ಇಂದಿರಾ-ಭೂಗತ ಪಾತಕಿ ಕರೀಮ್ ಲಾಲ್ ಆಗಾಗ್ಗೆ ಭೇಟಿ: ಹೇಳಿಕೆಗೆ ಕ್ಷಮೆಯಾಚಿಸಿದ ಸಂಜಯ್ ರಾವತ್

ದಿವಂಗತ ಪ್ರಧಾನಿ ಇಂದಿರಾ ಗಾಂಧಿ  ಅಂದಿನ ಭೂಗತ ಪಾತಕಿ ಕರೀಮ್ ಲಾಲಾನನ್ನು ಭೇಟಿಯಾಗುತ್ತಿದ್ದರು ಎಂಬ ಸಂಚಲನದ ಹೇಳಿಕೆ ನೀಡಿದ್ದ ಶಿವಸೇನೆಯ ರಾಜ್ಯಸಭಾ ಸದಸ್ಯ ಸಂಜಯ್ ರಾವತ್, ಇದೀಗ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ
ಸಂಜಯ್ ರಾವತ್, ಇಂದಿರಾ ಗಾಂಧಿ
ಸಂಜಯ್ ರಾವತ್, ಇಂದಿರಾ ಗಾಂಧಿ

ಮುಂಬೈ:  ದಿವಂಗತ ಪ್ರಧಾನಿ ಇಂದಿರಾ ಗಾಂಧಿ  ಅಂದಿನ ಭೂಗತ ಪಾತಕಿ ಕರೀಮ್ ಲಾಲಾನನ್ನು ಭೇಟಿಯಾಗುತ್ತಿದ್ದರು ಎಂಬ ಸಂಚಲನದ ಹೇಳಿಕೆ ನೀಡಿದ್ದ ಶಿವಸೇನೆಯ ರಾಜ್ಯಸಭಾ ಸದಸ್ಯ ಸಂಜಯ್ ರಾವತ್, ಇದೀಗ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ.

ತಮ್ಮ ಹೇಳಿಕೆಯಿಂದ ಇಂದಿರಾ ಗಾಂಧಿ ವರ್ಚಸ್ಸಿಗೆ ಧಕ್ಕೆಯಾಗಿದ್ದರೆ ಅಥವಾ ಯಾರಿಗಾದರೂ ನೋವುಂಟಾಗಿದ್ದರೆ ಕ್ಷಮೆ ಯಾಚಿಸುವುದಾಗಿ ಅವರು ಹೇಳಿದ್ದಾರೆ.ಇಂದಿರಾ ಗಾಂಧಿ ಮುಂಬೈಗೆ ಬಂದಾಗಲೆಲ್ಲ, ಅಂದಿನ  ಭೂಗತ ಪಾತಕಿ ಕರೀಮ್ ಲಾಲಾ ನನ್ನು ಭೇಟಿಯಾಗುತ್ತಿದ್ದರು ಎಂದು ಅವರು ಹೇಳಿಕೆ ನೀಡಿದ್ದರು.

ಬುಧವಾರ  ಕಾರ್ಯಕ್ರಮವೊಂದರಲ್ಲಿ   ಮಾತನಾಡಿದ   ಸಂಜಯ್  ರಾವತ್,   ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರೊಂದಿಗೆ ಹಲವಾರು ಬಾರಿ ಮಾತನಾಡಿದ್ದನ್ನು ನೆನಪಿಸಿಕೊಂಡಿದ್ದರು. ಮಂತ್ರಾಲಯದಲ್ಲಿ (ರಾಜ್ಯ ವಿಧಾನಸಭೆ) ಮುಂಬೈಯನ್ನು  ಯಾರು ಪ್ರತಿನಿಧಿಸಬೇಕು ಎಂಬುದನ್ನು  ದಾವೂದ್ ಇಬ್ರಾಹಿಂ, ಚೋಟಾ ಶಕೀಲ್ ಮತ್ತು ಶರದ್ ಶೆಟ್ಟಿ ನಿರ್ಧರಿಸುತ್ತಿದ್ದರು ಎಂದಿದ್ದರು. 

ಇಂದಿರಾ ಗಾಂಧಿ  ಅವರೂ ಕೂಡ  ಆಗಾಗ್ಗೆ ಕರೀಮ್ ಲಾಲಾ ನನ್ನು ಭೇಟಿಯಾಗುತ್ತಿದ್ದರು.  ಭೂಗತಲೋಕ ಹೇಗಿರುತ್ತದೆ?  ಎಂಬುದನ್ನು   ನಾವು ನೋಡಿದ್ದೇವೆ. ಆದರೆ ಈಗ ಇದೆಲ್ಲ   ಚಿಲ್ಲರೆ  ವ್ಯವಹಾರದಂತೆ  ನಮಗೆ ಕಾಣುತ್ತಿದೆ.  ಆದೇರೀತಿ  ತಾವು ಪ್ರತಿಪಕ್ಷದಲ್ಲಿದ್ದಾಗ ಇಂದಿರಾ ಗಾಂಧಿ, ನೆಹರೂ ಮತ್ತು ರಾಜೀವ್ ಗಾಂಧಿ ಸೇರಿದಂತೆ ಗಾಂಧಿ ಕುಟುಂಬದ ಎಲ್ಲ ಸದಸ್ಯರ ಬಗ್ಗೆ  ಗೌರವ ಭಾವ ಹೊಂದಿದ್ದಾಗಿ ಹೇಳಿದ್ದರು.

‘ಅನೇಕ ರಾಜಕಾರಣಿಗಳು ಕರೀಮ್ ಲಾಲಾ ನನ್ನು  ಭೇಟಿ ಮಾಡಲು ಬರುತ್ತಿದ್ದರು.  ಆತ  ಅಫ್ಘಾನಿಸ್ತಾನದಿಂದ ಬಂದ ಪಠಾಣ್  ಸಮುದಾಯದ  ನಾಯಕರಾಗಿದ್ದ,  ದಾವೂದ್ ಇಬ್ರಾಹಿಂ ನೊಂದಿಗೆ  ಒಮ್ಮೆ ಫೋಟೋ ಸೆಷನ್ ಕೂಡ ಏರ್ಪಡಿಸಿದ್ದಾಗಿ,  ದಾವೂದ್‌ನನ್ನು ನೇರವಾಗಿ ನೋಡಿದ ಕೆಲವೇ ಜನರಲ್ಲಿ ನಾನೂ ಒಬ್ಬ. ನಾನು  ಆತನೊಂದಿಗೆ ಹಲವು ಬಾರಿ ಮಾತನಾಡಿದ್ದೇನೆ. ಆದರೆ, ತನಗೆ ಕೆಲವೊಮ್ಮೆ  ಆತನಿಂದ ಬೆದರಿಕೆಗಳು ಬಂದಿವೆ ಎಂದು ಸಂಜಯ್  ರಾವತ್  ಬಹಿರಂಗಪಡಿಸಿದ್ದರು.

ಮುಂಬೈ ನಗರದಲ್ಲಿ  ಜೂಜು, ಅಪಹರಣದಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ  ಕರೀಂ ಲಾಲಾ (೯೦) ೨೦೦೨ರಲ್ಲಿ  ಮೃತಪಟ್ಟಿದ್ದ

ಸಂಜಯ್ ರಾವತ್ ಹೇಳಿಕೆ ಹೊರಬೀಳುತ್ತಿದ್ದಂತೆ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಕೂಡಲೇ ತಮ್ಮ ಹೇಳಿಕೆಯನ್ನು ವಾಪಾಸ್ ಪಡೆಯುವಂತೆ ಒತ್ತಾಯಿಸಿತ್ತು. 

ಸಂಜಯ್ ರಾವತ್ ಹೇಳಿಕೆ ಮುಜುಗರವನ್ನುಂಟುಮಾಡಿದೆ. ಸಾಮ್ನದ ಕೆಲಸ ಮಾಡದೆ ಹೇಗೆ ಇಂತಹ ಹೇಳಿಕೆ ನೀಡಿದರು ಎಂದು ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ ಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು.

ಇಂದಿರಾ ಗಾಂಧಿ ನಿಜವಾದ ದೇಶಭಕ್ತರಾಗಿದ್ದರು. ದೇಶದ ಭದ್ರತೆಯೊಂದಿಗೆ ಅವರು ಎಂದಿಗೂ ರಾಜಿ ಮಾಡಿಕೊಂಡವರಲ್ಲ, ಸಂಜಯ್ ರಾವತ್ ಕೂಡಲೇ ತಮ್ಮ ಹೇಳಿಕೆಯನ್ನು ವಾಪಸ್ ಪಡೆದುಕೊಳ್ಳಬೇಕೆಂದು ಮುಂಬೈ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಮಿಲಿಂದ್ ದಿಯೋರಾ ಒತ್ತಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com