ಸಿಎಎ ನಿಮ್ಮ ಪೌರತ್ವ ಕಸಿದುಕೊಳ್ಳುವುದಿಲ್ಲ, ಬದಲಿಗೆ ಪೌರತ್ವ ಕೊಡುತ್ತದೆ ಎಂದು ಸಾರಿ ಹೇಳುತ್ತೇನೆ: ಪ್ರಧಾನಿ ಮೋದಿ 

ಪೌರತ್ವ ತಿದ್ದುಪಡಿ ಕಾಯ್ದೆ ನಿಮ್ಮ ಪೌರತ್ವವನ್ನು ಕಿತ್ತುಕೊಳ್ಳುವುದಲ್ಲ, ಬದಲಾಗಿ ಪೌರತ್ವ ನೀಡುವುದು ಎಂದು ಮತ್ತೊಮ್ಮೆ ಸಾರಿ ಹೇಳುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಛರಿಸಿದ್ದಾರೆ.

Published: 12th January 2020 10:08 AM  |   Last Updated: 12th January 2020 11:24 AM   |  A+A-


Posted By : Sumana Upadhyaya
Source : PTI

ಕೋಲ್ಕತ್ತಾ: ಪೌರತ್ವ ತಿದ್ದುಪಡಿ ಕಾಯ್ದೆ ನಿಮ್ಮ ಪೌರತ್ವವನ್ನು ಕಿತ್ತುಕೊಳ್ಳುವುದಲ್ಲ, ಬದಲಾಗಿ ಪೌರತ್ವ ನೀಡುವುದು ಎಂದು ಮತ್ತೊಮ್ಮೆ ಸಾರಿ ಹೇಳುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಛರಿಸಿದ್ದಾರೆ.


ಅವರು ಇಂದ ಕೋಲ್ಕತ್ತಾದ ಬೇಲೂರು ಮಠದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ನಡೆದ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಿಎಎ ಬಗ್ಗೆ ಪ್ರಸ್ತಾಪಿಸಿದರು. ಈ ಕಾಯ್ದೆಯನ್ನು ರಾತ್ರಿ ಹಗಲಾಗುವುದರೊಳಗೆ ತರಲಿಲ್ಲ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಿ, ಚರ್ಚೆ ನಡೆಸಿ ಸದಸ್ಯರ ಅಂಗೀಕಾರ ಸಿಕ್ಕಿದ ಮೇಲೆಯೇ ಜಾರಿಯಾಗಿದ್ದು. ಇದರ ಬಗ್ಗೆ ಯುವಕರಿಗೆ ತಪ್ಪು ಮಾಹಿತಿ ನೀಡಿ ದಾರಿತಪ್ಪಿಸಲಾಗುತ್ತಿದೆ. ಯುವಜನತೆಗೆ ಇದನ್ನು ಅರ್ಥ ಮಾಡಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.


ರಾಜಕೀಯದ ಆಟ ಆಡುವವರು ಉದ್ದೇಶಪೂರ್ವಕವಾಗಿ ಸಿಎಎ ಬಗ್ಗೆ ತಿಳಿದುಕೊಳ್ಳಲು ಹೋಗುವುದಿಲ್ಲ. ಇದರಿಂದ ನಮ್ಮ ದೇಶದ ನಾಗರಿಕರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಭರವಸೆ ಕೊಟ್ಟರು.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಮಹಾತ್ಮಾ ಗಾಂಧಿ ಮತ್ತು ಇತರ ನಾಯಕರು ಪಾಕಿಸ್ತಾನದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗುವ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡಬೇಕೆಂದೇ ಪ್ರತಿಪಾದಿಸಿದ್ದರು. ಸಿಎಎಯಿಂದಾಗಿ ಜನರಿಗೆ ಇಂದು ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನಗಳ ಧಾರ್ಮಿಕ ಅಲ್ಪಸಂಖ್ಯಾತರು ಎದುರಿಸುತ್ತಿರುವ ಕಿರುಕುಳದ ಬಗ್ಗೆ ಅರಿವಾಗುತ್ತಿದೆ. ಹೀಗಿರುವಾಗ ವಿರೋಧ ಪಕ್ಷಗಳ ನಾಯಕರು ರಾಜಕೀಯ ಲಾಭಕ್ಕಾಗಿ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು.


ನವ ಭಾರತದ ನಿರ್ಣಯವನ್ನು ಯುವಜನತೆ ಸಾಕಾರಗೊಳಿಸಲು ಸಾಧ್ಯ. ಸಮಸ್ಯೆಗಳಿಂದ ಪಲಾಯನವಾಗುವುದಲ್ಲ, ಅದನ್ನು ಎದುರಿಸಿ ಬಗೆಹರಿಸಬೇಕು ಎಂದು ಇಂದಿನ ಯುವಜನತೆ ಕಲಿಸಿಕೊಡುತ್ತಾರೆ ಎಂದರು.


ಸ್ವಾಮಿ ವಿವೇಕಾನಂದರ ಶ್ರೇಷ್ಠ ಮಾತುಗಳನ್ನು ನಾವು ಇಂದಿಗೂ ಸ್ಮರಿಸಿ ನವ ಭಾರತದ ಉದಯ ಮತ್ತು ಬೆಳವಣಿಗೆಗೆ ಅವರ ಮಾತುಗಳಂತೆ ನಡೆದುಕೊಂಡು ಹೋಗುವ ಅವಶ್ಯಕತೆಯಿದೆ. ನನಗೆ ಶಕ್ತಿಶಾಲಿ, ಉತ್ಸಾಹಿ 100 ಯುವಕರನ್ನು ಕೊಡಿ, ದೇಶವನ್ನು ಬದಲಾಯಿಸುತ್ತೇನೆ ಎಂದು ವಿವೇಕಾನಂದರು ಹೇಳಿದ್ದ ಮಾತುಗಳನ್ನು ಸ್ಮರಿಸಿದ ಪ್ರಧಾನಿ ಭಾರತದಲ್ಲಿ ಬದಲಾವಣೆ ಕಾಣಬೇಕಾದರೆ ನಮ್ಮಲ್ಲಿ ಶಕ್ತಿ ಮತ್ತು ಉತ್ಸಾಹಗಳು ಅತಿ ಮುಖ್ಯ ಎಂದರು.


ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಮಹಾತ್ಮಾ ಗಾಂಧಿ ಮತ್ತು ಇತರ ನಾಯಕರು ಪಾಕಿಸ್ತಾನದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗುವ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡಬೇಕೆಂದೇ ಪ್ರತಿಪಾದಿಸಿದ್ದರು. ಇಂದು ಅದೇ ಪಕ್ಷದ ನಾಯಕರು ರಾಜಕೀಯ ಲಾಭಕ್ಕಾಗಿ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು.


ಪ್ರಧಾನಿಯವರ ಭಾಷಣದ ಹೈಲೈಟ್ಸ್ ಗಳು:
ರಾಷ್ಟ್ರೀಯ ಯುವ ದಿನದ ಅಂಗವಾಗಿ ದೇಶದ ಯುವಜನತೆಗೆ ಶುಭಾಶಯಗಳು. ಈ ಸಂದರ್ಭದಲ್ಲಿ ಕೋಲ್ಕತ್ತಾದ ಬೇಲೂರು ಮಠಕ್ಕೆ ಭೇಟಿ ನೀಡುವುದು ಯಾತ್ರೆಗೆ ಹೋದಂತಹ ಅನುಭವ ನೀಡುತ್ತಿದೆ. ಇಲ್ಲಿ ಉಳಿದುಕೊಳ್ಳಲು ನನಗೆ ಅವಕಾಶ ಮಾಡಿಕೊಟ್ಟ ಮಠದ ಅಧ್ಯಕ್ಷರಿಗೆ ಮತ್ತು ಸರ್ಕಾರಕ್ಕೆ ನನ್ನ ವಂದನೆಗಳು. 


ಕಳೆದ ಬಾರಿ ನಾನು ಇಲ್ಲಿಗೆ ಬಂದಿದ್ದಾಗ ಸ್ವಾಮಿ ಆತ್ಮಾನಂದ ಅವರ ಆಶೀರ್ವಾದ ಪಡೆದಿದ್ದೆ. ಇಂದು ಅವರು ಭೌತಿಕವಾಗಿ ನಮ್ಮೊಂದಿಗಿಲ್ಲ. ಆದರೆ ಅವರ ಕೆಲಸಗಳು, ಅವರು ಹಾಕಿಕೊಟ್ಟ ಮಾರ್ಗ ರಾಮಕೃಷ್ಣ ಮಿಷನ್ ರೂಪದಲ್ಲಿ ಎಂದೆಂದಿಗೂ ನಮಗೆ ಮಾರ್ಗದರ್ಶನ ನೀಡುತ್ತದೆ.


5 ವರ್ಷಗಳಲ್ಲಿ ದೇಶವನ್ನು ಯುವಜನತೆ ಮುನ್ನಡೆಸಿದ್ದಾರೆ. ಇಂದಿನ ಯುವಕರ ಮೇಲೆ ಸ್ವಾಮಿ ವಿವೇಕಾನಂದರ ಬೋಧನೆಗಳು ಬಹಳ ಪ್ರಭಾವ ಬೀರಿವೆ. ವಿಶ್ವವನ್ನು ಸಶಕ್ತಗೊಳಿಸುವ ಶಕ್ತಿ ಯುವಜನತೆಯಲ್ಲಿದೆ. ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತುತ್ತಾರೆ. ನಮ್ಮ ದೇಶದ ಯುವಜನತೆ ಮೇಲೆ ಇಡೀ ವಿಶ್ವದ ಗಮನವಿದೆ. ಅವರ ಶಕ್ತಿಯಿಂದ 21ನೇ ಶತಮಾನದಲ್ಲಿ ಬದಲಾವಣೆ ಕಂಡಿದೆ.
5 ವರ್ಷಗಳ ಹಿಂದೆ ಯುವಜನತೆಯಲ್ಲಿ ನಿರಾಸೆಯಿತ್ತು, ಆದರೆ ಇಂದು ಪರಿಸ್ಥಿತಿ ಬದಲಾಗಿದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp