ಉಪನ್ಯಾಸಕಿಗೆ ಬೆಂಕಿ ಹಚ್ಚಿದ ದುಷ್ಕರ್ಮಿ: ಸುಟ್ಟಗಾಯಗಳಿಂದ ಮಹಿಳೆ ಸಾವು

ಉಪನ್ಯಾಸಕಿಯೊಬ್ಬರಿಗೆ ದುಷ್ಕರ್ಮಿಯೊಬ್ಬ ಬೆಂಕಿ ಹಚ್ಚಿರುವ ಘಟನೆಯೊಂದು ಮಹಾರಾಷ್ಟ್ರದ ವಾರ್ದಾ ಜಿಲ್ಲೆಯಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನಾಗ್ಪುರ; ಉಪನ್ಯಾಸಕಿಯೊಬ್ಬರಿಗೆ ದುಷ್ಕರ್ಮಿಯೊಬ್ಬ ಬೆಂಕಿ ಹಚ್ಚಿರುವ ಘಟನೆಯೊಂದು ಮಹಾರಾಷ್ಟ್ರದ ವಾರ್ದಾ ಜಿಲ್ಲೆಯಲ್ಲಿ ನಡೆದಿದೆ. 

ಅಂಕಿತಾ ಪಿಸುಡ್ಡೆ ಎಂಬ ಉಪನ್ಯಾಸಕಿ ಮೇಲೆ ದುಷ್ಕರ್ಮಿ ಬೆಂಕಿ ಹಚ್ಚಿದ್ದು, ಸುಟ್ಟಗಾಯಗಳಿಂದ ಬಳಲುತ್ತದ್ದ ಮಹಿಳೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 

ವಿಕೇಷ್ ನಾಗ್ರಾಲೆ ಎಂಬ ಆರೋಪಿ ಅಂಕಿತಾ ಅವರ ಮೇಲೆ ಫೆ.3 ರಂದು ದಾಳಿ ನಡೆಸಿದ್ದ. ಬಳಿಕ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದ. ಈ ವೇಳೆ ನರಳಾಡುತ್ತಿದ್ದ ಅಂಕಿತಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಂಕಿತಾ ಅವರು ಶೇ.35-40ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇದೀಗ ಅಸುನೀಗಿದ್ದಾರೆಂದು ವರದಿಗಱು ತಿಳಿಸಿವೆ. 

ಪ್ರಕರಣ ಮಹಾರಾಷ್ಟ್ರದಲ್ಲಿ ಭಾರೀ ಸುದ್ದಿ ಮಾಡುತ್ತಿದ್ದು, ಘಟನೆ ಕುರಿತು ತೀವ್ರ ಟೀಕೆಗಳು ವ್ಯಕ್ತವಾಗತೊಡಗಿವೆ. ಈ ನಡುವೆ ಹಿಂಗಾಂಘಟ್ ಬಳಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟಾಗದಂತೆ ಭದ್ರತೆಯನ್ನು ಹೆಚ್ಚಿಸಲಾಗಿದೆ. 

ಘಟನೆಗೆ ಸ್ಥಳೀಯರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳಾಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ. ಆರೋಪಿಗೆ ಮರಣ ದಂಡನೆ ವಿಧಿಸುವಂತೆ ಆಗ್ರಹಿಸಿದ್ದಾರೆ. 

ಇನ್ನು ಪ್ರಕರಣ ಸಂಬಂಧ ಮಹಾರಾಷ್ಟ್ರ ಗೃಹ ಸಚಿವ ದೇಶ್ ಮುಖ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. 

ಘಟನೆ ಬಳಿಕ ಆರೋಪಿ ನಗ್ರಾಲೆಯನ್ನು ಬಂಧನಕ್ಕೊಳಪಡಿಸಲಾಗಿದೆ. ನಗ್ರಾಲೆ ಹಾಗೂ ಮಹಿಳೆ ಎರಡು ವರ್ಷಗಲಿಂದ ಸ್ನೇಹಿತರಾಗಿದ್ದು, ದುರ್ವರ್ತನೆ ಹಿನ್ನೆಲೆಯಲ್ಲಿ ಮಹಿಳೆ ಆತನೊಂದಿಗೆ ಸ್ನೇಹ ತೊರೆದಿದ್ದಳು. ಇದಾದ ಬಳಿಕ ಹಲವು ಬಾರಿ ಆರೋಪಿ ಮಹಿಳೆಗೆ ಕಿರುಕುಳ ಕೂಡ ನೀಡಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com