ಸಿಎಎ ಬಗ್ಗೆ ಭಯಪಡುವ ಅಗತ್ಯವಿಲ್ಲ: ಪ್ರಧಾನಿ ಮೋದಿ ಭೇಟಿ ಬಳಿಕ ಉದ್ಧವ್ ಠಾಕ್ರೆ ಹೇಳಿಕೆ

ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ದೇಶದ ಯಾವುದೇ ಪ್ರಜೆ ಅಥವಾ ದೇಶದ ಅಲ್ಪ ಸಂಖ್ಯಾತರು ಯಾವುದೇ ರೀತಿಯ ಭಯ ಪಡುವ ಅಗತ್ಯವಿಲ್ಲ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಉದ್ಧವ್ ಠಾಕ್ರೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಉದ್ಧವ್ ಠಾಕ್ರೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ದೇಶದ ಯಾವುದೇ ಪ್ರಜೆ ಅಥವಾ ದೇಶದ ಅಲ್ಪ ಸಂಖ್ಯಾತರು ಯಾವುದೇ ರೀತಿಯ ಭಯ ಪಡುವ ಅಗತ್ಯವಿಲ್ಲ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಇಂದು ದೆಹಲಿಗೆ ತೆರಳಿದ್ದ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಹಿಂದೆ ಮೋದಿ ಸರ್ಕಾರದ ನಿಲುವುಗಳನ್ನು ಖಂಡಿಸಿದ್ದ ಉದ್ಧವ್ ಬಿಜೆಪಿ ಮೈತ್ರಿ ಕಡಿದುಕೊಂಡು ಎನ್ ಸಿಪಿ, ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದರು. ಹೀಗಾಗಿ ಉದ್ಧವ್ ಠಾಕ್ರೆ ಅವರ ದೆಹಲಿ ಭೇಟಿ ಕುತೂಹಲ ಕೆರಳಿಸಿತ್ತು. 

ಇದೀಗ ಪ್ರಧಾನಿ ಭೇಟಿ ಬಳಿಕ ಮಾಧ್ಯಮಗಳಿಗೆ ಈ ಕುರಿತು ಮಾತನಾಡಿದ ಉದ್ಧವ್ ಠಾಕ್ರೆ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಸಮಾಲೋಚನೆ ನಡೆಸಿದೆ. ಮಹಾರಾಷ್ಟ್ರ ಅಭಿವೃದ್ಧಿ ವಿಚಾರವಾಗಿ ಸಾಕಷ್ಟು ಮಾತುಕತೆ ನಡೆಸಿದ್ದು, ಮಹಾರಾಷ್ಟ್ರದ ಸಮಸ್ಯೆ ಕುರಿತು ಚರ್ಚೆ ನಡೆಸಿದ್ದೇನೆ. ಪ್ರಧಾನಿ ಮೋದಿ ಮಹಾರಾಷ್ಟ್ರ ಅಭಿವೃದ್ದಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಅಂತೆಯೇ ಸಿಎಎ, ಎನ್ ಪಿಆರ್ ಮತ್ತು ಎನ್ ಆರ್ ಸಿ ವಿಚಾರವಾಗಿಯೂ ನಾನು ಚರ್ಚೆ ನಡೆಸಿದ್ದು, ಸಿಎಎ ಕುರಿತು ಯಾವುದೇ ಭಯ ಪಡುವ ಅಗತ್ಯವಿಲ್ಲ. ಅಂತೆಯೇ ಎನ್ ಪಿಆರ್ ನಿಂದಾಗಿ ದೇಶದ ಯಾವುದೇ ಪ್ರಜೆಯನ್ನು ದೇಶದಿಂದ ಹೊರಗಟ್ಟಲಾಗುವುದಿಲ್ಲ ಎಂದು ಹೇಳಿದರು.

ಸಿಎಎ ವಿಚಾರವಾಗಿ ಮಹಾರಾಷ್ಟ್ರದಲ್ಲಿ ಮಹಾ ಅಘಾಡಿ ಮೈತ್ರಿಕೂಟದಲ್ಲಿ ಭಿನ್ನಮತ ಸ್ಫೋಟಗೊಂಡಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮಹಾ ಅಘಾಡಿ ಮೈತ್ರಿಕೂಟದಲ್ಲಿ ಯಾವುದೇ ರೀತಿಯ ಭಿನ್ನಮತವಿಲ್ಲ. ನಮ್ಮ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com