ಫಾರುಖ್, ಮುಫ್ತಿ ಶೀಘ್ರಗತಿ ಬಿಡುಗಡೆಗೆ ಪ್ರಾರ್ಥಿಸುತ್ತೇನೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಗೃಹ ಬಂಧನದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಮೂವರು ಮಾಜಿ ಮುಖ್ಯಮಂತ್ರಿಗಳ ಶೀಘ್ರಗತಿ ಬಿಡುಗಡೆಗೆ ಪ್ರಾರ್ಥನೆ ಮಾಡುತ್ತೇನೆಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಗೃಹ ಬಂಧನದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಮೂವರು ಮಾಜಿ ಮುಖ್ಯಮಂತ್ರಿಗಳ ಶೀಘ್ರಗತಿ ಬಿಡುಗಡೆಗೆ ಪ್ರಾರ್ಥನೆ ಮಾಡುತ್ತೇನೆಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ಹೇಳಿದ್ದಾರೆ. 

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನ 370ನೇ ವಿಧಿಯನ್ನು ಆಗಸ್ಟ್ 5 ರಂದು ಕೇಂದ್ರದ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್'ಡಿಎ ಸರ್ಕಾರ ರದ್ದುಗೊಳಿಸಿದ್ದು, 370ನೇ ವಿಧಿ ರದ್ದುಗೊಂಡ ಬಳಿಕ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಹಲವು ರಾಜಕೀಯ ನಾಯಕರು ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಫಾರೂಖ್ ಅಬ್ದುಲ್ಲಾ, ಅವರ ಪುತ್ರ ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿಯವರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು. 

ಇದಾದ ಬಳಿಕ ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದ್ದಂತೆಯೇ ನಿಧಾನಗತಿಯಲ್ಲಿ ರಾಜಕೀಯ ನಾಯಕರನ್ನು ಬಿಡುಗಡೆ ಮಾಡಲಾಯಿತು. ಆದರೆ, ಈ ವರೆಗೂ ಫಾರೂಖ್ ಅಬ್ದುಲ್ಲಾ, ಮೆಹಬೂಹಾ ಮುಫ್ತಿಯವರನ್ನು ಬಿಡುಗಡೆ ಮಾಡಲಾಗಿಲ್ಲ. 

ಈ ಕುರಿತು ಸುದ್ದಿವಾಹಿನಿಯೊಂದು ನಡೆಸಿರುವ ಸಂದರ್ಶನದಲ್ಲಿ ಮಾತನಾಡಿರುವ ರಾಜನಾಥ್ ಸಿಂಗ್ ಅವರು, ಕಾಶ್ಮೀರ ಇದೀಗ ಶಾಂತಿಯುತವಾಗಿದೆ. ಪರಿಸ್ಥಿತಿ ಸುಧಾರಿಸಿದೆ. ಪರಿಸ್ಥಿತಿ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ಬಿಡುಗಡೆ ಬಗ್ಗೆಯೂ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಸರ್ಕಾರ ಯಾರಿಗೂ ಕಿರುಕುಳ ನೀಡಿಲ್ಲ. ಕಾಶ್ಮೀರ ಹಿತಾಸಕ್ತಿ ಹಿನ್ನೆಲೆಯಲ್ಲಿ ಕೆಲ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ಕ್ರಮವನ್ನು ಪ್ರತೀಯೊಬ್ಬರೂ ಸ್ವಾಗತಿಸಿದ್ದಾರೆಂದು ಹೇಳಿದ್ದಾರೆ. 

ಫಾರೂಖ್ ಅಬ್ದುಲ್ಲಾ ಹಾಗೂ ಮುಫ್ತಿಯವರು ಶೀಘ್ರಗತಿಯಲ್ಲಿ ಬಿಡುಗಡೆಯಾಗಲಿ ಎಂದು ಪ್ರಾರ್ಥಿಸುತ್ತೇನೆ. ಅಲ್ಲದೆ, ಬಿಡುಗಡೆ ಬಳಿಕವೂ ಕಾಶ್ಮೀರದ ಪರಿಸ್ಥಿತಿ ಸುಧಾರಿಸಲು ಹಾಗೂ ಕಾಶ್ಮೀರ ಅಭಿವೃದ್ಧಿಗಾಗಿ ಅವರು ಕಾರ್ಯನಿರ್ವಹಿಸಲಿ ಎಂದೂ ಕೂಡ ಪ್ರಾರ್ಥಿಸುತ್ತೇನೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com