ರಾಷ್ಟ್ರೀಯ ಜನಸಂಖ್ಯಾ ನೋಂದಣಿ: ಸಂದೇಹಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ 

ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ ಪಿಆರ್) ಕುರಿತು ನಾಗರಿಕರಲ್ಲಿ ಮೂಡಿರುವ ಸಂದೇಹಗಳಿಗೆ ಸರ್ಕಾರದ ಹಿರಿಯ ಅಧಿಕಾರಿಗಳು ಉತ್ತರಿಸಿ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.
ರಾಷ್ಟ್ರೀಯ ಜನಸಂಖ್ಯಾ ನೋಂದಣಿ: ಸಂದೇಹಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ 

ನವದೆಹಲಿ: ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ ಪಿಆರ್) ಕುರಿತು ನಾಗರಿಕರಲ್ಲಿ ಮೂಡಿರುವ ಸಂದೇಹಗಳಿಗೆ ಸರ್ಕಾರದ ಹಿರಿಯ ಅಧಿಕಾರಿಗಳು ಉತ್ತರಿಸಿ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.


2021ರ ಜನಸಂಖ್ಯಾ ನೋಂದಣಿ ಕುರಿತು ದೆಹಲಿಯಲ್ಲಿ ನಿನ್ನೆ ಸಮ್ಮೇಳನ ನಡೆದಿದ್ದು ಅದರಲ್ಲಿ ಎಲ್ಲಾ ರಾಜ್ಯಗಳ ಅಧಿಕಾರಿಗಳು ಭಾಗಿಯಾಗಿದ್ದರು. ಜನಸಂಖ್ಯಾ ನೋಂದಣಿಯ ಕಾರ್ಯವಿಧಾನಗಳು, ಜನರಲ್ಲಿ ಮೂಡಿರುವ ಸಂದೇಹಗಳ ಕುರಿತು ಚರ್ಚೆ ನಡೆಸಲಾಯಿತು. 


ದೇಶಾದ್ಯಂತ ಜನಸಂಖ್ಯಾ ನೋಂದಣಿಯನ್ನು ಬರುವ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ನಡೆಸಲಾಗುತ್ತದೆ. ಇದರ ಜೊತೆಗೆ ಜನಗಣತಿಯ ಮೊದಲ ಹಂತವೂ ನಡೆಯಲಿದೆ. ಸರ್ಕಾರದ ಈ ಜನಸಂಖ್ಯಾ ನೋಂದಣಿಗೆ ಕೆಲವು ಬಿಜೆಪಿಯೇತರ ಸರ್ಕಾರಗಳಿಂದ ಆಕ್ಷೇಪ ವ್ಯಕ್ತವಾಗಿದೆ. 


ಬಿಜೆಪಿಯೇತರ ಸರ್ಕಾರಗಳು ಎತ್ತಿರುವ ಆಕ್ಷೇಪಗಳು: ಜನಸಂಖ್ಯಾ ನೋಂದಣಿ ಸಮಯದಲ್ಲಿ ಜನರಲ್ಲಿ ಕೇಳಲಾಗುವ ಪ್ರಶ್ನೆಗಳ ಕುರಿತು ಹಲವು ರಾಜ್ಯಗಳ ಪ್ರತಿನಿಧಿಗಳು ಆಕ್ಷೇಪವೆತ್ತಿದ್ದಾರೆ ಎನ್ನುತ್ತಾರೆ ರಾಜಸ್ತಾನ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಿ ಬಿ ಗುಪ್ತಾ. ಎನ್ ಪಿಆರ್ ನಲ್ಲಿರುವ ಕೆಲ ಪ್ರಶ್ನೆಗಳು ಅಸಂಪ್ರದಾಯಿಕವಾಗಿದೆ. ಪೋಷಕರ ಜನ್ಮಸ್ಥಳದ ಬಗ್ಗೆ ಕೇಳುವ ಪ್ರಶ್ನೆ ಸರಿಯಲ್ಲ. ಹಲವರಿಗೆ ತಮ್ಮ ಜನ್ಮಸ್ಥಳ ಯಾವುದು ಎಂದೇ ಗೊತ್ತಿರುವುದಿಲ್ಲ. ಅಂತಹ ಪ್ರಶ್ನೆಗಳನ್ನು ಕೇಳುವುದರಲ್ಲಿ ಏನು ಉದ್ದೇಶವಿದೆ ಎಂದೇ ಗೊತ್ತಾಗುವುದಿಲ್ಲ ಎಂದು ನಿನ್ನೆ ದೆಹಲಿಯಲ್ಲಿ ಸಮ್ಮೇಳನ ನಂತರ ಸುದ್ದಿಗಾರರ ಜೊತೆ ಮಾತನಾಡುತ್ತಾ ಗುಪ್ತಾ ಹೇಳಿದರು.


ಈ ಹಿಂದಿನ ಜನಸಂಖ್ಯಾ ನೋಂದಣಿಯಲ್ಲಿ ಕೂಡ ಇಂತಹದ್ದೇ ಪ್ರಶ್ನೆಗಳನ್ನು ಕೇಳಲಾಗಿತ್ತು. ಈ ಬಾರಿ ವ್ಯಕ್ತಿಯ ಜನ್ಮಸ್ಥಳವನ್ನು ಅವರ ಪೋಷಕರ ಜನ್ಮಸ್ಥಳದೊಂದಿಗೆ ಸಂಪರ್ಕಿಸಲಾಗುತ್ತದೆ. ಆದರೂ ಈ ಪ್ರಶ್ನೆಗೆ ಕಡ್ಡಾಯವಾಗಿ ಉತ್ತರಿಸಲೇಬೇಕೆಂದಿಲ್ಲ ಎಂದು ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ ಎಂದು ಗುಪ್ತಾ ತಿಳಿಸಿದರು.


ಕಾಂಗ್ರೆಸ್ ಸರ್ಕಾರವಿರುವ ರಾಜಸ್ತಾನ ಎನ್ ಪಿಆರ್ ಗೆ ವಿರೋಧ ವ್ಯಕ್ತಪಡಿಸಿದೆ. ಇನ್ನು ಕೇರಳ ಮತ್ತು ಪಂಜಾಬ್ ವಿಧಾನಸಭೆಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯ ಹೊರಡಿಸಲಾಗಿದೆ. ಪಶ್ಚಿಮ ಬಂಗಾಳ, ಕೇರಳದಂತಹ ರಾಜ್ಯಗಳು ಎನ್ ಪಿಆರ್ ನಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಹೇಳಿದೆ.


ನಿನ್ನೆಯ ಸಭೆಯಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳು ಜನಗಣತಿ, ಜನಸಂಖ್ಯಾ ನೋಂದಣಿಯ ಉದ್ದೇಶಗಳು ಮತ್ತು ಅದರಿಂದ ಆಗುವ ಪ್ರಯೋಜನಗಳ ಕುರಿತು ವಿವರಿಸಿದರು. ಅಂಕಿಅಂಶಗಳ ಸಂಗ್ರಹಕ್ಕೆ ಮೊಬೈಲ್ ಆಪ್ ಬಳಕೆ ಕುರಿತು ಸಹ ಮಾಹಿತಿ ನೀಡಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಕೇಂದ್ರ ಸಚಿವ ನಿತ್ಯಾನಂದ ರೈ, ಜನಗಣತಿಯಲ್ಲಿ ಸಂಗ್ರಹಿಸಲಾಗುವ ಅಂಕಿಅಂಶಗಳ ಮೂಲಕ ದೇಶದ ಜನರಿಗೆ ತಲುಪಬೇಕಾದ ಸರ್ಕಾರದ ಅಭಿವೃದ್ಧಿ ಯೋಜನೆಗಳು ಸರಿಯಾಗಿ ತಲುಪುತ್ತವೆ ಎಂದರು. 


ಪಶ್ಚಿಮ ಬಂಗಾಳ ಗೈರು: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಸಮ್ಮೇಳನ ಉದ್ಘಾಟಿಸಿದರು. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಮುಖ್ಯ ಕಾರ್ಯದರ್ಶಿಗಳು ಮತ್ತು ಗಣತಿಯ ನಿರ್ದೇಶಕರು ಭಾಗಿಯಾಗಿದ್ದರು. ಆದರೆ ಪಶ್ಚಿಮ ಬಂಗಾಳ ಸರ್ಕಾರದಿಂದ ಯಾವ ಅಧಿಕಾರಿಗಳೂ ಬಂದಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com