ಪಿಎಸ್ಎ ಅಡಿ ಒಮರ್ ಅಬ್ದುಲ್ಲಾ ಬಂಧನ: ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ಸುಪ್ರೀಂ ನೋಟಿಸ್

ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫೆರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ)ಅಡಿಯಲ್ಲಿ ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ....
ಒಮರ್ ಅಬ್ದುಲ್ಲಾ
ಒಮರ್ ಅಬ್ದುಲ್ಲಾ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫೆರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ)ಅಡಿಯಲ್ಲಿ ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ನೋಟಿಸ್ ಜಾರಿ ಮಾಡಿದೆ.

ಪಿಎಸ್ಎ ಅಡಿ ಒಮರ್ ಅಬ್ದುಲ್ಲಾ ಬಂಧನ ಪ್ರಶ್ನಿಸಿ ಅವರ ಸಹೋದರಿ ಸಾರಾ ಅಬ್ದುಲ್ಲಾ ಪೈಲಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಹಾಗೂ ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ಸುಪ್ರೀಂ ಪೀಠ, ಈ ಸಂಬಂಧ ಕೇಂದ್ರಾಡಳಿತ ಪ್ರದೇಶಕ್ಕೆ ನೋಟಿಸ್ ನೀಡಿ ವಿಚಾರಣೆಯನ್ನು ಮಾರ್ಚ್ 2ಕ್ಕೆ ಮುಂದೂಡಿದೆ.

ಸಾರಾ ಪೈಲಟ್ ಪರ ಕಾಂಗ್ರೆಸ್​ ಹಿರಿಯ ಮುಖಂಡ, ಹಿರಿಯ ವಕೀಲ ಕಪಿಲ್​ ಸಿಬಲ್​ ವಾದ ಮಂಡಿಸಿದರು. ಅರ್ಜಿ ವಿಚಾರಣೆ ವೇಳೆ ಜಮ್ಮು ಮತ್ತು ಕಾಶ್ಮೀರ ಅಧಿಕಾರಿಗಳಿಗೆ, ಒಮರ್​ ಮುನ್ನೆಚ್ಚರಿಕಾ ಬಂಧನದ ಬಗ್ಗೆ ಉತ್ತರಿಸುವಂತೆ ಸೂಚಿಸಿತು.

ಈ ವೇಳೆ ಕಪಿಲ್​ ಸಿಬಲ್ ಅವರು,​ ಅರ್ಜಿ ಸಂಬಂಧ ತುರ್ತು ಆದೇಶ ನೀಡುವಂತೆ ಕೋರಿದರು. ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿಗಳು, ಅರ್ಜಿ ಸಲ್ಲಿಸಲು ಒಂದು ವರ್ಷವೇ ಕಾದಿದ್ದೀರಿ, ಇನ್ನೊಂದು ಹದಿನೈದು ದಿನ ಕಾದರೆ ಏನಾಗಲಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಪಿಲ್​ ಸಿಬಲ್​ ಅರ್ಜಿ ಸಲ್ಲಿಕೆಗೆ ಒಂದು ವರ್ಷ ಕಾದಿಲ್ಲ. ಇದು ವ್ಯಕ್ತಿಯೊಬ್ಬರ ವೈಯಕ್ತಿಕ ಸ್ವಾತಂತ್ರ್ಯದ ಕುರಿತಾದ ಅರ್ಜಿ, ಅವರ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ಹೀಗಾಗಿ ಪ್ರಕರಣ ಸಂಬಂಧ ಶೀಘ್ರ ತೀರ್ಪು ನೀಡಬೇಕು ಎಂದು ಮನವಿ ಮಾಡಿದರು.

ಅಬ್ದುಲ್ಲ ಬಂಧನ ವಾಕ್ ಸ್ವಾತಂತ್ರ್ಯ ಸೇರಿದಂತೆ ಸಾಂವಿಧಾನಿಕ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ ಮತ್ತು ಇದು ಎಲ್ಲಾ ರಾಜಕೀಯ ಪ್ರತಿಸ್ಪರ್ಧಿಗಳನ್ನು ಹತ್ತಿಕ್ಕುವ, ನಿಯಂತ್ರಿಸುವ ಹುನ್ನಾರವಾಗಿದೆ ಎಂದೂ ಸಾರಾ ಪೈಲಟ್ ಅರ್ಜಿಯಲ್ಲಿ ದೂರಿದ್ದರು.

ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ ನಂತರ ಒಮರ್ ಅಬ್ದುಲ್ಲಾರನ್ನು ಬಂಧಿಸಲಾಗಿತ್ತು. ಕಳೆದ ವಾರ ಪಿಎಸ್ಎ ಕಾಯ್ದೆಯನ್ವಯ ಬಂಧನದ ಅವಧಿಯನ್ನು ವಿಸ್ತರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com