ನಿರ್ಭಯಾ ಕೇಸು: ಸುಪ್ರೀಂ ಕೋರ್ಟ್ ನಲ್ಲಿ ಕ್ಯುರೇಟಿವ್ ಅರ್ಜಿ ಸಲ್ಲಿಸಿದ ಅಪರಾಧಿ ವಿನಯ್ ಶರ್ಮ

ಬದುಕಿನ ಕೊನೆಯ ಪ್ರಯತ್ನವೆಂಬಂತೆ ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಶರ್ಮ ಸುಪ್ರೀಂ ಕೋರ್ಟ್ ನಲ್ಲಿ ಗುರುವಾರ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದಾನೆ.
ವಿನಯ್ ಶರ್ಮ
ವಿನಯ್ ಶರ್ಮ

ನವದೆಹಲಿ: ಬದುಕಿನ ಕೊನೆಯ ಪ್ರಯತ್ನವೆಂಬಂತೆ ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಶರ್ಮ ಸುಪ್ರೀಂ ಕೋರ್ಟ್ ನಲ್ಲಿ ಗುರುವಾರ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದಾನೆ.

ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಗಲ್ಲಿಗೇರಿಸುವಂತೆ ದೆಹಲಿಯ ಪಟಿಯಾಲ ಕೋರ್ಟ್ ಮೊನ್ನೆ ಸೋಮವಾರ ಘೋಷಿಸಿದ ಬಳಿಕ ವಿನಯ್ ಶರ್ಮ ಇಂದು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾನೆ.

ತಿಹಾರ್ ಜೈಲಿನಲ್ಲಿ ಜನವರಿ 22ರಂದು ಮುಕೇಶ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮ ಮತ್ತು ಅಕ್ಷಯ್ ಕುಮಾರ್ ಸಿಂಗ್ ನನ್ನು ಗಲ್ಲಿಗೇರಿಸಲಾಗುತ್ತದೆ. ನ್ಯಾಯಾಲಯ ಗಲ್ಲು ಶಿಕ್ಷೆ ಪ್ರಕಟಿಸುತ್ತಿದ್ದಂತೆ ನಾಲ್ವರು ಅಪರಾಧಿಗಳು ಭಾವೋದ್ರೇಕಕ್ಕೊಳಗಾಗಿ ಅತ್ತಿದ್ದರು.

2012ರ ಡಿಸೆಂಬರ್ 16ರಂದು 23 ವರ್ಷದ ಯುವತಿ ನಿರ್ಭಯಾ ಮತ್ತು ಆಕೆಯ ಸ್ನೇಹಿತ ದೆಹಲಿಯಲ್ಲಿ ಸಿನಿಮಾ ವೀಕ್ಷಣೆ ಮಾಡಿ ಖಾಸಗಿ ಬಸ್ಸಿನಲ್ಲಿ ಮನೆಗೆ ಹಿಂತಿರುಗಿ ಬರುತ್ತಿದ್ದ ಕೇವಲ 6 ಮಂದಿಯಿದ್ದ ಚಲಿಸುತ್ತಿದ್ದ ಬಸ್ಸಿನಲ್ಲಿ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿ ಕಬ್ಬಿಣದ ರಾಡ್ ನಿಂದ ಹಿಂಸೆ ನೀಡಿ ರಸ್ತೆಯಲ್ಲಿ ಎಸೆದು ಹೋಗಿದ್ದರು.

ನಂತರ ಆಸ್ಪತ್ರೆಗೆ ಸೇರಿಸಿದ್ದ ಆಕೆ ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 29ರಂದು ಮೃತಪಟ್ಟಿದ್ದಳು. ಅತ್ಯಾಚಾರವೆಸಗಿದ್ದ ಆರು ಮಂದಿಯಲ್ಲಿ ರಾಮ್ ಸಿಂಗ್ ಎಂಬುವವನು ಜೈಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರೆ ಮತ್ತೊಬ್ಬ ಅಪ್ರಾಪ್ತನಾಗಿದ್ದರಿಂದ ಮೂರು ವರ್ಷ ಕಳೆದ ನಂತರ ಬಿಡುಗಡೆಯಾಗಿದ್ದನು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com