ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 300ಕ್ಕೂ ಹೆಚ್ಚು ಭಯೋತ್ಪಾದಕರಿಗೆ ಪಾಕಿಸ್ತಾನ ತರಬೇತಿ: ಗುಪ್ತಚರ ಇಲಾಖೆ ಮಾಹಿತಿ

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ(ಪಿಒಕೆ) ಆಫ್ಘಾನಿಸ್ತಾನದ ಕೆಲವರು ಸೇರಿದಂತೆ ಸುಮಾರು 300 ಭಯೋತ್ಪಾದಕರು ತರಬೇತಿ ಪಡೆಯುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದೊಂದಿಗೆ ಗುಪ್ತಚರ ಇಲಾಖೆ ಹಂಚಿಕೊಂಡ ಮಾಹಿತಿಯಿಂದ ತಿಳಿದುಬಂದಿದೆ. 
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 300ಕ್ಕೂ ಹೆಚ್ಚು ಭಯೋತ್ಪಾದಕರಿಗೆ ಪಾಕಿಸ್ತಾನ ತರಬೇತಿ: ಗುಪ್ತಚರ ಇಲಾಖೆ ಮಾಹಿತಿ

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಆಫ್ಘಾನಿಸ್ತಾನದ ಕೆಲವರು ಸೇರಿದಂತೆ ಸುಮಾರು 300 ಭಯೋತ್ಪಾದಕರು ತರಬೇತಿ ಪಡೆಯುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದೊಂದಿಗೆ ಗುಪ್ತಚರ ಇಲಾಖೆ ಹಂಚಿಕೊಂಡ ಮಾಹಿತಿಯಿಂದ ತಿಳಿದುಬಂದಿದೆ. 


ಇಂತಹ ಉಗ್ರರ ಲಾಂಚ್ ಪ್ಯಾಡ್ ಗಳನ್ನು ಗುರಿಯಾಗಿಟ್ಟು ನೀಲಮ್ ಕಣಿವೆಯ ಪ್ರದೇಶದಲ್ಲಿ ಭಾರತೀಯ ಸೇನೆ 6ರಿಂದ 10 ಪಾಕಿಸ್ತಾನಿ ಉಗ್ರರನ್ನು ಕೊಂದು ಹಾಕಿದ ಕೇವಲ ಮೂರು ತಿಂಗಳಲ್ಲೇ ಈ ಮಾಹಿತಿ ಲಭ್ಯವಾಗಿದೆ.


ಗುಪ್ತಚರ ಇಲಾಖೆಯ ಇತ್ತೀಚಿನ ವರದಿ ಪ್ರಕಾರ, ಸುಮಾರು 40ರಿಂದ 50 ಭಯೋತ್ಪಾದಕರ ಲಾಂಚ್ ಪ್ಯಾಡ್ ಗಳು ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಸಕ್ರಿಯವಾಗಿದ್ದು ಅವುಗಳಿಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಮತ್ತು ಪಾಕಿಸ್ತಾನ ಸೇನೆ ಭಯೋತ್ಪಾದಕರಿಗೆ ತರಬೇತಿ ಕೊಡುತ್ತಿವೆ ಎಂಬ ಮಾಹಿತಿ ಬಹಿರಂಗವಾಗಿದೆ.


ಈ ಉಗ್ರಗಾಮಿಗಳು ಭಾರತದೊಳಕ್ಕೆ ನುಸುಳಿ ಜಮ್ಮು-ಕಾಶ್ಮೀರ ಮತ್ತು ಇತರ ನಗರಗಳಲ್ಲಿ ದಾಳಿ ನಡೆಸಲು ಸಜ್ಜಾಗಿವೆ ಎಂಬ ಎಚ್ಚರಿಕೆಯನ್ನು ಸಹ ನೀಡಲಾಗಿದೆ.

ಇದೇ ತಿಂಗಳ 26ರಂದು ಗಣರಾಜ್ಯೋತ್ಸವ ಮೊದಲು ಈ ನಿಟ್ಟಿನಲ್ಲಿ ಭಾರತದ ಪ್ರಮುಖ ನಗರಗಳಲ್ಲಿ ಉನ್ನತ ಮಟ್ಟದ ಮುನ್ನೆಚ್ಚರಿಕೆ ಘೋಷಿಸಲಾಗಿದೆ. ಪಾಕಿಸ್ತಾನ ಮೂಲದ ಜೈಶ್ ಇ ಮೊಹಮ್ಮದ್ ಸಂಘಟನೆಯಿಂದ 300ಕ್ಕೂ ಹೆಚ್ಚು ಉಗ್ರಗಾಮಿಗಳಿಗೆ ತರಬೇತಿ ನೀಡಲಾಗುತ್ತಿದ್ದು ಅವರು ಗಡಿಯನ್ನು ದಾಟಿ ಭಾರತದೊಳಕ್ಕೆ ನುಗ್ಗಲು ತಯಾರಾಗಿದ್ದಾರೆ ಎಂದು ಗುಪ್ತಚರ ಇಲಾಖೆಯ ವರದಿ ತಿಳಿಸಿದೆ.


ಭಾರತ-ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯ ಪಾಕ್ ಆಕ್ರಮಿತ ಕಾಶ್ಮೀರ ಹತ್ತಿರ ನೀಲಮ್, ಲೀಪ ಮತ್ತು ತಂಗ್ದಾರ್ ಕಣಿವೆ ಪ್ರದೇಶಗಳಲ್ಲಿ ಭಯೋತ್ಪಾದಕರ ಲಾಂಚ್ ಪ್ಯಾಡ್ ಗಳಿವೆ ಎಂದು ವರದಿ ತಿಳಿಸಿದೆ.


ಕಳೆದ ವರ್ಷ ಭಾರತ ಸೇನೆ ಬಾಲಾಕೋಟ್ ವೈಮಾನಿಕ ದಾಳಿ ನಡೆಸಿದ ನಂತರ ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿರುವ ಹಲವು ಲಾಂಚ್ ಪ್ಯಾಡ್ ಗಳಿಗೆ ಹಾನಿಯಾಗಿವೆ ಎಂದು ಗೃಹ ಸಚಿವಾಲಯ ಅಧಿಕಾರಿಗಳು ಹೇಳುತ್ತಾರೆ.


ಜೈಶ್ ಇ ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ನ ಸೋದರ ಮುಫ್ತಿ ರೌಫ್ ಅಸ್ಗರ್ ಭಾರತದ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದು ಭಯೋತ್ಪಾದಕರಿಗೆ ಈ ಲಾಂಚ್ ಪ್ಯಾಡ್ ನಲ್ಲಿ ತರಬೇತಿ ನೀಡಲು ಸೂಚಿಸಿದ್ದಾನೆ ಎಂಬ ಮಾಹಿತಿಯನ್ನು ಕೂಡ ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ನೀಡಿದೆ.


ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಗಡಿ ದಾಟಿ ಭಾರತದೊಳಗೆ ನುಸುಳುವವರ ಸಂಖ್ಯೆ ಕೂಡ ಹೆಚ್ಚಾಗಿದ್ದು ಹಿಂದಿನ ವರ್ಷ 53 ಮಂದಿ ಒಳನುಗ್ಗಿದ್ದರೆ ಕಳೆದ ವರ್ಷ ಅದು 84ಕ್ಕೇರಿದೆ. ಅದರಲ್ಲಿ ಯಶಸ್ವಿಯಾಗಿ ಒಳನುಸುಳಲು ಸಾಧ್ಯವಾಗಿದ್ದು 32 ಮಂದಿಗೆ ಎಂದು ಗೃಹ ಸಚಿವಾಲಯ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com