ದೆಹಲಿ ಕಾಲೇಜಿಗೆ ಪುಂಡರ ದಾಳಿ: ಸಾಮೂಹಿಕ ಲೈಂಗಿಕ ಕಿರುಕುಳ, ವಿದ್ಯಾರ್ಥಿನಿಯರಿಂದ ಭಾರಿ ಪ್ರತಿಭಟನೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಮ್ಮೆ ಕಾಮುಕರು ಅಟ್ಟಹಾಸ ಮೆರೆದಿದ್ದು, ಕಾಲೇಜು ಫೆಸ್ಟಿವಲ್ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಲೇಜಿಗೆ ನುಗ್ಗಿ ವಿದ್ಯಾರ್ಥಿನಿಯರಿಗೆ ಸಾಮೂಹಿಕ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಗಾರ್ಗಿ ಕಾಲೇಜಿನಲ್ಲಿ ಸಾಮೂಹಿಕ ಲೈಂಗಿಕ ಕಿರುಕುಳ
ಗಾರ್ಗಿ ಕಾಲೇಜಿನಲ್ಲಿ ಸಾಮೂಹಿಕ ಲೈಂಗಿಕ ಕಿರುಕುಳ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಮ್ಮೆ ಕಾಮುಕರು ಅಟ್ಟಹಾಸ ಮೆರೆದಿದ್ದು, ಕಾಲೇಜು ಫೆಸ್ಟಿವಲ್ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಲೇಜಿಗೆ ನುಗ್ಗಿ ವಿದ್ಯಾರ್ಥಿನಿಯರಿಗೆ ಸಾಮೂಹಿಕ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ದೆಹಲಿ ವಿಶ್ವವಿದ್ಯಾಲಯದ ಅಧೀನದಲ್ಲಿರುವ ದೆಹಲಿಯ ಗಾರ್ಗಿ ಮಹಿಳಾ ಕಾಲೇಜಿಗೆ ಪುಂಡರ ಗುಂಪೊಂದು ನುಗ್ಗಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದೆ. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿನಿಯರು ತಮ್ಮ ಅಳಲು ತೋಡಿಕೊಂಡಿದ್ದಾರೆ. 

ಮೂಲಗಳ ಪ್ರಕಾರ ಗಾರ್ಗಿ ಕಾಲೇಜಿನಲ್ಲಿ ಕಾಲೇಜು ಉತ್ಸವ ನಡೆಯುತ್ತಿತ್ತು. ಉತ್ಸವಕ್ಕೆ ನೂರಾರು ವಿದ್ಯಾರ್ಥಿನಿಯರು ಆಗಮಿಸಿದ್ದರು. ಕಾಲೇಜಿನಲ್ಲಿ ಮೂರು ದಿನಗಳ ಉತ್ಸವ ಆಯೋಜಿಸಲಾಗಿತ್ತು. ಫೆಬ್ರವರಿ 6 ರಂದು ಈ ಘಟನೆ ನಡೆದಿದ್ದು, ಸಂಜೆ 6.30ರ ಸುಮಾರಿಗೆ ಕಾಲೇಜಿಗೆ ನುಗ್ಗಿದ ಕುಡುಕರ ಗುಂಪು, ವಿದ್ಯಾರ್ಥಿಗಳ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ಈ ವೇಳೆ ಸಿಎಎ ಪರ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿಕೊಂಡು ಬಂದ ಪಾನಮತ್ತ ದುಷ್ಕರ್ಮಿಗಳ ಗುಂಪು, ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೇ, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ, ವಿದ್ಯಾರ್ಥಿನಿಯರ ಮುಂದೆ ನಿಂತು ಹಸ್ತಮೈಥುನ ಮಾಡಿಕೊಂಡಿದ್ದಾರೆ ಎಂದು ಕೆಲವು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಈ ಸಂಬಂಧ ಕಾಲೇಜಿನ ವಿದ್ಯಾರ್ಥಿನಿಯರು ವಿಡಿಯೋವೊಂದನ್ನು ಸೋಶಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡಿದ್ದು, ಕೆಲವು ಯುವತಿಯರನ್ನು ವಾಶ್​ರೂಮ್​ನಲ್ಲಿ ಕೂಡಿಹಾಕಲಾಗಿತ್ತು, ಉತ್ಸವ ನಡೆಯುತ್ತಿರುವಾಗ ಟೀಸ್​​ ಮಾಡಿದ್ದಲ್ಲದೇ, ಯುವತಿಯರ ಎದುರಿಗೆ ಹಸ್ತಮೈಥುನ ಮಾಡಿಕೊಂಡರು. ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದರು. ಅವರು ವಿದ್ಯಾರ್ಥಿಗಳಲ್ಲ, 30 ರಿಂದ 35 ವರ್ಷ ವಯಸ್ಸಿನವರು ಎಂದು ಯುವತಿಯರು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಘಟನೆ ಖಂಡಿಸಿ ಕಾಲೇಜಿನಲ್ಲಿ ಮುಷ್ಕರ ನಡೆಸಲು ವಿದ್ಯಾರ್ಥಿಗಳು ಮುಂದಾಗಿದ್ದಾರೆ.

ಇನ್ನು ಘಟನೆ ನಡೆದು ನಾಲ್ಕು ದಿನಗಳಾದ್ರೂ ಇದುವರೆಗೂ ಯಾವುದೇ ಕಂಪ್ಲೇಂಟ್ ದಾಖಲಾಗಿಲ್ಲ. ವಿದ್ಯಾರ್ಥಿನಿಯರಾಗಲೀ, ಕಾಲೇಜು ಆಡಳಿತ ಮಂಡಳಿಯಾಗಲೀ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.  ಆದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ, ಇಂದು ಕಾಲೇಜಿಗೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿ ಕೂಲಂಕಷವಾಗಿ ಮಾಹಿತಿ ಸಂಗ್ರಹಿಸುತ್ತಿದೆ.

ವಿದ್ಯಾರ್ಥಿನಿಯರಿಂದ ಭಾರಿ ಪ್ರತಿಭಟನೆ

ಇನ್ನು ಲೈಂಗಿಕ ಕಿರುಕುಳ ಮತ್ತು ಕಾಲೇಜಿಗೆ ದುಷ್ಕರ್ಮಿಗಳ ಅಕ್ರಮ ಪ್ರವೇಶಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ವಿದ್ಯಾರ್ಥಿನಿಯರು ಕಾಲೇಜು ಆವರಣದಲ್ಲೇ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸುತ್ತಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಕಾಲೇಜು ಆಡಳಿತ ಮಂಡಳಿ ಮತ್ತು ದೆಹಲಿ ಪೊಲೀಸರಿಗೆ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com