ಶಾಂತಿ ಕಾಪಾಡಿ, ಎಂಥದ್ದೇ ಸಮಯದಲ್ಲೂ ಭ್ರಾತೃತ್ವ ಮರೆಯದಿರಿ: ಪ್ರಧಾನಿ ಮೋದಿ ಮನವಿ

ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ನಮ್ಮ ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯವೇ ಮುಖ್ಯ. ದೆಹಲಿಯ ನನ್ನ ಸಹೋದರ, ಸಹೋದರಿಯರು ದಯವಿಟ್ಟು ಸಹನೆಯಿಂದ ಇರಬೇಕು. ಎಂಥದ್ದೇ ಸಮಯದಲ್ಲೂ ಭ್ರಾತೃತ್ವವನ್ನು ಕಾಪಾಡಬೇಕು. ಆದಷ್ಟು ಶೀಘ್ರವೇ ದೆಹಲಿ ಸಹಜಸ್ಥಿತಿಗೆ ಮರಳುವುದು ತುಂಬ ಮುಖ್ಯ ಎಂದು ಹೇಳಿದ್ದಾರೆ.

ಅಂತೆಯೇ ದೆಹಲಿಯ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಗಲಭೆ ಪರಿಸ್ಥಿತಿಯ ಬಗ್ಗೆ ವ್ಯಾಪಕ ಪರಿಶೀಲನೆ, ಶಾಂತಿ ಕಾಪಾಡಲು, ಪರಿಸ್ಥಿತಿಯನ್ನು ನಿಯಂತ್ರಣ ಮಾಡಲು ದೆಹಲಿ ಪೊಲೀಸರು, ಭದ್ರತಾ ಸಿಬ್ಬಂದಿ ಪ್ರಯತ್ನ ಪಡುತ್ತಿದ್ದಾರೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಕಳೆದ ಮೂರು ದಿನಗಳಿಂದಲೂ ಈಶಾನ್ಯ ದೆಹಲಿಯಲ್ಲಿ ಸಿಎಎ ಪರ-ವಿರೋಧಿ ಬಣಗಳ ನಡುವೆ ಸಂಘರ್ಷ ಭುಗಿಲೆದ್ದಿದ್ದು, ಹಿಂಸಾಚಾರಕ್ಕೆ ತಲುಪಿದೆ. 20 ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಭಾರತಕ್ಕೆ ಆಗಮಿಸಿದ ಸಂದರ್ಭದಲ್ಲಿಯೇ ಇತ್ತ ಪ್ರತಿಭಟನಾಕಾರರ ಸಂಘರ್ಷವೂ ಹೆಚ್ಚಿತ್ತು. ನಿನ್ನೆಯವರೆಗೂ ಅಮೆರಿಕ ಅಧ್ಯಕ್ಷರ ಜತೆ ದ್ವಿಪಕ್ಷೀಯ ಮಾತುಕತೆ, ಸಭೆಗಳಲ್ಲಿ ತೊಡಗಿಕೊಂಡಿದ್ದ ಪ್ರಧಾನಿ ಮೋದಿ ಇದೀಗ ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com