ಇಂಟರ್‌ನೆಟ್ ಸಂಪರ್ಕ ಮೂಲಭೂತ ಹಕ್ಕಲ್ಲ, ರಾಷ್ಟ್ರ ಭದ್ರತೆಯೇ ಮುಖ್ಯ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

ಅಂತರ್ಜಾಲ ಸಂಪರ್ಕ ಮೂಲಭೂತ ಹಕ್ಕು, ಅದು ದೇಶದ ಪ್ರತೀಯೊಬ್ಬ ನಾಗರೀಕನನ್ನೂ ತಲುಪಬೇಕು ಎಂಬ ವಾದದಲ್ಲಿ ಹುರುಳಿಲ್ಲ. ಇಂಟರ್ನೆಟ್ ಮೂಲಭೂತ ಹಕ್ಕಲ್ಲ ಎಂದು ಕೇಂದ್ರ ಕಾನೂನು, ನ್ಯಾಯ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಅಂತರ್ಜಾಲ ಸಂಪರ್ಕ ಮೂಲಭೂತ ಹಕ್ಕು, ಅದು ದೇಶದ ಪ್ರತೀಯೊಬ್ಬ ನಾಗರೀಕನನ್ನೂ ತಲುಪಬೇಕು ಎಂಬ ವಾದದಲ್ಲಿ ಹುರುಳಿಲ್ಲ. ಇಂಟರ್ನೆಟ್ ಮೂಲಭೂತ ಹಕ್ಕಲ್ಲ ಎಂದು ಕೇಂದ್ರ ಕಾನೂನು, ನ್ಯಾಯ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಅಂತರ್ಜಾಲದ ಸಂಪರ್ಕದ ಹಕ್ಕಿನ ಕುರಿತ ತಪ್ಪುಗ್ರಹಿಕೆಯನ್ನು ನಿವಾರಿಸಬೇಕಾದ ಅಗತ್ಯವಿದೆಯೆಂದು ರವಿಶಂಕರ್ ಪ್ರಸಾದ್ ರಾಜ್ಯಸಭೆಗೆ ತಿಳಿಸಿದ್ದಾರೆ. 'ಇಂಟರ್‌ನೆಟ್ ಸಂಪರ್ಕದ ಹಕ್ಕು ಮೂಲಭೂತ ಹಕ್ಕಾಗಿದೆಯೆಂದು ಯಾವುದೇ ನ್ಯಾಯವಾದಿ ವಾದಿಸಿಲ್ಲವೆಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಹೀಗಾಗಿ ಈ ಕುರಿತ ತಪ್ಪುಗ್ರಹಿಕೆಯನ್ನು ಸರಿಪಡಿಸುವ ಅಗತ್ಯವಿದೆ.  ಚಿಂತನೆಗಳು ಹಾಗೂ ಅಭಿಪ್ರಾಯಗಳ ಸಂವಹನಕ್ಕೆ ಇಂಟರ್‌ನೆಟ್ ಅನ್ನು ಕೂಡಾ ನಿಮ್ಮ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿ ಪರಿಗಣಿಸಬೇಕಾಗುತ್ತದೆ ಎಂದಷ್ಟೇ ಸುಪ್ರೀಂಕೋರ್ಟ್ ಹೇಳಿದೆ ಎಂದು ಅವರು ಸ್ಪಷ್ಟಪಡಿಸಿದರು.

ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಅವರ ಪೂರಕ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ರವಿಶಂಕರ್‌ಪ್ರಸಾದ್, 'ಕಾಶ್ಮೀರದಲ್ಲಿ ಹಿಂಸಾಚಾರ ಹಾಗೂ ಭಯೋತ್ಪಾದನೆಯನ್ನು ಹರಡಲು ಇಂಟರ್ನೆಟ್‌ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತದೆಯೆಂಬುದನ್ನು ಯಾರೂ ಕೂಡಾ ಅಲ್ಲಗಳೆಯಲು ಸಾಧ್ಯವಿಲ್ಲ. ಕಾಶ್ಮೀರದಲ್ಲಿ ಪಾಕಿಸ್ತಾನವು ಅದನ್ನೇ ಮಾಡುತ್ತಿದೆ ಮತ್ತು ಭಯೋತ್ಪಾದಕ ಗುಂಪು ಐಸಿಸ್ ಕೂಡಾ ಇಂಟರ್ನೆಟ್‌ನಿಂದಲೇ ಬೆಳೆಯಿತೆಂಬುದನ್ನು ಯಾರೂ ಮರೆಯಬಾರದು ಎಂದು ಹೇಳಿದರು.

ಅಂತೆಯೇ ಸಂವಿಧಾನವು ನಮಗೆ ಹಕ್ಕುಗಳನ್ನು ಕೊಡುವ ಜೊತೆಗೆ ಅವುಗಳ ನಿಯಂತ್ರಣಕ್ಕೂ ಅಷ್ಟೇ ಒತ್ತು ನೀಡಿದೆ. ನೀವು ಇಂಟರ್ನೆಟ್ ಬಳಸಿರಿ, ಅದರೆ ಅದರ ಮೂಲಕ ನೀವು ಹಿಂಸಾಚಾರವನ್ನು ಸೃಷ್ಟಿಸಬಾರದು ಹಾಗೂ ದೇಶದ ಏಕತೆ, ಸಮಗ್ರತೆ ಹಾಗೂ ಭದ್ರತೆಯನ್ನು ದುರ್ಬಲಗೊಳಿಸಕೂಡದು. ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿಯಾಗಿ ಗುಲಾಂ ನಬಿ ಆಜಾದ್ ಕೂಡಾ ಉಗ್ರರ ಹಿಟ್ ಲಿಸ್ಟ್‌ನಲ್ಲಿದ್ದು, ಅವರಿಗೂ ಇಂಟರ್ನೆಟ್ ದುರ್ಬಳಕೆಯ ಅರಿವಿದೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com