ವೀಲ್ ಚೇರ್ ಕೇಳಿದ್ದಕ್ಕೆ ಬೆಂಗಳೂರು ಏರ್ ಪೋರ್ಟ್ ನಲ್ಲಿ ಪೈಲಟ್ ನಿಂದ ಮಹಿಳೆ ಮೇಲೆ ಧಮ್ಕಿ, ಸಚಿವರ ಮಧ್ಯ ಪ್ರವೇಶ 

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಮ್ಮ ತಾಯಿಗೆ ವೀಲ್ ಚೇರ್ ಕೊಡಿ ಎಂದು ಕೇಳಿದ್ದಕ್ಕೆ ಇಂಡಿಗೊ ವಿಮಾನದ ಪೈಲಟ್ ತಮಗೆ ಬೆದರಿಕೆ ಹಾಕಿದರು ಎಂದು ಮಹಿಳಾ ಪ್ರಯಾಣಿಕರೊಬ್ಬರು ಆರೋಪಿಸಿದ್ದಾರೆ.
ವೀಲ್ ಚೇರ್ ಕೇಳಿದ್ದಕ್ಕೆ ಬೆಂಗಳೂರು ಏರ್ ಪೋರ್ಟ್ ನಲ್ಲಿ ಪೈಲಟ್ ನಿಂದ ಮಹಿಳೆ ಮೇಲೆ ಧಮ್ಕಿ, ಸಚಿವರ ಮಧ್ಯ ಪ್ರವೇಶ 

ನವದೆಹಲಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಮ್ಮ ತಾಯಿಗೆ ವೀಲ್ ಚೇರ್ ಕೊಡಿ ಎಂದು ಕೇಳಿದ್ದಕ್ಕೆ ಇಂಡಿಗೊ ವಿಮಾನದ ಪೈಲಟ್ ತಮಗೆ ಬೆದರಿಕೆ ಹಾಕಿದರು ಎಂದು ಮಹಿಳಾ ಪ್ರಯಾಣಿಕರೊಬ್ಬರು ಆರೋಪಿಸಿದ್ದಾರೆ.


ಸುಪ್ರಿಯಾ ಉನ್ನಿ ನಾಯರ್ ಎಂಬುವವರು ತಮ್ಮ 75 ವರ್ಷದ ತಾಯಿಗೆ ನಡೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ, ವೀಲ್ ಚೇರ್ ನೀಡಿ ಎಂದು ಕಳೆದ ಸೋಮವಾರ ರಾತ್ರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಕೇಳಿದ್ದಾರೆ. ಅದಕ್ಕೆ ವಿಮಾನದ ಪೈಲಟ್ ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ್ದಲ್ಲದೆ ನಿಮ್ಮನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದರು ಎಂದು ಸುಪ್ರಿಯಾ ವಿವರಿಸಿದರು.

 ಈ ಘಟನೆ ಬಗ್ಗೆ ಸುಪ್ರಿಯಾ ಅವರು ಟ್ವೀಟ್ ಮಾಡಿ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಟ್ಯಾಗ್ ಮಾಡಿದ್ದರು. ವಿಷಯ ತಿಳಿಯುತ್ತಿದ್ದಂತೆ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಮ್ಮ ಕಚೇರಿ ಸಿಬ್ಬಂದಿಗೆ ಇಂಡಿಗೊ ವಿಮಾನಯಾನವನ್ನು ಕೂಡಲೇ ಸಂಪರ್ಕಿಸುವಂತೆ ಹೇಳಿದರು. 


ನಂತರ ಪೈಲಟ್ ಗೆ ಇಂಡಿಗೊ ಸಂಸ್ಥೆ ಕೆಲಸದಿಂದ ನಿರ್ಗಮಿಸಿ ರಜೆಯ ಮೇಲೆ ತೆರಳುವಂತೆ ಹೇಳಿದೆ. ವಿಚಾರಣೆ ನಡೆಸಲಾಗುತ್ತಿದೆ ಎಂದು ಸಚಿವಾಲಯಕ್ಕೆ ಮಾಹಿತಿ ನೀಡಿದೆ. ನಂತರ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ ಇಂಡಿಗೊ ಸಂಸ್ಥೆ, ಆಂತರಿಕ ಪರಾಮರ್ಶೆಯ ಹಂತದಲ್ಲಿ ವಿಷಯವಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.


ನಡೆದ ಘಟನೆಯೇನು?: ಕಳೆದ ಸೋಮವಾರ ರಾತ್ರಿ 9.15ರ ಹೊತ್ತಿಗೆ ಚೆನ್ನೈ-ಬೆಂಗಳೂರು ಇಂಡಿಗೊ ವಿಮಾನ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ವಿಮಾನದ ಸಿಬ್ಬಂದಿಯಲ್ಲಿ ತಮ್ಮ ತಾಯಿಗೆ ವೀಲ್ ಚೇರ್ ಕೊಡಿ ಎಂದು ಸುಪ್ರಿಯಾ ನಾಯರ್ ಕೇಳಿದ್ದಾರೆ. ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ವೀಲ್ ಚೇರ್ ಗೆ ಮನವಿ ಮಾಡಿಕೊಂಡಿದ್ದರು.


ಆದರೆ ವೀಲ್ ಚೇರ್ ಇಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ. ಆದರೆ ತಾವು ವೀಲ್ ಚೇರ್ ಕೇಳಿದ್ದೆ ಎಂದು ಬುಕ್ಕಿಂಗ್ ಆಗಿದ್ದ ಟಿಕೆಟ್ ನ್ನು ತೋರಿಸಿದ್ದರು. ಆಗ ವಿಮಾನದ ಪೈಲಟ್ ವೊಬ್ಬರು ನೀವು ಸುಮ್ಮನೇ ನಮ್ಮನ್ನು ಸತಾಯಿಸುತ್ತಿದ್ದೀರಾ ಎಂದು ಕೋಪದಿಂದ ಬೈಯಲು ಆರಂಭಿಸಿದರು. 


ನಂತರ ವೀಲ್ ಚೇರ್ ಬಂದಾಗ ಅದರಲ್ಲಿ ಹೋಗದಂತೆ ಸುಪ್ರಿಯಾ ಅವರ ತಾಯಿಯನ್ನು ಜಯಕೃಷ್ಣ ಎನ್ನುವ ಪೈಲಟ್ ತಡೆದರಂತೆ. ಅಲ್ಲದೆ ನಿಮ್ಮನ್ನು ಬಂಧಿಸಿ ರಾತ್ರಿಯಿಡೀ ಜೈಲಿನಲ್ಲಿ ಕಳೆಯುವ ಹಾಗೆ ಮಾಡುತ್ತೇನೆ ಎಂದರಂತೆ.


ಮೂಲತಃ ಪತ್ರಕರ್ತೆಯಾಗಿರುವ ಸುಪ್ರಿಯಾ ನಾಯರ್ ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಾಕಿದರೆ ಅದರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಕೂಡ ಪೈಲಟ್ ಬೆದರಿಕೆ ಹಾಕಿದ್ದರಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com