2 ಮಕ್ಕಳ ಮಿತಿ ಕಡ್ಡಾಯಗೊಳಿಸುವ ಯಾವುದೇ ಕಾನೂನಿಗೆ ಆರ್'ಎಸ್ಎಸ್ ಬೆಂಬಲ: ಮೋಹನ್ ಭಾಗವತ್

ಅಯೋಧ್ಯೆ ರಾಮ ಮಂದಿರ ನಿರ್ಮಾಣ, ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಪರವಾಗಿ ದಶಕಗಳ ಕಾಲ ಆಂದೋಲನ ನಡೆಸಿ ಯಶಸ್ವಿಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಂದಿನ ಗುರಿ ಒಂದು ದಂಪತಿಗೆ 2 ಮಗು ಆಗಿದೆ. ಈ ಕುರಿತು ಸ್ವತಃ ಆರ್'ಎಸ್ಎಸ್ ಮುಖ್ಯಸ್ಥರೇ...

Published: 19th January 2020 09:26 AM  |   Last Updated: 19th January 2020 09:31 AM   |  A+A-


mohan bhagwat

ಮೋಹನ್ ಭಾಗವತ್

Posted By : Manjula VN
Source : Online Desk

ಲಖನೌ: ಅಯೋಧ್ಯೆ ರಾಮ ಮಂದಿರ ನಿರ್ಮಾಣ, ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಪರವಾಗಿ ದಶಕಗಳ ಕಾಲ ಆಂದೋಲನ ನಡೆಸಿ ಯಶಸ್ವಿಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಂದಿನ ಗುರಿ ಒಂದು ದಂಪತಿಗೆ 2 ಮಗು ಆಗಿದೆ. ಈ ಕುರಿತು ಸ್ವತಃ ಆರ್'ಎಸ್ಎಸ್ ಮುಖ್ಯಸ್ಥರೇ ಹೇಳಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ಭವಿಷ್ಯದ ಅಜೆಂಡಾ ಕೂಡ ಇದೇ ಆಗುವ ಸಾಧ್ಯತೆಗಳಿವೆ ಎಂದೇ ವಿಶ್ಲೇಷಿಸಲಾಗುತ್ತಿದೆ. 

ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರಬೇಕು ಎಂದು ಮೋಹನ್ ಭಾಗವತ್ ಅವರು ಪ್ರತಿಪಾದಿಸಿದ್ದಾರೆ. ಅಲ್ಲದೆ, ಪ್ರತಿ ದಂಪತಿಗೆ ಎರಡು ಮಕ್ಕಳ ಮಿತಿ ಇರಬೇಕು ಎಂಬ ಕಾನೂನು ದೇಶದ ಅಭಿವೃದ್ಧಿಯಾಗುವಂತೆ ನೋಡಿಕೊಳ್ಳಲಿದೆ. 2 ಮಕ್ಕಳ ಮಿತಿಗೆ ಕರೆ ನೀಡುವ ಯಾವುದೇ ಕಾನೂನನ್ನು ಸಂಘಟನೆ ಬೆಂಬಲಿಸಲಿದೆ ಎಂದು ಹೇಳಿದ್ದಾರೆ. 

ಸಂಘದ ಅಜೆಂಡಾಕ್ಕೆ ಒಂದು ದಂಪತಿ-2 ಮಗು ವಿಚಾರವನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಆದರೆ, ಈ ಕುರಿತು ನಿರ್ಧಾರ ಕೈಗೊಳ್ಳುವುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು ಎಂದು ತಿಳಿಸಿದ್ದಾರೆ. 

ಭಾಗವತ್ ಅವರ ಈ ಹೇಳಿಕೆಯಿಂದ 2 ಮಕ್ಕಳ ಮಿತಿಯನ್ನು ಕಡ್ಡಾಯಗೊಳಿಸುವ ಕಾನೂನು ಜಾರಿಗೆ ಬರೂೇಕು ಎಂಬ ಕೂಗಿಗೆ ಮತ್ತಷ್ಟು ಬಲಬಂದಂತಾಗಿದೆ. ಇದು ಆರ್'ಎಸ್ಎಸ್ ನ ಮುಂದಿನ ಪ್ರಮುಖ ವಿಚಾರವಾಗಲಿದೆ ಹಾಗೂ ಪ್ರಧಾನಿ ಮೋದಿಯವರು ಈ ಬಗ್ಗೆ ಗಮನಹರಿಸುವ ಸಾಧ್ಯತೆಗಳಿವೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. 

ಜನಸಂಖ್ಯೆ ನಿಯಂತ್ರಣದ ಬಗ್ಗೆ ಸರ್ಕಾರ ಅಂತಿಮ ನಿರ್ಣಯ ಕೈಗೊಳ್ಳುವುದು ಇಂದಿನ ಅಗತ್ಯವಾಗಿದೆ. ಈ ಕಾನೂನು ಯಾವುದೇ ಧರ್ಮಕ್ಕೆ ಸಂಬಂಧಪಟ್ಟಿದ್ದಲ್ಲ. ಎಲ್ಲರಿಗೂ ಸಂಬಂಧಿಸಿದ ಕಾನೂನು ಇದು ಎಂದು ಉತ್ತರಪ್ರದೇಶದ ಮುದಾರಾಬಾದ್ ನಲ್ಲಿ ನಡೆದ ಸಂಘ ಪರಿವಾರದ ಹಿರಿಯ ಮುಖಂಡರ ಸಭೆಯಲ್ಲಿ ಭಾಗವತ್ ಹೇಳಿದ್ದಾರೆ. 

ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ. ಆದರೆ, ಜನಸಂಖ್ಯೆ ಅನಿಯಂತ್ರಿತವಾಗಿ ಹೆಚ್ಚುತ್ತಿರುವುದು ದೇಶದ ಅಭಿವೃದ್ಧಿಗೆ ತೊಡಕಾಗಿದೆ. ಆದರೆ, ಎರಡು ಮಕ್ಕಳ ಮಿತಿ ಕುರಿತಾದ ಅಂತಿಮ ನಿರ್ಣಯವನ್ನು ಸರ್ಕಾರವೇ ತೆಗೆದುಕೊಳ್ಳಬೇಕು ಎಂದು ಹೇಳಿದರು. 

ರಾಮಮಂದಿರ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಅವರು, ಮಂದಿರ ನಿರ್ಮಾಣ ಆಗಬೇಕು ಎಂಬುದು ನಮ್ಮ ನಿಲುವಾಗಿತ್ತು. ಈ ವಿಚಾರದಲ್ಲಿ ನಮ್ಮ ಪಾತ್ರ ಇಷ್ಟೇ. ಒಮ್ಮೆ ಮಂದಿರ ನಿರ್ಮಾಣಕ್ಕೆ ಟ್ರಸ್ಟ್ ರಚನೆ ಆಯಿತೆಂದರೆ ನಾವು ಈ ವಿಷಯದಿಂದ ದೂರ ಸರಿಯುತ್ತೇವೆ. ಮಥುರಾ ಹಾಗೂ ಕಾಶಿ ನಮ್ಮ ಅಜೆಂಡಾ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜನಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಎರಡು ಮಕ್ಕಳ ನೀತಿಯ ಪರವಾಗಿ ಸಂಘ ಯಾವತ್ತಿಗೂ ಇದೆ. ಆದರೆ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ತಿಳಿಸಿದರು. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp