ಸಿಎಎಯಲ್ಲಿ ಭಾರತೀಯರಿಂದ ಪೌರತ್ವ ಕಸಿದುಕೊಳ್ಳುವ ಒಂದೇ ಒಂದು ನಿಬಂಧನೆ ತೋರಿಸಿ: ಪ್ರತಿಪಕ್ಷಗಳಿಗೆ ಶಾ ಸವಾಲ್ 

ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಯಾವುದೇ ಭಾರತೀಯರಿಂದ ಪೌರತ್ವ ಕಸಿದುಕೊಳ್ಳುವ ನಿಬಂಧನೆಯನ್ನು ತೋರಿಸಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸವಾಲ್ ಹಾಕಿದ್ದಾರೆ.
ಅಮಿತ್ ಶಾ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ
ಅಮಿತ್ ಶಾ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ

ಜಬಲ್ಫುರ:  ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಯಾವುದೇ ಭಾರತೀಯರಿಂದ ಪೌರತ್ವ ಕಸಿದುಕೊಳ್ಳುವ ನಿಬಂಧನೆಯನ್ನು ತೋರಿಸಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸವಾಲ್ ಹಾಕಿದ್ದಾರೆ.

ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ಹಾಗೂ ರಾಹುಲ್ ಗಾಂಧಿಗೆ ಚಾಲೆಂಜ್ ಹಾಕುತ್ತೇನೆ. ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಈ ದೇಶದ ಯಾವೊಬ್ಬ ಪ್ರಜೆಯಿಂದ ಪೌರತ್ವವನ್ನು ಕಸಿದುಕೊಳ್ಳುವ ಯಾವುದಾದರೊಂದು ನಿಬಂಧನೆಯನ್ನು ತೋರಿಸಲಿ ಎಂದರು.

ಮುಂದುವರೆದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ದೇಶ ವಿಭಜನೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸಿದೆ ಎಂದು ಆರೋಪಿಸಿದರು.ಪಾಕಿಸ್ತಾನದಿಂದ ವಲಸೆ ಬರುವ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವುದಾಗಿ ಆ ಪಕ್ಷದ ನಾಯಕರು  ಭರವಸೆ ನೀಡಿದ್ದರು ಎಂದರು.

"ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನ ಎರಡರಲ್ಲೂ ವಾಸಿಸುತ್ತಿದ್ದ ಹಿಂದೂಗಳು, ಸಿಖ್ಖರು, ಪಾರ್ಸಿಗಳು, ಜೈನರು ಇಲ್ಲಿಗೆ ಬರಲು ಬಯಸಿದ್ದರು, ಆದರೆ ರಕ್ತಪಾತದಿಂದಾಗಿ ಅವರು ಅಲ್ಲಿಯೇ ಇದ್ದರು. ಆಗ ನಮ್ಮ ದೇಶದ ನಾಯಕರು ಅವರನ್ನು ಇಲ್ಲಿಗೆ ಬಂದರೆ ಸ್ವಾಗತಿಸಲಾಗುವುದು ಮತ್ತು ಪೌರತ್ವ ನೀಡುವುದಾಗಿ ಭರವಸೆ ನೀಡಿದ್ದರು ಎಂದು ಅಮಿತ್ ಶಾ ತಿಳಿಸಿದರು.

ದೇಶ ವಿಭಜನೆಯಾದಾಗ ಪೂರ್ವ ಹಾಗೂ ಪಶ್ಚಿಮ ಪಾಕಿಸ್ತಾನದಲ್ಲಿ ಶೇ.30 ರಷ್ಟು ಹಿಂದುಗಳಿದ್ದರು. ಆದರೆ, ಇದೀಗ ಪಾಕಿಸ್ತಾನದಲ್ಲಿ ಕೇವಲ ಶೇ. 3 ಹಾಗೂ ಬಾಂಗ್ಲಾದೇಶದಲ್ಲಿ ಶೇ, 7 ರಷ್ಟು ಹಿಂದೂಗಳಿದ್ದಾರೆ. ನನ್ನ ಹಿಂದೂ, ಸಿಖ್, ಸಿಂಧಿ ಸಹೋದರರು ಎಲ್ಲಿದ್ದಾರೆ ಎಂದು ಕಣ್ಣು ಕಾಣಿಸದ ಕಿವಿ ಕೇಳಿಸದ  ಕಾಂಗ್ರೆಸ್ ಮುಖಂಡರನ್ನು ಕೇಳಲು ಬಯಸುತ್ತೇನೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com