ಮತ್ತೊಂದು ಹನಿಟ್ರ್ಯಾಪ್: ಹೆಣ್ಣಿನ ಆಸೆಗೆ ಬಲಿಯಾಗಿ ಪಾಕ್ ಗೆ ಮಾಹಿತಿ ನೀಡುತ್ತಿದ್ದ ಐಎಸ್ಐ ಏಜೆಂಟ್ ಬಂಧನ

ಉತ್ತರ ಪ್ರದೇಶದಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿರುವ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗೆ ಮಾಹಿತಿ ನೀಡುತ್ತಿದ್ದ ಏಜೆಂಟ್ ನನ್ನು ಬಂಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಖನೌ: ಉತ್ತರ ಪ್ರದೇಶದಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿರುವ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗೆ ಮಾಹಿತಿ ನೀಡುತ್ತಿದ್ದ ಏಜೆಂಟ್ ನನ್ನು ಬಂಧಿಸಿದೆ.

ಮೂಲಗಳ ಪ್ರಕಾರ ಬಂಧಿತ ಏಜೆಂಟ್ ನನ್ನು ಮೊಹಮದ್ ರಷೀದ್ ಎಂದು ಗುರುತಿಸಲಾಗಿದ್ದು, ಈತ ವಾರಣಾಸಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಭದ್ರತಾ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಈತ ಕಳೆದ ಮಾರ್ಚ್ 2019ರಿಂದ ಪಾಕಿಸ್ತಾನಕ್ಕೆ ಭಾರತದ ಕುರಿತು ಮಾಹಿತಿ ರವಾನೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಈ ಕುರಿತಂತೆ ಕಳೆದ ಜುಲೈ ತಿಂಗಳಿನಲ್ಲೇ ಕೇಂದ್ರ ಗುಪ್ತಚರ ಇಲಾಖೆಗಳು ವಾರಣಾಸಿಯಲ್ಲಿನ ಓರ್ವ ವ್ಯಕ್ತಿಯಿಂದ ಪಾಕಿಸ್ತಾನಕ್ಕೆ ಮಾಹಿತಿ ರವಾನೆಯಾಗುತ್ತಿರುವ ಕುರಿತು ಮಾಹಿತಿ ಕಲೆಹಾಕಿದ್ದವು. ವಾಟ್ಸಪ್ ಮೂಲಕ ಈತ ಪಾಕಿಸ್ತಾನಕ್ಕೆ ಮಾಹಿತಿ ರವಾನೆ ಮಾಡುತ್ತಿದ್ದ ಎಂದು ಇಲಾಖೆ ಮಾಹಿತಿ ಕಲೆಹಾಕಿತ್ತು.  ಇದೀಗ ಈತನನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಹನಿ ಟ್ರ್ಯಾಪ್ ಗೆ ಬಲಿಯಾಗಿದ್ದ
ಇನ್ನು ಪ್ರಸ್ತುತ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಮದ್ ರಷೀದ್ ನನ್ನು ಐಎಸ್ಐ ಹನಿಟ್ರ್ಯಾಪ್ ಮಾಡಿತ್ತು ಎನ್ನಲಾಗಿದೆ. ಯುವತಿಯೊಬ್ಬಳನ್ನು ಆತನ ಹಿಂದೆ ಬಿಟ್ಟು ಆಕೆಯ ಮುಖಾಂತರ ಆತನನ್ನು ಏಜೆಂಟ್ ಆಗಿ ಪರಿವರ್ತಿಸಲಾಗಿದೆ ಎನ್ನಲಾಗಿದೆ. ಈ ಹಿಂದೆ ಮದುವೆ ನಿಮಿತ್ತ 2017ರಲ್ಲಿ ಎರಡು ಬಾರಿ ರಷೀದ್ ಕರಾಚಿಗೆ ತೆರಳಿದ್ದ. ಅಲ್ಲದೆ 2018-19ರಲ್ಲಿಯೂ ಕರಾಚಿಗೆ ತೆರಳಿದ್ದ ರಷೀದ್ ತನ್ನ ಆಂಟಿ ಹನೀನಾ ಮತ್ತು ಆಕೆಯ ಪತಿ ಶಗೀರ್ ಅಹ್ಮದ್ ರನ್ನು ಭೇಟಿ ಮಾಡಿದ್ದ. ಇದೇ ಸಂದರ್ಭದಲ್ಲೇ ಈತ ತನ್ನ ಸಂಬಂಧಿ ಯುವತಿಯೊಬ್ಬಳ ಮೇಲೆ ಮೋಹ ಬೆಳೆಸಿಕೊಂಡಿದ್ದ. ಈಕೆಯನ್ನು ಮುಂದಿಟ್ಟುಕೊಂಡೇ ಐಎಸ್ಐ ಈತನಿಗೆ ಬಲೆ ಬೀಸಿತ್ತು ಎನ್ನಲಾಗಿದೆ. ಯುವತಿ ಮೋಹಕ್ಕೆ ಬಿದ್ದ ರಷೀದ್ ಭಾರತದ ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ನೀಡಲು ಒಪ್ಪಿಗೆ ಸೂಚಿಸಿದ್ದ. ಅದರಂತೆ ಕಳೆದ 2019 ಮಾರ್ಚ್ ತಿಂಗಳಿನಿಂದಲೂ ವಾಟ್ಸಪ್ ನಲ್ಲಿ ನಿರಂತರವಾಗಿ ಮಾಹಿತಿ ರವಾನಿಸುತ್ತಿದ್ದ ಎನ್ನಲಾಗಿದೆ.

ಇದೀಗ ಈತನನ್ನು ಬಂಧಿಸಿರುವ ಉತ್ತರ ಪ್ರದೇಶ ಎಟಿಎಸ್ ಅಧಿಕಾರಿಗಳು ರಹಸ್ಯ ಸ್ಥಳದಲ್ಲಿ ಆತನ ವಿಚಾರಣೆ ನಡೆಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com