ಸಿಎಎಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ, ನಾಲ್ಕು ವಾರದೊಳಗೆ ಉತ್ತರಿಸಲು ಮೋದಿ ಸರ್ಕಾರಕ್ಕೆ ಆದೇಶ

ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಕುರಿತು ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಬುಧವಾರ ಈ ಸಂಬಂಧ ನಾಲ್ಕು ವಾರಗಳೊಳಗೆ ಉತ್ತರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.
ಸಿಎಎಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ, ನಾಲ್ಕು ವಾರದೊಳಗೆ ಉತ್ತರಿಸಲು ಮೋದಿ ಸರ್ಕಾರಕ್ಕೆ ಆದೇಶ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಕುರಿತು ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಬುಧವಾರ ಈ ಸಂಬಂಧ ನಾಲ್ಕು ವಾರಗಳೊಳಗೆ ಉತ್ತರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.


ನಾಲ್ಕು ವಾರಗಳು ಕಳೆದ ನಂತರ ಎಲ್ಲಾ 143 ಅರ್ಜಿಗಳನ್ನು ಪ್ರತಿದಿನ ವಿಚಾರಣೆ ನಡೆಸಲು ಸಮಯ ನಿಗದಿಪಡಿಸಲಾಗುವುದು ಎಂದು ಕೂಡ ಹೇಳಿದೆ.


ಕೇಂದ್ರ ಸರ್ಕಾರದಿಂದ ಉತ್ತರ ಬರುವವರೆಗೆ ಕಾಯ್ದೆಗೆ ತಡೆಯೊಡ್ಡುವುದಿಲ್ಲ ಎಂದು ಕೂಡ ಹೇಳಿರುವ ಸುಪ್ರೀಂ ಕೋರ್ಟ್ ಕಾಯ್ದೆಯ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಲು ಸಾಂವಿಧಾನಿ ಪೀಠಕ್ಕೆ ಉಲ್ಲೇಖಿಸಲೂಬಹುದು ಎಂದು ಹೇಳಿದೆ.


ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ನೇತೃತ್ವದ ನ್ಯಾಯಪೀಠ ಎಲ್ಲಾ 143 ಅರ್ಜಿಗಳ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡಿತು. ಇದರಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸಲ್ಲಿಸಿರುವ ಅರ್ಜಿಗಳು ಸಹ ಇವೆ.

ಕೇಂದ್ರದ ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದ ಅಟೊರ್ನಿ ಜನರಲ್ ಕೆ ಕೆ ವೇಣುಗೋಪಾಲ್, ಸರ್ಕಾರಕ್ಕೆ 143 ಅರ್ಜಿಗಳಲ್ಲಿ 60 ಅರ್ಜಿಗಳು ಬಂದಿವೆ. ಇವುಗಳಿಗೆಲ್ಲಾ ಉತ್ತರಿಸಲು ಸರ್ಕಾರಕ್ಕೆ ಸಾಕಷ್ಟು ಕಾಲಾವಕಾಶ ಬೇಕು ಎಂದು ಕೇಳಿಕೊಂಡರು. 


ಈ ಸಂದರ್ಭದಲ್ಲಿ ಹಿರಿಯ ವಕೀಲ ಕಪಿಲ್ ಸಿಬಲ್, ಸಿಎಎ ಪ್ರಕ್ರಿಯೆಗಳಿಗೆ ತಡೆ ತರಬೇಕು ಮತ್ತು ಸದ್ಯದ ಮಟ್ಟಿಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ಮುಂದೂಡಬೇಕೆಂದು ಒತ್ತಾಯಿಸಿದರು.


ಇದಕ್ಕೆ ಉತ್ತರಿಸಿದ ನ್ಯಾಯಪೀಠ, ಕೇಂದ್ರದಿಂದ ಪ್ರತಿಕ್ರಿಯೆ ಬರದ ಹೊರತು ಸಿಎಎಗೆ ತಡೆ ತರುವುದಿಲ್ಲ ಎಂದು ಹೇಳಿತು. ಅಲ್ಲದೆ ಅಸ್ಸಾಂ ಮತ್ತು ತ್ರಿಪುರಾಗಳಿಂದ ಬಂದಿರುವ ಸಿಎಎ ವಿರೋಧಿ ಅರ್ಜಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುವುದು ಎಂದು ಹೇಳಿದೆ. ಅಸ್ಸಾಂನ ಕೇಸು ಸಿಎಎಗಿಂತ ವಿಭಿನ್ನವಾಗಿದ್ದು ಹಿಂದೆ ಪೌರತ್ವಕ್ಕೆ 1971 ಮಾರ್ಚ್ 24ರೊಳಗೆ ಬಂದವರಿಗೆ ಪೌರತ್ವ ನೀಡುವುದು ಎಂದು ಹೇಳಲಾಗುತ್ತಿತ್ತು. ಆದರೆ ಸಿಎಎಯಡಿ 2014ರ ಡಿಸೆಂಬರ್ 31ರೊಳಗೆ ಬಂದಿರುವ ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳ ಧಾರ್ಮಿಕ ಅಲ್ಪಸಂಖ್ಯಾತರು ಎಂದು ಹೇಳಲಾಗುತ್ತಿದೆ ಎಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com