ನಿಯಮದಂತೆಯೇ ಜಡ್ಜ್ ಮುರಳೀಧರ್ ವರ್ಗಾವಣೆ: ಕೇಂದ್ರ ಸರ್ಕಾರದ ಸ್ಪಷ್ಟನೆ

ಕೊಲಿಜಿಯಂ ವ್ಯವಸ್ಥೆಯ ನಿಯಮಾವಳಿಗಳಂತೆಯೇ ಹೈಕೋರ್ಟ್ ನ್ಯಾಯಮೂರ್ತಿ ಮುರಳೀಧರ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊಲಿಜಿಯಂ ವ್ಯವಸ್ಥೆಯ ನಿಯಮಾವಳಿಗಳಂತೆಯೇ ಹೈಕೋರ್ಟ್ ನ್ಯಾಯಮೂರ್ತಿ ಮುರಳೀಧರ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.

ಮುರಳೀಧರ್ ಅವರ ವರ್ಗಾವಣೆ ಕುರಿತಂತೆ ಭುಗಿಲೆದ್ದಿರುವ ವಿವಾದ ಸಂಬಂಧ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ರವಿಶಂಕರ್ ಪ್ರಸಾದ್ ಅವರು, ಸುಪ್ರೀಂ ಕೋರ್ಟ್ ನ ಕೊಲಿಜಿಯಂ ವ್ಯವಸ್ಥೆಗೆ ಅನುಗುಣವಾಗಿಯೇ ವರ್ಗಾವಣೆ ಪ್ರಕ್ರಿಯೆ ನಡೆದಿದೆ. ನ್ಯಾಯಮೂರ್ತಿಗಳ ವರ್ಗಾವಣೆಯಲ್ಲಿ ಯಾವುದೇ ರೀತಿಯ ರಾಜಕೀಯ ಇಲ್ಲ. ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಂತೆಯೇ ಮುರಳೀಧರ್ ಅವರ ವರ್ಗಾವಣೆ ಪ್ರಕ್ರಿಯೇ ರಾತ್ರೋ ರಾತ್ರಿಯದ್ದಲ್ಲ. ಫೆಬ್ರವರಿ 12ರಂದೇ ಈ ಕುರಿತಂತೆ ಶಿಫಾರಸ್ಸು ಬಂದಿತ್ತು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೇ ಶಿಫಾರಸ್ಸು ಮಾಡಿದ್ದರು ಎಂದು ರವಿಶಂಕರ್ ಪ್ರಸಾದ್ ಟ್ವಿಟರ್ ನಲ್ಲಿ ಹೇಳಿದ್ದಾರೆ.

ನಿನ್ನೆಯಷ್ಟೇ ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದ ನಾಯಕರ ವಿರುದ್ಧ ಎಫ್ಐಆರ್ ದಾಖಲಾಗದೆ ಇರುವುದನ್ನು ನ್ಯಾಯಮೂರ್ತಿ ಮುರಳಿಧರ್ ಅವರು ಕಠಿಣವಾಗಿ ಪ್ರಶ್ನಿಸಿದ್ದರು. ಅಲ್ಲದೆ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. ದೆಹಲಿಯಲ್ಲಿ 1984ರಂತಹ ಮತ್ತೊಂದು ಪರಿಸ್ಥಿತಿಯನ್ನು ನಗರದಲ್ಲಿ ತನ್ನ ಕಾವಲಿನಲ್ಲಿ ನಡೆಯಲು ಅನುಮತಿಸುವುದಿಲ್ಲ. ನಾವು ಜಾಗರೂಕರಾಗಿರಬೇಕು, ಸಾಕಷ್ಟು ಸಂಖ್ಯೆಯಲ್ಲಿ ಸಹಾಯವಾಣಿ ಸ್ಥಾಪಿಸಬೇಕು, ಸ್ಥಳಾಂತರಗೊಂಡವರಿಗೆ ಆಶ್ರಯ ನೀಡಬೇಕು, ದ್ವೇಷಭಾಷಣ ಮಾಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್, ಸಂಸದ ಪರ್ವೇಶ್ ವರ್ಮಾ ಮತ್ತು ಮಾಜಿ ಶಾಸಕ ಕಪಿಲ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಿಸುವ ವಿಚಾರದಲ್ಲಿ ಗುರುವಾರ ನಿರ್ಧಾರ ಕೈಗೊಳ್ಳು ವಂತೆ ನ್ಯಾಯಮೂರ್ತಿಗಳಾದ ಎಸ್.ಮುರಳೀಧರ್ ಹಾಗೂ ಎ.ಜೆ.ಭಂಭಾನಿ ಅವರ ಪೀಠವು ಆದೇಶ ನೀಡಿತ್ತು.

ಈ ಬೆಳವಣಿಗೆಯ ಬೆನ್ನಲ್ಲೇ  ರಾತ್ರೋರಾತ್ರಿ ರಾಷ್ಟ್ರಪತಿಯವರು ನ್ಯಾಯಮೂರ್ತಿ ಮುರಳೀಧರ್ ಅವರನ್ನು ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ನ ನ್ಯಾಯಾಧೀಶರಾಗಿ ವರ್ಗಾವಣೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com