ ಪ್ರಧಾನಿ ಮೋದಿ, ನಿಮಗೆ ಗಾಂಧಿ ಟ್ರೇಲರ್ ಆಗಿರಬಹುದು, ಆದರೆ ನಮಗೆ ಅವರು ನಮ್ಮ ಜೀವ ಎಂದು ತಿರುಗೇಟು ನೀಡಿದರು. 


ಪ್ರಧಾನಿಗಳ ಇಂದಿನ ಭಾಷಣದ ಬಹುತೇಕ ಭಾಗ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಡುವ ರೀತಿಯಲ್ಲಿತ್ತು. 


ಪ್ರಧಾನಿಗಳ ಭಾಷಣದ ಮುಖ್ಯಾಂಶಗಳು ಹೀಗಿವೆ: ನವ ಭಾರತ ನಿರ್ಮಾಣಕ್ಕೆ ರಾಷ್ಟ್ರಪತಿಗಳು ಸರ್ಕಾರದ ದೂರದೃಷ್ಟಿಗಳನ್ನು ತಮ್ಮ ಭಾಷಣದಲ್ಲಿ ಹೇಳಿದ್ದರು. ಈ ಶತಮಾನದ ಮೂರನೇ ದಶಕದ ಹೊತ್ತಿನಲ್ಲಿ ರಾಷ್ಟ್ರಪತಿಗಳು ಹೀಗೆ ಹೇಳಿದ್ದಾರೆ. ಅವರ ಮಾತುಗಳು ಭರವಸೆಗಳ ಸ್ಪೂರ್ತಿಯನ್ನು ನಮ್ಮಲ್ಲಿ ತುಂಬಿದ್ದು ಮುಂದಿನ ದಿನಗಳಲ್ಲಿ ದೇಶವನ್ನು ಮುನ್ನಡೆಸುವ ಒಂದು ನೀಲನಕ್ಷೆಯನ್ನು ನಮಗೆ ಹಾಕಿಕೊಟ್ಟಿದೆ.


ಹಿಂದಿನ ಸರ್ಕಾರದ ರೀತಿಯಲ್ಲೇ ಆಲೋಚನೆ ಮಾಡಿಕೊಂಡು ನಾವು ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದರೆ ರಾಮ ಜನ್ಮಭೂಮಿ ವಿವಾದ ಇನ್ನೂ ಬಗೆಹರಿಯುತ್ತಿರಲಿಲ್ಲ. ಕರ್ತಾರ್ ಪುರ ಕಾರಿಡಾರ್ ಯೋಜನೆ ಪೂರ್ಣವಾಗುತ್ತಿರಲಿಲ್ಲ. ಭಾರತ-ಬಾಂಗ್ಲಾದೇಶ ಭೂ ಒಪ್ಪಂದ ಏರ್ಪಡುತ್ತಿರಲಿಲ್ಲ. ಸಂವಿಧಾನ ವಿಧಿ 370 ರದ್ದು ಆಗುತ್ತಿರಲಿಲ್ಲ. ತ್ರಿವಳಿ ತಲಾಖ್ ನಿಂದ ಮುಸಲ್ಮಾನ ಮಹಿಳೆಯರು ಕಷ್ಟಪಡುವುದರಿಂದ ಇನ್ನೂ ಹೊರಬರುತ್ತಿರಲಿಲ್ಲ. ಅತ್ಯಾಚಾರವೆಸಗಿದ ಬಾಲಾಪರಾಧಿಗಳಿಗೆ ಶಿಕ್ಷೆಯಾಗುತ್ತಿರಲಿಲ್ಲ.


ಸರ್ಕಾರ ಸದನದಲ್ಲಿ ಅನೇಕ ಮಹತ್ವದ ಮಸೂದೆಗಳನ್ನು ಮಂಡಿಸಿ ಅನುಮೋದನೆ ಪಡೆಯುವ ಸಂದರ್ಭದಲ್ಲಿ ಇಷ್ಟೆಲ್ಲಾ ಗಡಿಬಿಡಿ ಏಕೆ ಎಂದು ಹಲವರು ಮಾತನಾಡಿಕೊಂಡರು. ವಿರೋಧ ಪಕ್ಷಗಳ ಸದಸ್ಯೆರೆಡೆಗೆ ಕೈತೋರಿಸಿ ಮೋದಿ, ಇಂದು ಜಗತ್ತು ನಮ್ಮಿಂದ ಅಪಾರ ನಿರೀಕ್ಷಿಸುತ್ತಿದೆ. ಈ ಸಂದರ್ಭದಲ್ಲಿ ಧೈರ್ಯ ತೋರಿಸಿ ಸವಾಲುಗಳನ್ನು ಎದುರಿಸಿ ನಾವು ಕೆಲಸ ಮಾಡಬೇಕು. ಸಮಸ್ಯೆ ಬಗೆಹರಿಯದೆ ಸಮಸ್ಯೆಯಾಗಿಯೇ ಉಳಿಯಲು ಭಾರತ ಇನ್ನು ಮುಂದೆ ಕಾಯುವುದಿಲ್ಲ. ಹೀಗಾಗಿ ನಮ್ಮ ಸರ್ಕಾರದ ಗುರಿ: ವೇಗ, ಪ್ರಮಾಣ, ನಿರ್ಣಯ, ನಿರ್ಣಾಯಕತೆ, ಸೂಕ್ಷ್ಮತೆ ಮತ್ತು ಪರಿಹಾರಗಳಾಗಿವೆ.


ದೇಶದ ಜನ ಸರ್ಕಾರ ಬದಲಿಸಿದರು, ನಾವು ಜನರ ಸರ್ಕೊರ್(ಜನರ ಜೊತೆ ಸಂಬಂಧ, ಅವರ ಆಶಯಗಳು)ಬದಲಿಸುತ್ತೇವೆ.ಹೊಸ ಆಲೋಚನೆಗಳನ್ನು ಹೊಂದಿರುವ ಜನರ ಜೊತೆ ಕೆಲಸ ಮಾಡಲು ದೇಶ ಇಂದು ಇಚ್ಛಿಸುತ್ತಿದೆ. ಹೀಗಾಗಿ ಇಂದು ನಾವು ಆಡಳಿತ ಸ್ಥಾನದಲ್ಲಿದ್ದೇವೆ. 

-ಹಣಕಾಸು ಕೊರತೆ ಮತ್ತು ಬೆಲೆ ಏರಿಕೆಯನ್ನು ಸರ್ಕಾರ ಪರೀಕ್ಷಿಸುತ್ತಿದ್ದು, ಹೂಡಿಕೆದಾರರಲ್ಲಿ ವಿಶ್ವಾಸ ವೃದ್ಧಿಸುವ ಮೂಲಕ ಆರ್ಥಿಕತೆಯನ್ನು ಬಲಿಷ್ಠಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ. 


ಕಾರ್ಮಿಕ ಸುಧಾರಣೆಗೆ ಸರ್ಕಾರ ಕೆಲಸ ಮಾಡುತ್ತಿದ್ದು ಕಾರ್ಮಿಕ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸಿ ಮುಂದಿನ ತಲೆಮಾರಿಗೆ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ, ಈ ವಲಯ ಹೆಚ್ಚು ಪಾರದರ್ಶಕವಾಗುವಂತೆ ನಾವು ನೋಡಿಕೊಳ್ಳುತ್ತಿದ್ದೇವೆ. 


ಕೈಗಾರಿಕೆ, ನೀರಾವರಿ, ಸಾಮಾಜಿಕ ಮೂಲಭೂತ ಸೌಕರ್ಯ, ಗ್ರಾಮೀಣಾಭಿವೃದ್ಧಿ, ಬಂದರು, ಜಲಮಾರ್ಗಗಳ ಅಭಿವೃದ್ಧಿಗೆ ಸರ್ಕಾರದಿಂದ ಹಲವು ಕ್ರಮಗಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com