ಲೈಬ್ರರಿಯಲ್ಲಿ ಪೋಲಿಸ್ ದೌರ್ಜನ್ಯದ ವಿಡಿಯೋ ವೈರಲ್ : ನಮ್ಮಿಂದ ಬಿಡುಗಡೆಯಾಗಿಲ್ಲ- ಜಾಮಿಯಾ ಮಿಲಿಯಾ ಇಸ್ಲಾಮಿಯಾ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೊಲೀಸ್ ದೌರ್ಜನ್ಯದ ವಿಡಿಯೋ ನಮ್ಮಿಂದ ಬಿಡುಗಡೆಯಾಗಿಲ್ಲ ಎಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಹೇಳಿದೆ.
ಸಿಸಿಟಿವಿಯಲ್ಲಿ ಪೊಲೀಸ್ ದೌರ್ಜನ್ಯ
ಸಿಸಿಟಿವಿಯಲ್ಲಿ ಪೊಲೀಸ್ ದೌರ್ಜನ್ಯ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೊಲೀಸ್ ದೌರ್ಜನ್ಯದ ವಿಡಿಯೋ ನಮ್ಮಿಂದ ಬಿಡುಗಡೆಯಾಗಿಲ್ಲ ಎಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಹೇಳಿದೆ.

ಡಿಸೆಂಬರ್ 15 ರ ರಾತ್ರಿ ಗ್ರಂಥಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ರಿಸರ್ಚ್ ಸ್ಕಾಲರ್ ಗಳ ಮೇಲೆ ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸುತ್ತಿರುವ ವಿಡಿಯೋ ಇದಾಗಿದ್ದು, ಉದ್ದೇಶಪೂರ್ವಕವಾಗಿಯೇ ಬಿಡುಗಡೆ ಮಾಡಲಾಗಿದೆ ಎಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಆಡಳಿತ ಮಂಡಳಿ ತಿಳಿಸಿದೆ.

ಡಾ. ಝಕೀರ್ ಹುಸೈನ್ ಲೈಬ್ರರಿ ವಿಭಾಗದಲ್ಲಿ ಎಂಪಿಲ್ ಹಾಗೂ ಪಿಹೆಚ್ ಡಿ ವಿದ್ಯಾರ್ಥಿಗಳಿರುವ ವಿಡಿಯೋ ಕಂಡುಬಂದಿದೆ. ಈ ವಿಡಿಯೋವನ್ನು ಜಾಮಿಯಾ ಸಮನ್ವಯ ಸಮಿತಿ ಬಿಡುಗಡೆ ಮಾಡಿದೆ ಎಂಬುದು ತಿಳಿದುಬಂದಿದೆ.ಈ ಪ್ರಕರಣದ ವಿಚಾರಣೆಗಾಗಿ ದೆಹಲಿ ಪೊಲೀಸರಿಗೆ ಎಲ್ಲಾ ರೀತಿಯ ಮಾಹಿತಿಯನ್ನು ನೀಡಲಾಗುವುದು ಎಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಹ್ಮದ್ ಅಜೀಂ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯಲ್ಲಿನ ಹೊಸ ವಿಡಿಯೋ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುವುದಾಗಿ ಬೆಳಗ್ಗೆ  ದೆಹಲಿ ಪೊಲೀಸ್ ವಿಶೇಷ ಆಯುಕ್ತ ಪ್ರವೀರ್ ರಂಜನ್ ಸುದ್ದಿಗಾರರಿಗೆ ಹೇಳಿದ್ದರು.

ಕ್ಯಾಂಪಸ್ ನಲ್ಲಿರುವ ಲೈಬ್ರರಿಯಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಹಲ್ಲೆ ಮಾಡಿ ಹೊರಗೆ ತಳ್ಳುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಈ ವಿಡಿಯೋವನ್ನು  ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಹಳೆಯ ವಿದ್ಯಾರ್ಥಿಗಳನ್ನು ಪ್ರತಿನಿಧಿಸುವ  ಜಾಮಿಯಾ ಸಮನ್ವಯ ಸಮಿತಿ  ಟ್ವಿಟರ್ ನಲ್ಲಿ ಶೇರ್ ಮಾಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com