ನಿರ್ಭಯಾ ಅತ್ಯಾಚಾರ ಪ್ರಕರಣ: ಆರೋಪಿಗಳ ಕ್ಯುರೇಟಿವ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

2012 ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಈಡಾದ ಇಬ್ಬರು ಆರೋಪಿಗಳು ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು  ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ
ನಿರ್ಭಯಾ ಅತ್ಯಾಚಾರ ಪ್ರಕರಣ: ಆರೋಪಿಗಳ ಕ್ಯುರೇಟಿವ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: 2012 ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಈಡಾದ ಇಬ್ಬರು ಆರೋಪಿಗಳು ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು  ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ವಿನಯ್ ಶರ್ಮಾ ಮತ್ತು ಮುಖೇಶ್ ಸಿಂಗ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಅರುಣ್ ಮಿಶ್ರಾ, ಆರ್.ಎಫ್.ನಾರಿಮನ್, ಆರ್ ಬಾನುಮತಿ ಮತ್ತು ಅಶೋಕ್ ಭೂಷಣ್  ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಪೀಠ ವಿಚಾರಣೆ ನಡೆಸಿದೆ.

ಜನವರಿ 22 ರಂದು ಗಲ್ಲಿಗೇರಿಸಬೇಕೆಂದು ದೆಹಲಿ ನ್ಯಾಯಾಲಯವು ಅವರ ಹೆಸರಿನಲ್ಲಿ ಡೆತ್ ವಾರಂಟ್ ಹೊರಡಿಸಿದ ತರುವಾಯ ಇವರಿಬ್ಬರು ಸರ್ವೋಚ್ಚ ನ್ಯಾಯಾಲಯದಲ್ಲಿ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದರು.ಇದೀಗ ಅರ್ಜಿ ತಿರಸ್ಕೃತವಾಗಿದ್ದು ಈ ಇಬ್ಬರೊಡನೆ ಪವನ್ ಮತ್ತು ಅಕ್ಷಯ್ ಎಂಬ ಇನ್ನೂ ಇಬ್ಬರನ್ನು ಸಹ  ಅಪರಾಧಿಗಳನ್ನು ಒಂದೇ ದಿನ ಬೆಳಿಗ್ಗೆ 7 ಗಂಟೆಗೆ ದೆಹಲಿಯ ತಿಹಾರ್ ಜೈಲು ಆವರಣದಲ್ಲಿ ಗಲ್ಲಿಗೇರಿಸಲಾಗುವುದು.

2012 ರ ಡಿಸೆಂಬರ್ 16-17ರ ಮಧ್ಯರಾತ್ರಿಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ ನಲಿ 23 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

ಕ್ಯುರೇಟಿವ್ ಅರ್ಕಿಯು ಆರೋಪಿಗಳ ಪಾಲಿಗಿದ್ದ ನ್ಯಾಯಾಂಗ ವ್ಯವಸ್ಥೆಯ  ಕಟ್ಟ ಕಡೆಯ ಮಾರ್ಗವಾಗಿತ್ತು. ಇದೀಗ ಆರೋಪಿಗಳಿಗೆ ರಾಷ್ಟ್ರಪತಿಗಳೆದುರು ಕ್ಷಮಾದಾನ ಅರ್ಜಿ ಸಲ್ಲಿಸುವ ಮಾರ್ಗವೊಂದು ಉಳಿದಿದೆ. ಒಂದೊಮ್ಮೆ ರಾಷ್ಟ್ರಪತಿಗಳು ಅಪರಾಧಿಗಳ ಅರ್ಜಿ ತಿರಸ್ಕರಿಸಿದರೆ ಮರಣದಂಡನೆಯಾಗುವುದು ಶತಸಿದ್ದವಾಗಿದೆ. 

ನಿರ್ಭಯಾ ತಾಯಿಗೆ ಸಂತಸ

ಇದು ನನಗೆ ದೊಡ್ಡ ದಿನ. ನಾನು ಕಳೆದ 7 ವರ್ಷಗಳಿಂದ ಪಟ್ಟಿರುವ ಕಷ್ಟಕ್ಕೆ ಇಂದು ಫಲ ಸಿಕ್ಕಿದೆ. ಜನವರಿ 22 ರಂದು ಅವರನ್ನು (ಅಪರಾಧಿಗಳನ್ನು) ಗಲ್ಲಿಗೇರಿಸಲಾಗುವುದು ಎಂದು ನಿರ್ಭಯಾ ತಾಯಿ ಆಶಾ ದೇವಿ ಮಾದ್ಯಮದ ಎದುರು ಸಂತಸ ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com