'ಸುಪ್ರೀಂ' ಚಾಟಿ ಬೆನ್ನಲ್ಲೇ, ಯೂಟರ್ನ್ ಹೊಡೆದ 'ಡಾಟ್', ಆದೇಶ ವಾಪಸ್!

ಟೆಲಿಕಾಂ ಕಂಪನಿಗಳು ಬಾಕಿ ಉಳಿಸಿ ಕೊಂಡಿರುವ ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜಿಆರ್‌)ದ ಹಣದು ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಚಾಟಿ ಬೀಸುತ್ತಲೇ ಕೇಂದ್ರ ಟೆಲಿಕಮ್ಯುನಿಕೇಷನ್ ಇಲಾಖೆ ತಾನು ಹೊರಡಿಸಿದ್ದ ಆದೇಶವನ್ನು ಹಿಂದಕ್ಕೆ ಪಡೆದಿದೆ.

Published: 14th February 2020 04:54 PM  |   Last Updated: 14th February 2020 04:56 PM   |  A+A-


defaulting telecom companies

ಸಂಗ್ರಹ ಚಿತ್ರ

Posted By : Srinivasamurthy VN
Source : The New Indian Express

ನವದೆಹಲಿ: ಟೆಲಿಕಾಂ ಕಂಪನಿಗಳು ಬಾಕಿ ಉಳಿಸಿ ಕೊಂಡಿರುವ ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜಿಆರ್‌)ದ ಹಣದು ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಚಾಟಿ ಬೀಸುತ್ತಲೇ ಕೇಂದ್ರ ಟೆಲಿಕಮ್ಯುನಿಕೇಷನ್ ಇಲಾಖೆ (DoT) ತಾನು ಹೊರಡಿಸಿದ್ದ ಆದೇಶವನ್ನು ಹಿಂದಕ್ಕೆ ಪಡೆದಿದೆ.

ಹೌದು.. ಟೆಲಿಕಾಂ ಕಂಪನಿಗಳು ಬಾಕಿ ಉಳಿಸಿ ಕೊಂಡಿರುವ ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜಿಆರ್‌)ದ ಹಣ ಪಾವತಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದ ಹೊರತಾಗಿಯೂ ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಆದೇಶ ಹೊರಡಿಸಿದ್ದ ಕೇಂದ್ರ ಟೆಲಿಕಮ್ಯುನಿಕೇಷನ್ ಇಲಾಖೆ ಇದೀಗ ಸುಪ್ರೀಂ ಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದೆ. 

ಈ ಕುರಿತು ನಡೆದ ವಿಚಾರಣೆಯಲ್ಲಿ ದೂರಸಂಪರ್ಕ ಕಂಪನಿಗಳು ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜಿಆರ್‌) 1.47 ಲಕ್ಷ ಕೋಟಿ ರೂ ಪಾವತಿಸುವಂತೆ ನೀಡಿದ್ದ ಆದೇಶ ಪಾಲನೆಯಾಗದಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಟೆಲಿಕಾಂ ಕಂಪನಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. 

ಇಂದು ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ಎಸ್‌.ಅಬ್ದುಲ್‌ ನಜೀರ್‌ ಹಾಗೂ ಎಂ.ಆರ್‌.ಷಾ ಅವರನ್ನೊಳಗೊಂಡ ನ್ಯಾಯಪೀಠವು, ದೂರಸಂಪರ್ಕ ಇಲಾಖೆ ಅಧಿಕಾರಿಯ ಹಾಗೂ ಟೆಲಿಕಾಂ ಕಂಪನಿಗಳ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿತು. ಎಜಿಆರ್‌ ಸಂಬಂಧ ಕೋರ್ಟ್‌ ನೀಡಿದ್ದ ಆದೇಶಕ್ಕೆ ತಡೆ ನೀಡಿರುವ ಬಗ್ಗೆ ಪ್ರಸ್ತಾಪಿಸಿ, 'ಡೆಸ್ಕ್‌ ಆಫೀಸರ್‌ (ಕಾನೂನು, ಆದೇಶಗಳ ಜಾರಿ ಮೇಲ್ವಿಚಾರಣೆ ಮತ್ತು ಸಮನ್ವಯ ಅಧಿಕಾರಿ) ತಮ್ಮನ್ನು ತಾವೇ ನ್ಯಾಯಾಧೀಶರೆಂದು ಭಾವಿಸಿ ನಮ್ಮ ಆದೇಶಕ್ಕೆ ತಡೆ ನೀಡಿದ್ದಾರೆ. ಯಾರ್ರೀ ಆ ಡೆಸ್ಕ್‌ ಆಫೀಸರ್‌? ತಕ್ಷಣ ಕರೆಸ್ರೀ ಇಲ್ಲಿಗೆ. ದೇಶದಲ್ಲಿ ಏನಾದರೂ ಕಾನೂನು ಉಳಿದುಕೊಂಡಿದೆಯೇ?' ಎಂದು ಕೋರ್ಟ್‌ ಆಕ್ರೋಶ ವ್ಯಕ್ತಪಡಿಸಿತ್ತು. 

ಅಲ್ಲದೇ ನಾವು ನೀಡುವ ಆದೇಶಕ್ಕೆ ತಡೆ ನೀಡುವ ಮೂಲಕ ಈ ದೇಶದ ನ್ಯಾಯಾಲಯಗಳನ್ನು ಮುಚ್ಚಿಸಬೇಕು ಎಂದುಕೊಂಡಿದ್ದೀರೇನು? ನಿಮ್ಮೆಲ್ಲರ ವಿರುದ್ಧವೂ ನ್ಯಾಯಾಂಗ ನಿಂದನೆ ಪ್ರಕರಣ ಹಾಕುತ್ತೇವೆ. ನ್ಯಾಯಾಲಯ ನೀಡುವ ಆದೇಶಕ್ಕೆ ಡೆಸ್ಕ್ ಆಫೀಸರ್ ತಡೆ ನೀಡಲು ಹೇಗೆ ಸಾಧ್ಯ..? ದೇಶದಲ್ಲಿ ನ್ಯಾಯ ಉಳಿದಿದೆಯೇ? ಎಂದು ಪೀಠವು ಆಕ್ರೋಶ ವ್ಯಕ್ತಪಡಿಸಿತು. ಈ ವೇಳೆ ನ್ಯಾಯಾಲಯದ ಮುಂದಿನ ಆದೇಶದವರೆಗೂ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತೇ ಹೊರತು ನ್ಯಾಯಾಲಯದ ಆದೇಶವನ್ನು ತಡೆದಿಲ್ಲ ಎಂಬ ಡೆಸ್ಕ್ ಆಫೀಸರ್ ಪರ ವಕೀಲರ ವಾದವನ್ನೂ ಅಲ್ಲಗಳೆದ ಪೀಠವು , ಡೆಸ್ಕ್ ಆಫೀಸರ್, ಭಾರ್ತಿ ಏರ್‌ಟೆಲ್‌, ವೊಡಾಫೋನ್‌ ಐಡಿಯಾ, ಎಂಟಿಎನ್‌ಎಲ್‌, ಬಿಎಸ್‌ಎನ್ಎಲ್‌, ರಿಲಯನ್ಸ್‌ ಕಮ್ಯುನಿಕೇಷನ್ಸ್‌, ಟಾಟಾ ಟೆಲಿಕಮ್ಯುನಿಕೇಷನ್ಸ್‌ ಹಾಗೂ ಇತರೆ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರು ಮಾರ್ಚ್‌ 17ರಂದು ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿತು. 

ಈ ಬೆಳವಣಿಗೆ ಬೆನ್ನಲ್ಲೇ ಕೇಂದ್ರ ಟೆಲಿಕಮ್ಯುನಿಕೇಷನ್ ಇಲಾಖೆ ಈ ಹಿಂದೆ ತಾನು ಹೊರಡಿಸಿದ್ದ 'ಯಾವುದೇ ಕ್ರಮವಿಲ್ಲ' ಎಂಬ ಆದೇಶವನ್ನು ಇದೀಗ ವಾಪಸ್ ಪಡೆದಿದೆ.

ಈ ಹಿಂದೆ ಸರ್ಕಾರಕ್ಕೆ ಬಾಕಿ ಇರುವ ಶುಲ್ಕ ಪಾವತಿಸುವಂತೆ ಆದೇಶಿಸಿ 2019ರ ಅಕ್ಟೋಬರ್‌ನಲ್ಲಿ ನೀಡಿದ್ದ ತೀರ್ಪು ಮರು ಪರಿಶೀಲಿಸುವಂತೆ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್‌ ಐಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಜನವರಿ 16ರಂದು ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು. ಜನವರಿ 23ರೊಳಗೆ ಬಡ್ಡಿ ಹಾಗೂ ದಂಡ ಸಹಿತ ಬಾಕಿ ಮೊತ್ತ ಪಾವತಿಸುವಂತೆ ಸೂಚಿಸಿತ್ತು.  ಸರ್ಕಾರಕ್ಕೆ ದೂರಸಂಪರ್ಕ ಕಂಪನಿಗಳು ಪರವಾನಗಿ ಶುಲ್ಕ 92,642 ಕೋಟಿ ರೂ ಹಾಗೂ ತರಂಗಾಂತರಗಳ ಬಳಕೆ ಶುಲ್ಕ 55,054 ಕೋಟಿ ರೂ ಬಾಕಿ ಇರುವುದಾಗಿ ಸಚಿವ ರವಿಶಂಕರ್‌ ಪ್ರಸಾದ್‌ ಲೋಕಸಭೆಗೆ ತಿಳಿಸಿದ್ದರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp