ಭಾರತದಲ್ಲಿ ಅಮೆರಿಕಾ ಅಧ್ಯಕ್ಷ: ಇಂಡೋ-ಯುಎಸ್ ಜಾಗತಿಕ ಪಾಲುದಾರಿಗೆ ಕುರಿತು ಮೋದಿ-ಟ್ರಂಪ್ ನಡುವೆ ಮಹತ್ವದ ಮಾತುಕತೆ

ಭಾರತಕ್ಕೆ 2 ದಿನಗಳ ಕಾಲ ಪ್ರವಾಸ ಆರಂಭಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಮಂಗಳವಾರ ಬೆಳಿಗ್ಗೆ 11.30ಕ್ಕೆ ರಾಜಧಾನಿ ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. 
ಪ್ರಧಾನಿ ಮೋದಿ ಹಾಗೂ ಅಮೆರಿಕಾ ಅಧ್ಯಕ್ಷ ಟ್ರಂಪ್
ಪ್ರಧಾನಿ ಮೋದಿ ಹಾಗೂ ಅಮೆರಿಕಾ ಅಧ್ಯಕ್ಷ ಟ್ರಂಪ್

ನವದೆಹಲಿ: ಭಾರತಕ್ಕೆ 2 ದಿನಗಳ ಕಾಲ ಪ್ರವಾಸ ಆರಂಭಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಮಂಗಳವಾರ ಬೆಳಿಗ್ಗೆ 11.30ಕ್ಕೆ ರಾಜಧಾನಿ ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. 

ಭೇಟಿ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮೆರಿಕಾ ಅಧ್ಯಕ್ಷ ಇಂಡೋ-ಯುಸ್ ಜಾಗತಿಕ ಪಾಲುದಾರಿಕೆ ಸೇರಿದಂತೆ ಹಲವು ದ್ವಿಪಕ್ಷೀಯ ವಿಚಾರಗಳ ಕುರಿತು ಉಭಯ ನಾಯಕರು ಮಹತ್ವದ ಮಾತುಕತೆ ನಡೆಸಲಿದ್ದು, ಹಲವು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆಂದು ಹೇಳಲಾಗುತ್ತಿದೆ. 

ಇದಕ್ಕೂ ಮುನ್ನ ಬೆಳಿಗ್ಗೆ 10ಗಂಟೆ ರಾಷ್ಟ್ರಪತಿ ಭವನಕ್ಕೆ ಟ್ರಂಪ್ ಆಗಮಿಸಲಿದ್ದು, ಬೆಳಿಗ್ಗೆ 10.45ರ ಸುಮಾರಿಗೆ ರಾಜಘಾಟ್ ನಲ್ಲಿ ಗಾಂಧಿ ಸಮಾಧಿಗೆ ನಮನ ಸಲ್ಲಿಸಲಿದ್ದಾರೆ. 

ಬೆಳಿಗ್ಗೆ 11.30ರ ಸುಮಾರಿಗೆ ಹೈದರಾಬಾದ್ ಹೌಸ್'ಗೆ ತೆರಳಲಿರುವ ಟ್ರಂಪ್ ಅವರ ನಿಯೋಗ, ಅಧಿಕೃತ ಚರ್ಚೆ, ಒಪ್ಪಂದಗಳಿಗೆ ಸಹಿಹಾಕಲಿದ್ದಾರೆ. ಮೋದಿ-ಟ್ರಂಪ್ ನಡುವಿನ ಸಭೆ ಮುಕ್ತಾಯಗೊಂಡ ಬಳಿಕ ಉಭಯ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

ಬೆಳಿಗ್ಗೆ 11.30ಕ್ಕೆ ಮೆಲಾನಿಯಾ ಟ್ರಂಪ್ ಅವರು ದೆಹಲಿಯ ಸರ್ಕಾರಿ ಶಾಲೆಗೆ ಭೇಟಿ ನೀಡಲಿದ್ದು, ಈ ವೇಳೆ ಮಕ್ಕಳೊಂದಿಗೆ ಮಾತುಕತೆ ನಡೆಸಲಿದ್ದಾರೆ. 

ಮಧ್ಯಾಹ್ನ 3 ಗಂಟೆಗೆ ಅಮೆರಿಕಾ ರಾಯಭಾರಿ ಕಚೇರಿಯಲ್ಲಿ ಟ್ರಂಪ್ ಮತ್ತು ಅವರ ನಿಯೋಗದಿಂದ ಭಾರತದ ಉದ್ಯಮಿಗಳೊಂದಿಗೆ ದುಂಡು ಮೇಜಿನ ಸಭೆ ನಡೆಯಲಿದೆ. ರಾತ್ರಿ 8 ಗಂಟೆಗೆ ಟ್ರಂಪ್ ಕುಟುಂಬಕ್ಕೆ ರಾಷ್ಟ್ರಪತಿ ಭವನದಲ್ಲಿ ಔತಣಕೂಟ ಏರ್ಪಡಿಸಲಾಗಿದೆ. ರಾತ್ರಿ 10 ಗಂಟೆಗೆ ಟ್ರಂಪ್ ಮತ್ತು ಅವರ ನಿಯೋಗ ಏರ್ ಫೋರ್ಸ್ ಒನ್ ಮೂಲಕ ಅಮೆರಿಕಾಕ್ಕೆ ಪ್ರಯಾಣಿಸಲಿದೆ. 

ಭಾರತ ಭೇಟಿಯ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದ ಅಮೆರಿಕಾದ ಅಧ್ಯಕ್ಷ ಟ್ರಂಪ್ ತಮ್ಮನ್ನು ಪ್ರಧಾನಿ ಮೋದಿ ಸ್ವಾಗತಿಸಿದ ರೀತಿಗೆ ಅಕ್ಷರಶಃ ಮನಸೋತಿದ್ದಾರೆ. ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಬರಮಾಡಿಕೊಂಡು ಸಾಬರಮತಿ ಆಶ್ರಮಕ್ಕೆ 22 ಕಿಮೀ ರೋಡ್ ಶೋದಲ್ಲಿ ಕರೆದೊಯ್ದು, ಅಲ್ಲಿಂದ ಜಗತ್ತಿನ ಅತಿದೊಡ್ಡ ಮೊಟೆರಾ ಸ್ಟೇಡಿಯಂನಲ್ಲಿ ಲಕ್ಷಾಂತರ ಜನರಿಂದ ಅದ್ದೂರಿ ಸ್ವಾಗತ ನೀಡಿದ ರೀತಿ ಟ್ರಂಪ್ ಅವರ ಮೆಚ್ಚುಗೆಗ ಪಾತ್ರವಾಗಿದೆ. 

ತಮ್ಮ ಭಾಷಣ ಹಾಗೂ ಟ್ವೀಟ್ ಗಳಲ್ಲಿ ಈ ಕುರಿತು ಟ್ರಂಪ್ ವ್ಯಕ್ತಪಡಿಸಿದ ತೃಪ್ತಿ ಹಾಗೂ ಮೋದಿ ಕುರಿತು ಪದೇ ಪದೇ ಆಡಿರುವ ಮೆಚ್ಚುಗೆಯ ಮಾತುಗಳು ಗಮನ ಸೆಳೆಯುವಂತಿವೆ. ನಾಲ್ಕು ವರ್ಷದ ಹಿಂದೆ ಅಧಿಕಾರಕ್ಕೆ ಬಂದಾಗಿನಿಂದಲೂ ಟ್ರಂಪ್ ಅವರು ಭಾರತದ ಬಗ್ಗೆ ಹಾಗೂ ಪ್ರಧಾನಿ ಮೋದಿ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸುತ್ತ ಬಂದಿದ್ದರು. ಅದರಿಂದಾಗಿ ಉಭಯ ದೇಶಗಳ ನಡುವೆ ಬೆಳೆಯುತ್ತ ಬಂದ ಬಾಂಧವ್ಯವು ಈಗಿನ ಭೇಟಿಯಿಂದ ಇನ್ನಷ್ಟು ಗಟ್ಟಿಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com