ಭಾರತೀಯ ಮುಸ್ಲೀಮರ ಮೇಲೆ ಸಿಎಎ ಪರಿಣಾಮ ಬೀರಲ್ಲ: ಸುಬ್ರಮಣಿಯನ್ ಸ್ವಾಮಿ

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಅಕ್ರಮವಾಗಿ ವಲಸೆ ಬಂದವರಿಗೆ ಪೌರತ್ವ ದೊರೆಯಲಿದ್ದು, ದೇಶದ ಮುಸ್ಲಿಂರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಅಕ್ರಮವಾಗಿ ವಲಸೆ ಬಂದವರಿಗೆ ಪೌರತ್ವ ದೊರೆಯಲಿದ್ದು, ದೇಶದ ಮುಸ್ಲಿಂರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಸಾರ್ವಜನಿಕ ಕ್ಷೇತ್ರದಲ್ಲಿ 50 ವರ್ಷಗಳ ಸೇವೆಗಾಗಿ  ವಿರಾಟ್ ಹಿಂದೂಸ್ಥಾನ ಸಂಗಮದಿಂದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಅನೇಕ ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಕಾಯ್ದೆಯನ್ನು ಅವರು ಓದಿಲ್ಲ. ಕಾಂಗ್ರೆಸ್ ಪಕ್ಷದ ಬಹುತೇಕ ಮಂದಿ ಓದಿಲ್ಲ, ಬರೆದಿಲ್ಲ ಅನ್ನಿಸುತ್ತಿದೆ ಎಂದರು.

ಅಪ್ಘಾನಿಸ್ತಾನ , ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮವಾಗಿ ವಲಸೆ ಬಂದವರಿಗೆ ಯಾವುದೇ ದಾಖಲೆ ಇಲ್ಲದೆ ಉದ್ಯೋಗಾವಕಾಶ ಪಡೆಯಲು ಸಾಧ್ಯವಾಗುತ್ತಿಲ್ಲ. 70 ವರ್ಷಗಳಿಂದಲೂ ಅವರಿಗೆ ಪೌರತ್ವ ನೀಡುವುದಾಗಿ ಕಾಂಗ್ರೆಸ್ ಹೇಳುತ್ತಿದೆ ಹೊರತು ಅದನ್ನು ಅನುಷ್ಠಾನ ಮಾಡಲಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ನಮ್ಮಲ್ಲಿನ ಮುಸ್ಲಿಂ ಅಲ್ಪಸಂಖ್ಯಾತರು ಹಾಗೂ ಅವರ ಪೌರತ್ವದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಸ್ಪಷ್ಪಪಡಿಸಿದರು.

ಕಾಶ್ಮೀರ ವಿಚಾರವಾಗಿ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ, ಸಂವಿಧಾನದ ಕಲಂ 370 ರದ್ದತಿ ಬಗ್ಗೆಯೂ ಹೆಚ್ಚು ವಿರೋಧವಿತ್ತು. ಆದರೆ, ಏನಾಯಿತು ನೋಡಿ. ಅಲ್ಲಿ ಒಂದು ಗುಂಡು ಕೂಡ ಹಾರಿಸಲಾಗಿಲ್ಲ.ಅನೇಕ ಮಂದಿ ಜೈಲಿನಲ್ಲಿದ್ದಾರೆ. ಆದರೆ, ಅವರನ್ನು ಜೈಲಿನಿಂದ ಹೊರಗೆ ಬಿಟ್ಟರೆ ಅವರನ್ನು ಉಗ್ರರು ಹತ್ಯೆಗೈಯುತ್ತಾರೆ. ಅವರ ಸುರಕ್ಷತೆಗಾಗಿ ಬಂಧಿಸಲಾಗಿದೆ ಎಂದು ಯಾವುದೇ ಹೆಸರನ್ನೂ ಉಲ್ಲೇಖಿಸಿದೆ ಹೇಳಿದರು. 

ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಲು ನಾವು ಸಿದ್ಧರಿದ್ದೇವೆ ಎಂದು ಸುಬ್ರಮಣಿಸ್ವಾಮಿ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com