ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಜೆಪಿ ನಡ್ಡಾ ಅವಿರೋಧ ಆಯ್ಕೆ

ಆಡಳಿತಾರೂಡ ಬಿಜೆಪಿಯ 11ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಜಗತ್ ಪ್ರಕಾಶ್ ನಡ್ಡಾ ಅವರು ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜೆ ಪಿ ನಡ್ಡಾ
ಜೆ ಪಿ ನಡ್ಡಾ

ನವದೆಹಲಿ: ಆಡಳಿತಾರೂಡ ಬಿಜೆಪಿಯ 11ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಜಗತ್ ಪ್ರಕಾಶ್ ನಡ್ಡಾ ಅವರು ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಂದು ಬಿಜೆಪಿ ನೂತನ ಅಧ್ಯಕ್ಷ ಸ್ಥಾನಕ್ಕೆ ನಡೆದ ನಾಮನಿರ್ದೇಶನ ಪ್ರಕ್ರಿಯೆಯ ನಂತರ ಕಣದಲ್ಲಿದ್ದ ಏಕೈಕ ನಾಯಕ ಜೆಪಿ ನಡ್ಡಾ ಅವರ ಉಮೇದುವಾರಿಕೆಯನ್ನು ಪಕ್ಷದ ಉನ್ನತ ನಾಯಕರು ಅನುಮೋದಿಸಿದರು.

ಜೆಪಿ ನಡ್ಡಾ ಅವರು ಮೂರು ವರ್ಷಗಳ ಅವಧಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಉಸ್ತುವಾರಿಯಾಗಿದ್ದ ಬಿಜೆಪಿ ಹಿರಿಯ ನಾಯಕ ರಾಧಾ ಮೋಹನ್ ಸಿಂಗ್ ಅವರು ಘೋಷಿಸಿದ್ದಾರೆ.

ಜೆಪಿ ನಡ್ಡಾ ಅವರು ಪಕ್ಷದ ಅತ್ಯಂತ ಯಶಸ್ವಿ ಮುಖ್ಯಸ್ಥ ಸೂತ್ರಧಾರ, ಅಧ್ಯಕ್ಷ ಎನಿಸಿಕೊಂಡಿದ್ದ ಅಮಿತ್ ಶಾ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆ ಇದು ಅವರ ಪಾಲಿಗೆ ಮೊದಲ ಅಗ್ನಿ ಪರೀಕ್ಷೆಯಾಗಲಿದೆ.
 
1960ರ ಡಿಸೆಂಬರ್ 2 ರಂದು ನರೈನ್ ಲಾಲ್ ನಡ್ಡಾ ಮತ್ತು ಕೃಷ್ಣ ನಡ್ಡಾ ದಂಪತಿಗೆ ಜನಿಸಿದ ಜಗತ್ ಪ್ರಕಾಶ್ ನಡ್ಡಾ  ಪಾಟ್ನಾದ ಸೇಂಟ್ ಕ್ಸೇವಿಯರ್ಸ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ಪಾಟ್ನಾ ವಿಶ್ವವಿದ್ಯಾಲಯ, ಪಾಟ್ನಾ ವಿಶ್ವವಿದ್ಯಾಲಯದಿಂದ ಬಿ.ಎ ಮತ್ತು ಶಿಮ್ಲಾದ ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿ ಪಡೆದರು. 
  
2014 ಮತ್ತು 2019 ರ ನಡುವೆ ಅಮಿತ್ ಶಾ ನಾಯಕತ್ವದಲ್ಲಿ, ಬಿಜೆಪಿ ವಿವಿಧ ಹಂತಗಳಲ್ಲಿ ದೊಡ್ಡ ಸಂಘಟನೆಯಾಗಿ ಬೆಳೆದಿದೆ. 
ಬಿಜೆಪಿ ತನ್ನ ಅಸ್ತಿತ್ವ ಗಟ್ಟಿಯಾಗಿ ಅಧಿಕಾರವನ್ನು ಸೆರೆಹಿಡಿಯಲು ಸಮರ್ಥವಾಗಿರುವ ರಾಜ್ಯಗಳ ಪಟ್ಟಿಯಲ್ಲಿ ತ್ರಿಪುರ ಸೇರಿದೆ ಅದೆ ರೀತಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಗೆ ಕೇಸರಿ ಪಕ್ಷವು ಗಂಭೀರ ಸವಾಲಾಗಿ ಪರಿಣಮಿಸಿದೆ.

ದೆಹಲಿಯಲ್ಲಿ ಎಎಪಿ ವಿರುದ್ಧ ಬಿಜೆಪಿ ತೀವ್ರ ಸ್ಪರ್ದೆ ಎದುರಿಸುತ್ತಿರುವ ಕೆಲವೇ ದಿನಗಳ ಮೊದಲು ನಡ್ಡಾ ಅವರು ಪಕ್ಷದ ಸಾರಥ್ಯ ವಹಿಸಿಕೊಳ್ಳುತ್ತಿದ್ದು ಇದು ಅವರ ಪಾಲಿಗೆ ಮೊದಲ ಅಗ್ನಿ ಪರೀಕ್ಷೆಯಾಗಲಿದೆ.

ಪಕ್ಷದ ಮುಖ್ಯಸ್ಥರಾಗಿ ಆಯ್ಕೆಯಾದಾಗ ಅಮಿತ್ ಶಾ ಈ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯರು ಎಂಬ ಕೀರ್ತೀಗೆ ಭಾಜನರಾಗಿದ್ದರು. 

ಬಿಜೆಪಿಯ ಅಧ್ಯಕ್ಷರಲ್ಲಿ ಸಂಸ್ಥಾಪಕ ಪಿತಾಮಹರಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್ ಕೆ ಅಡ್ವಾಣಿ ಸೇರಿದ್ದಾರೆ, ಅವರು ಮೂರು ಅವಧಿಯಲ್ಲಿ 11 ವರ್ಷಗಳ ಕಾಲ ಪಕ್ಷದ ಮುಖ್ಯಸ್ಥರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ.

ಜೂನ್ 2019 ರಲ್ಲಿ, ಜೆ ಪಿ ನಡ್ಡಾ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ  ನೇಮಕ ಮಾಡಲಾಗಿತ್ತು. ಸ್ನೇಹಪರ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದ ನಡ್ಡಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಶಾ ಇಬ್ಬರೂ ಈ ಹುದ್ದೆಗೆ  ಆಯ್ಕೆ ಮಾಡಿದ್ದರು. ಈಗಲೂ ಅವರ ಕೃಪಕಟಾಕ್ಷದಿಂದಲೇ ನಡ್ಡಾ ಬಿಜೆಪಿ ಸಾರಥ್ಯ ವಹಿಸಕೊಳ್ಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com