'ಆಪ್' ಗೆಲುವು: ಭರವಸೆ, ನಿರೀಕ್ಷೆ ಬೆಟ್ಟದಷ್ಟು: ಸವಾಲಿನ ಹಾದಿಯಲ್ಲಿ ಯಶಸ್ವಿಯಾಗುತ್ತಾರಾ ಕೇಜ್ರಿವಾಲ್?

ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ದೆಹಲಿಯ ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಗದ್ದುಗೆ ಏರಲು ಸಜ್ಜಾಗಿದ್ದಾರೆ. 
'ಆಪ್' ಗೆಲುವು: ಭರವಸೆ, ನಿರೀಕ್ಷೆ ಬೆಟ್ಟದಷ್ಟು: ಸವಾಲಿನ ಹಾದಿಯಲ್ಲಿ ಯಶಸ್ವಿಯಾಗುತ್ತಾರಾ ಕೇಜ್ರಿವಾಲ್?

ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ದೆಹಲಿಯ ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಗದ್ದುಗೆ ಏರಲು ಸಜ್ಜಾಗಿದ್ದಾರೆ. 


ಆಮ್ ಆದ್ಮಿ ಪಕ್ಷ ಈ ಬಾರಿ ಕೂಡ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಿದೆ. ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನ್ನು ಮಣಿಸಿ ಸದ್ಯಕ್ಕೆ ದೆಹಲಿಗೆ ಸೀಮಿತವಾಗಿರುವ ಪಕ್ಷವೊಂದು ಇಷ್ಟೊಂದು ಮತಗಳ ಅಂತರದಲ್ಲಿ ಗೆಲುವು ಕಾಣುವುದು ಸಣ್ಣ ವಿಷಯವಲ್ಲ. ಆದರೆ ಮುಂದಿನ ದಿನಗಳಲ್ಲಿ ಅರವಿಂದ್ ಕೇಜ್ರಿವಾಲ್ ಹಾದಿ ಸುಲಭವೇನಲ್ಲ. 


ಈ ಬಾರಿಯ ಚುನಾವಣೆಯ ಆರಂಭದಲ್ಲಿ ಮತಯಾಚನೆ, ಪ್ರಚಾರ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ತಮ್ಮ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಕಳೆದ 5 ವರ್ಷಗಳ ಪಕ್ಷದ ವರದಿ ಕಾರ್ಡನ್ನು ಜನರ ಮುಂದೆ ಮಂಡಿಸಿದ್ದರು. ಆಪ್ ಮತ್ತೆ ಅಧಿಕಾರಕ್ಕೆ ಬಂದರೆ ಮುಂದಿನ 5 ವರ್ಷಗಳಲ್ಲಿ ಏನೇನು ಮಾಡುತ್ತೇವೆ ಎಂದು ಪಕ್ಷದ ಕೆಲಸಗಳ ನೀಲನಕ್ಷೆಯನ್ನು ಸಹ ಜನರ ಮುಂದಿಟ್ಟಿದ್ದರು.


ರಾಜಧಾನಿ ದೆಹಲಿಯನ್ನು ಇನ್ನಿಲ್ಲದಂತೆ ಕಾಡುತ್ತಿರುವ ದಟ್ಟ ವಾಯುಮಾಲಿನ್ಯದಿಂದ ಕಾಪಾಡುವುದು, ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸುವುದು, ದಿನಪೂರ್ತಿ ಜನರಿಗೆ ವಿದ್ಯುತ್ ಮತ್ತು ನೀರಿನ ಪೂರೈಕೆ, ಸಂಚಾರ ದಟ್ಟಣೆಯಿಂದ ರಸ್ತೆಗಳನ್ನು ಮುಕ್ತ ಮಾಡುವುದು, ಶಿಕ್ಷಣ, ಆರೋಗ್ಯ ವ್ಯವಸ್ಥೆ, ಯುಮುನಾ ನದಿ ಶುದ್ಧೀಕರಣ ಹೀಗೆ ಹತ್ತು ಹಲವು ಕೆಲಸಗಳನ್ನು ಆಪ್ ಕೈಗೊಂಡಿದೆ.


ಆದರೆ ಬಹುತೇಕ ತ್ಯಾಜ್ಯ ವಿಲೇವಾರಿ ಕೆಲಸ ಮತ್ತು ಸ್ವಚ್ಛತಾ ಕೆಲಸ ಬಿಜೆಪಿ ಆಡಳಿತವಿರುವ ನಗರಪಾಲಿಕೆ ಕೆಳಗೆ ಬರುವುದರಿಂದ ಅಲ್ಲಿ ಆಪ್ ಸ್ಥಳೀಯ ಪಾಲಿಕೆ ಮಟ್ಟದಲ್ಲಿ ಆಪ್ ಅಧಿಕಾರವಿಲ್ಲದಿರುವುದರಿಂದ ಅದರ ಕೆಲಸಕ್ಕೆ ಅಡ್ಡಿಯಾಗಬಹುದು.ಇನ್ನು ದಿನಪೂರ್ತಿ ಎಲ್ಲಾ ಮನೆಗಳಿಗೆ ಕುಡಿಯುವ ನೀರು ಒದಗಿಸುವುದು ಕೂಡ ಬಹುದೊಡ್ಡ ಸವಾಲು. ದೆಹಲಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲ, ನೀರು ಶುಚಿಯಾಗಿಲ್ಲ ಎಂದು ಕೇಂದ್ರ ಸರ್ಕಾರದ ವರದಿ ಹೇಳಿದ್ದು ಜನರಿಗೆ ಶುದ್ಧ ಕುಡಿಯುವ ನೀರು ದಿನಪೂರ್ತಿ ಒದಗಿಸುವುದು ಸಹ ಕಷ್ಟದ ಕೆಲಸವೇ.


ಇನ್ನು ಮೂಲಸೌಕರ್ಯಗಳಾದ ಉತ್ತಮ ರಸ್ತೆ, ಚರಂಡಿ ವ್ಯವಸ್ಥೆ, ಮೊಹಲ್ಲಾ ಕ್ಲಿನಿಕ್ ಗಳನ್ನು 1,700ಕ್ಕೂ ಅಧಿಕ ಅನಧಿಕೃತ ಕಾಲೊನಿಗಳಲ್ಲಿ ಸ್ಥಾಪಿಸುವುದು ಕೂಡ ಕೇಜ್ರಿವಾಲ್ ನೇತೃತ್ವದ ಪಕ್ಷ ಜನರಿಗೆ ನೀಡಿರುವ ಭರವಸೆಯಾಗಿದ್ದು ಅವುಗಳನ್ನು ಈಡೇರಿಸುವುದು ಅಷ್ಟು ಸುಲಭವಲ್ಲ.


ಇನ್ನೊಂದು ದೊಡ್ಡ ಕೆಲಸ ಯಮುನಾ ನದಿ ನೀರು ಶುದ್ಧೀಕರಣ. ನದಿಯ ದಂಡೆಯನ್ನು ಸ್ವಚ್ಛಗೊಳಿಸಿ ಅದನ್ನು ಒಂದು ಸುಂದರ ಪ್ರವಾಸಿ ತಾಣವನ್ನಾಗಿ ಮಾಡಬೇಕಾಗಿದೆ. ಈ ಯೋಜನೆಗೆ ಅಕ್ಕಪಕ್ಕದ ರಾಜ್ಯಗಳ ಸಹಕಾರವೂ ಬೇಕು, ಅವುಗಳಲ್ಲಿ ಒಂದು ಪಕ್ಕದ ರಾಜ್ಯದಲ್ಲಿ ಬಿಜೆಪಿ ಆಡಳಿತವಿದೆ. ಅಲ್ಲಿಂದ ಈ ಯೋಜನೆಗೆ ಸಹಕಾರ ಪಡೆಯುವುದು ಕಷ್ಟ.


ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು, ಮೆಟ್ರೊ ಸಂಪರ್ಕ ಜಾಲವನ್ನು ಮತ್ತು ರಸ್ತೆ ಸಂಪರ್ಕ ಜಾಲವನ್ನು ವೃದ್ಧಿಸುವುದಾಗಿ ಆಪ್ ಹೇಳಿದೆ. ಇದಕ್ಕಾಗಿ 3 ಸಾವಿರ ಬಸ್ಸುಗಳು, ಸಾವಿರ ಎಲೆಕ್ಟ್ರಿಕ್ ಬಸ್ಸುಗಳನ್ನು ದೆಹಲಿ ಸಂಚಾರ ನಿಗಮ ಖರೀದಿಸಬೇಕಾಗಿದೆ. ಇದಕ್ಕೆ ಸಾಕಷ್ಟು ಹಣ ಬೇಕು. 


ಜಗತ್ತಿನಲ್ಲಿ ಹಲವು ನಗರಗಳು ಇರುವಂತೆ ದೆಹಲಿಯನ್ನು 24*7 ನಗರವನ್ನಾಗಿ ಮಾಡಬೇಕೆಂದು ಆಮ್ ಆದ್ಮಿ ಪಾರ್ಟಿ ಯೋಚಿಸುತ್ತಿದೆ. ಈ ಯೋಜನೆ ಆರಂಭಿಕ ಹಂತದಲ್ಲಿದ್ದು ಇದನ್ನು ಜಾರಿಗೆ ತರಬೇಕಾದರೆ ಸಾಕಷ್ಟು ಸಿದ್ದತೆ ಬೇಕಾಗುತ್ತದೆ. 
ಈ ಮಧ್ಯೆ ಹಲವು ಸುಧಾರಣೆ ಕ್ರಮಗಳನ್ನು ತಂದು ಮತ್ತೊಮ್ಮೆ ಅಧಿಕಾರಕ್ಕೆ ಬಂದಿರುವ ಆಪ್ ಕಾರ್ಯವೈಖರಿಯನ್ನು ಅದರ ಮಿತ್ರಪಕ್ಷಗಳು ಮತ್ತು ವಿರೋಧ ಪಕ್ಷಗಳು ಬಹಳ ಹತ್ತಿರದಿಂದ ಗಮನಿಸುವುದಂತೂ ಸುಳ್ಳಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com