ಸಂಕ್ರಾಂತಿಯಂದು ಕೇರಳ ಪ್ರವಾಸೋದ್ಯಮ ಇಲಾಖೆ ಟ್ವೀಟ್:  ರಿ ಟ್ವೀಟ್ ಮಾಡಿ ರವಿ ಎಡವಟ್ಟು!

ಬೀಫ್ ಖಾದ್ಯವೊಂದರ ಕುರಿತು ಕೇರಳ ಪ್ರವಾಸೋದ್ಯಮ ಇಲಾಖೆ ಟ್ವಿಟರ್ ಮೂಲಕ ಮಾಡಿದ ಟ್ವೀಟ್ ಭಾರೀ ವಿವಾದಕ್ಕೆ ಗ್ರಾಸವಾಗಿದೆ.
ಸಿ.ಟಿ ರವಿ ಟ್ವೀಟ್
ಸಿ.ಟಿ ರವಿ ಟ್ವೀಟ್

ಕೊಚ್ಚಿ: ಬೀಫ್ ಖಾದ್ಯವೊಂದರ ಕುರಿತು ಕೇರಳ ಪ್ರವಾಸೋದ್ಯಮ ಇಲಾಖೆ ಟ್ವಿಟರ್ ಮೂಲಕ ಮಾಡಿದ ಟ್ವೀಟ್ ಭಾರೀ ವಿವಾದಕ್ಕೆ ಗ್ರಾಸವಾಗಿದೆ.

ಬುಧವಾರ ಕೇರಳ ಪ್ರವಾಸೋದ್ಯಮ ಇಲಾಖೆ ರಾಜ್ಯದ ಜನಪ್ರಿಯ ಬೀಫ್ ಫ್ರೈ ಖಾದ್ಯದ ಒಂದು ಫೋಟೋ ಪೋಸ್ಟ್ ಮಾಡಿ ಅದರ ರೆಸಿಪಿ ಲಿಂಕ್ ಕೂಡ ನೀಡಿತ್ತು. 

ಟ್ವೀಟ್‍ ನಲ್ಲಿ ಬೀಫ್ ಫೋಟೋ ಇದ್ದುದರಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆ ಎಂದು ಹಲವು ಜನರು ಹೇಳಿಕೊಂಡಿದ್ದಾರೆ.

"ಪರಿಮಳಯುಕ್ತ ಸಾಂಬಾರ ಪದಾರ್ಥಗಳು, ತೆಂಗಿನಕಾಯಿ ತುಂಡುಗಳು ಹಾಗೂ ಕರಿಬೇವಿನ ಸೊಪ್ಪಿನ ಜತೆ ಸಣ್ಣ ಉರಿಯಲ್ಲಿ ರೋಸ್ಟ್ ಮಾಡಲ್ಪಟ್ಟ ಬೀಫ್‍ ನ ಸಣ್ಣ ಮೆದುವಾದ ತುಂಡುಗಳು. ಬೀಫ್ ಉಲರ್ತಿಯತ್ತು, ಅತ್ಯಂತ ಕ್ಲಾಸಿಕ್ ಖಾದ್ಯದ ರೆಸಿಪಿ'' ಎಂದು ಕೇರಳಟೂರಿಸಂ ಟ್ವೀಟ್‍ ನಲ್ಲಿ ಬರೆಯಲಾಗಿತ್ತು ಹಾಗೂ ಕೊನೆಗೆ ಆ ರೆಸಿಪಿಯಿರುವ ವೆಬ್‍ ಸೈಟ್ ಲಿಂಕ್ ನೀಡಲಾಗಿತ್ತು.

ಇತರ ರಾಜ್ಯಗಳ ಜನರು ಮಕರ ಸಂಕ್ರಾಂತಿ, ಪೊಂಗಲ್ ಹಾಗೂ ಬಿಹು ಆಚರಿಸುತ್ತಿರುವುದರಿಂದ ಈ ಟ್ವೀಟ್ ಅನ್ನು ಬೇರೆ ಸಮಯದಲ್ಲಿ ಮಾಡಬಹುದಾಗಿತ್ತು ಎಂದು ಕೆವಲರು ಟ್ವೀಟ್ ಮಾಡಿದ್ದಾರೆ.

ಪ್ರೀತಿಯ ಕೇರಳಟೂರಿಸಂ, ಪೋರ್ಕ್ ಬಗ್ಗೆ ಈದ್ ದಿನ ಹಾಗೂ ಬೀಫ್ ಬಗ್ಗೆ ಮಕರಸಂಕ್ರಾಂತಿಯಂದು ಪೋಸ್ಟ್ ಮಾಡಬೇಡಿ. ಜನರ ಭಾವನೆಗಳಿಗೆ ನೋವುಂಟು ಮಾಡದೆ ನಮ್ಮ ಆಹಾರ ವೈವಿಧ್ಯತೆಯನ್ನು ಪ್ರದರ್ಶಿಸಿ'' ಎಂದು ಸಲಹೆ ನೀಡಿದ್ದಾರೆ.

"ಜನರು ಬೀಫ್ ತಿನ್ನಲೆಂದೇ ಕೇರಳಕ್ಕೆ ಬರುತ್ತಾರೆಯೇ?'' ಎಂದು ಒಬ್ಬರು ಪ್ರಶ್ನಿಸಿದರೆ, "ಎಲ್ಲಾ ಹಿಂದುಗಳು ಹಿಂದು ವಿರೋಧಿ ಕೇರಳದಿಂದ ದೂರವಿರಬೇಕು'' ಎಂದು ಇನ್ನೊಬ್ಬರು ಹೇಳಿದ್ದಾರೆ.

ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಕೇರಳ ಪ್ರವಾಸೋದ್ಯಮ ಸಚಿವ ಕದಂಕಪಲ್ಲಿ ಸುರೇಂದ್ರನ್  ಈ ಬಗ್ಗೆ ನನಗೆ ಮಾಹಿತಿಯಿಲ್ಲ, ಯಾರೇ ಆಗಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದರೇ ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಇನ್ನು ಕೇರಳ ಸರ್ಕಾರ ಬೀಫ್ ಖಾದ್ಯದ ಫೋಟೋ ಕುರಿತು ಮಾಡಿದ್ದ ಟ್ವೀಟ್​ ಅನ್ನು ರೀಟ್ವೀಟ್​ ಮಾಡಿದ್ದ ಸಚಿವ ಸಿ ಟಿ ರವಿಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಸಿಕ್ಕಾಪಟ್ಟೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ತನ್ನ ಖಾತೆಯಿಂದ ಕೇರಳ ಪ್ರವಾಸೋದ್ಯಮ ಇಲಾಖೆ ಹಾಕಿದ್ದ ಟ್ವೀಟ್‌ ರೀಟ್ವೀಟ್​​ ಮಾಡಿ ಹಂಚಿಕೊಂಡಿದ್ದ ಸಚಿವ ಸಿ ಟಿ ರವಿ ಹೀಗೆ ಬರೆದುಕೊಂಡಿದ್ದರು. ಕರ್ನಾಟಕಕ್ಕೆ ಸ್ವಾಗತ" ಎಂದು ‘ಒನ್ ಸ್ಟೇಟ್ ಮೆನೀ ವರ್ಡ್ಸ್’ ಎಂಬ ಹ್ಯಾಶ್ ಟ್ಯಾಗ್ ನೀಡಿದ್ದರು. ಇದನ್ನು ಅಪಾರ್ಥ ಮಾಡಿಕೊಂಡ ನೆಟ್ಟಿಗರು ಸಿ.ಟಿ ರವಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದರು.

ಸಚಿವರ ಎಡವಟ್ಟಿನ ಬೀಫ್ ಖಾದ್ಯದ ಟ್ವೀಟ್​ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಎಚ್ಚೆತ್ತು ಪ್ರತಿಕ್ರಿಯೆ ನೀಡಿದ ಸಿ. ಟಿ ರವಿ “ನಾನು ಬೀಫ್‌ ಬೆಂಬಲಿಸುತ್ತೇನೆ ಎಂದು ನೀವು ಹೇಗೆ ಯೋಚಿಸುತ್ತೀರಿ. ಇದು ನನ್ನ ನಂಬಿಕೆಗೆ ವಿರುದ್ಧ. ಕೇರಳ ಸರ್ಕಾರದ ವಿರುದ್ಧ ವ್ಯಂಗ್ಯವಾಡಿ ಪ್ರತಿಭಟಿಸುವ ಟ್ವೀಟ್​ ಮಾಡಿದ್ದೇನೆ ಎಂದು ಸ್ಪಷ್ಟೀಕರಣ ನೀಡಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com