ಬಾಂಬ್ ಪ್ರಕರಣದ ಆರೋಪಿ ಮುಸ್ಲಿಮನಾಗಿದ್ದರೆ ಬಿಜೆಪಿಯ ವರ್ತನೆಯೇ ಬೇರೆಯಾಗಿರುತ್ತಿತ್ತು: ದಿನೇಶ್ ಗುಂಡೂರಾವ್

ಮಂಗಳೂರು ಬಾಂಬ್ ಪತ್ತೆ ಪ್ರಕರಣದ ಆರೋಪಿ ಆದಿತ್ಯ ರಾವ್ ಅಲ್ಲದೇ ಬೇರೆ ಯಾರಾದರೂ ಮುಸ್ಲಿಂ ವ್ಯಕ್ತಿಯಾಗಿದಿದ್ದರೆ ಬಿಜೆಪಿ ನಾಯಕರ ವರ್ತನೆಯೇ ಬೇರೆಯಾಗಿರುತ್ತಿತ್ತು ಎಂದು ಕೆಪಿಸಿಸಿ  ಅಧ್ಯಕ್ಷ ದಿನೇಶ್ ಗುಂಡೂರಾವ್ ಸೂಚ್ಯವಾಗಿ ಹೇಳಿದ್ದಾರೆ.
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್

ಬೆಂಗಳೂರು: ಮಂಗಳೂರು ಬಾಂಬ್ ಪತ್ತೆ ಪ್ರಕರಣದ ಆರೋಪಿ ಆದಿತ್ಯ ರಾವ್ ಅಲ್ಲದೇ ಬೇರೆ ಯಾರಾದರೂ ಮುಸ್ಲಿಂ ವ್ಯಕ್ತಿಯಾಗಿದಿದ್ದರೆ ಬಿಜೆಪಿ ನಾಯಕರ ವರ್ತನೆಯೇ ಬೇರೆಯಾಗಿರುತ್ತಿತ್ತು ಎಂದು ಕೆಪಿಸಿಸಿ  ಅಧ್ಯಕ್ಷ ದಿನೇಶ್ ಗುಂಡೂರಾವ್ ಸೂಚ್ಯವಾಗಿ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರೋಪಿ ಆದಿತ್ಯರಾವ್ ಹಿಂದೆಯೂ ಕೆಲ ಘಟನೆಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಆರೋಪಿತನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪೊಲೀಸರು ಕಲೆ ಹಾಕಬೇಕಿದೆ. ಆದಿತ್ಯರಾವ್ ಬಂಧನ‌ದ ಸುದ್ದಿ ಬಿಜೆಪಿಯವರಿಗೆಸಂತೋಷ ತಂದಿರಲಿಕ್ಕಿಲ್ಲ ಎಂದು ವ್ಯಂಗ್ಯವಾಡಿದರು.

ಆದಿತ್ಯರಾವ್ ಜಾಗದಲ್ಲಿ ಬೇರೆಯವರಿದ್ದರೆ ಬಿಜೆಪಿ ನಾಯಕರ ಅಭಿಪ್ರಾಯಗಳೇ ವಿಭಿನ್ನವಾಗಿರುತ್ತಿತ್ತು. ಈಗ ರಾವ್ ಇರುವುದರಿಂದ ಬಿಜೆಪಿ ನಾಯಕರಿಂದ ಯಾವ ಹೇಳಿಕೆ ಹೊರಬೀಳಲಿಲ್ಲ. ಬಹುಶಃ ಬಿಜೆಪಿ ಭಕ್ತರಿಗೆ ಇದು ಸಂತೋಷ ತಂದಿಲ್ಲ. ತಾನಾಗಿಯೇ ಬಂದು  ಪೊಲೀಸರಿಗೆ ಶರಣಾಗಿರುವ ಕುರಿತು ಸಮಗ್ರ ತನಿಖೆಯಾಗಬೇಕು‌ ಎಂದು ಆಗ್ರಹಿಸಿದರು‌.

ಬಾಂಬ್ ದಾಳಿಯಲ್ಲಿ ಮುಸ್ಲಿಮ್ ವ್ಯಕ್ತಿಯಾಗಿದ್ದಿದ್ದರೆ ಬಿಜೆಪಿ ಅದನ್ನು ಎನ್‌ಕ್ಯಾಶ್ ಮಾಡಿಕೊಳ್ಳುತ್ತಿತ್ತು. ಆದರೆ ಈಗ ಆರೋಪಿ ಬೇರೆ ವ್ಯಕ್ತಿಯಾಗಿರುವುದರಿಂದ ಬಿಜೆಪಿ ಮೌನಕ್ಕೆ ಶರಣಾಗಿದೆ ಎಂದು ಬಿಜೆಪಿ ನಾಯಕರ ವಿರುದ್ಧ ದಿನೇಶ್ ಗುಂಡೂರಾವ್ ಕುಟುಕಿದರು.

ಸಾಹಿತಿ ಎಂ.ಎಂ ಕಲಬುರಗಿ, ಪತ್ರಕರ್ತೆ ಗೌರಿ ಲಂಕೇಶ್ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಪಾತ್ರವಿದೆ ಎನ್ನುವುದು ಪತ್ತೆಯಾಗಿದೆ. ಬಿಜೆಪಿಯವರು ಈ ಸಂಸ್ಥೆಯನ್ನು ಸಮರ್ಥಿಸಿಕೊಂಡಿದ್ದರು‌. ಗೊತ್ತಿದ್ದರೂ ಈಗ ಏನೂ ಆಗಿಲ್ಲದಂತೆ ಸುಮ್ಮನಿದ್ದಾರೆ. ಆದರೆ ಮುಸ್ಲಿಮ್ ವ್ಯಕ್ತಿಯಾಗಿದ್ದರೆ ದೊಡ್ಡ ರಂಪಾಟ  ಮಾಡುತ್ತಿದ್ದರು. ದೇಶದ್ರೋಹಿಗಳು ಎಂದು ಬಾಯಿ ಬಡಿದುಕೊಳ್ಳುತ್ತಿದ್ದರು‌. ಆರೋಪಿ ಹಿಂದೂ ಆಗುತ್ತಿದ್ದಂತೆ ಸುಮ್ಮನಾಗಿದ್ದಾರೆ. ಬಿಜೆಪಿಯವರು ಈಗ ದೇಶದಲ್ಲಿ ಈಗಾಗಲೇ ವಿಷವನ್ನೇ ತುಂಬಿಸಿದ್ದಾರೆ ಎಂದರು‌.

ಬಾಂಬ್ ಸ್ಫೋಟಿಸಿದ ರೀತಿಯನ್ನು ಪೊಲೀಸರ ಅಣಕು ಪ್ರದರ್ಶನ ಎಂಬ ಎಚ್‌‌.ಡಿ‌.ಕುಮಾರಸ್ವಾಮಿ ಲೇವಡಿಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಇದನ್ನು ಪೊಲೀಸರೇ ಮಾಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಕುಮಾರಸ್ವಾಮಿಯವರು ಯಾವ ಆಧಾರದಲ್ಲಿ  ಹೇಳಿದ್ದಾರೋ ಗೊತ್ತಿಲ್ಲ. ಸಣ್ಣದೋ, ದೊಡ್ಡದೋ ಪೊಲೀಸರು ತನಿಖೆ ಮಾಡಬೇಕು. ಆದರೆ ಇವತ್ತು  ಬಿಜೆಪಿಯವರಿಗಂತೂ ಡ್ಯಾಮೇಜ್ ಆಗಿದೆ. ಅವರು ಬಾಯಿ ತೆರೆಯಲು ಅವಕಾಶವೇ ಸಿಕ್ಕಿಲ್ಲ ಎಂದು ತಿರುಗೇಟು ನೀಡಿದರು.

ದೇಶದಲ್ಲಿ ಬಿಜೆಪಿ ಸರ್ವಾಧಿಕಾರಿ ಧೋರಣೆಯನ್ನು ತಾಳಿದೆ. ಹಿಂಸೆ, ದ್ವೇಷಕ್ಕೆ ಇವರೇ ಸಹಕಾರ ಕೊಡುತ್ತಿದ್ದಾರೆ ಎಂದು ಆರೋಪಿಸಿದರು‌.

ಇನ್ನು ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಮಾಡಿದವರ ಅಮಾನತು ವಿಚಾರವಾಗಿ ಪ್ರತಿಕ್ರಿಯಿಸಿದ  ದಿನೇಶ್ ಗುಂಡೂರಾವ್, ತಪ್ಪು ಮಾಡಿದ ಮೇಲೆ ಕ್ರಮ ತೆಗೆದುಕೊಳ್ಳಲೇಬೇಕು. ಕೆಪಿಸಿಸಿ ಮುಂದೆ ನಮ್ಮ ನಾಯಕರ ವಿರುದ್ಧ ಪ್ರತಿಭಟನೆ ಸರಿಯಲ್ಲ. ಹೀಗಾಗಿ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ಸಮರ್ಥಿಸಿಕೊಂಡರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ವಿಚಾರವಾಗಿ ಮಾತನಾಡಿದ  ಅವರು, ಯಾರೇ ಅಧ್ಯಕ್ಷರಾದರೂ ಸಹಕಾರ ಕೊಡಬೇಕು. ಗುಂಪುಗಾರಿಕೆ ಇದ್ದರೆ ಕೆಲಸ ಮಾಡುವುದು ಕಷ್ಟ. ಪಕ್ಷವನ್ನು ಸಂಘಟಿಸುವುದು ಕಷ್ಟ. ಗೊಂದಲಮಯ ವಾತಾವರಣ ಸೃಷ್ಟಿಸಿದರೆ  ಸರಿಯಾಗುವುದಿಲ್ಲ. ನಮ್ಮ ಹಿರಿಯ ನಾಯಕರು ಸಹಕಾರ ನೀಡಬೇಕು‌. ಗೊಂದಲದ ಹೇಳಿಕೆ ನೀಡುವುದನ್ನು  ನಿಲ್ಲಿಸಬೇಕು ಎಂದರು.

ತಮ್ಮ ಮುಂದುವರಿಕೆ ಬಗ್ಗೆ ಹೈಕಮಾಂಡ್ ಹೇಳಿಲ್ಲ. ಈ ಬಗ್ಗೆ ಉಸ್ತುವಾರಿ ವೇಣುಗೋಪಾಲ್ ಜೊತೆಯೂ ಮಾತನಾಡಲಾಗಿದೆ‌ ಎಂದು ಸ್ಪಷ್ಟಪಡಿಸಿದರು‌.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com