ಸಿಎಎ ನಮ್ಮ ಆಂತರಿಕ ವಿಚಾರ, ಮೂಗು ತೂರಿಸದಿರಿ: ಗೊತ್ತುವಳಿ ಮಂಡಿಸಿದ್ದ ಯುರೋಪ್'ಗೆ ಭಾರತ ತಿರುಗೇಟು

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಯೂರೋಪಿಯನ್ ಒಕ್ಕೂಟ ಮಂಡಿಸಿದ್ದ ಗೊತ್ತುವಳಿ ನಿರ್ಣಯದ ವಿರುದ್ಧ ಭಾರತ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಯೂರೋಪಿಯನ್ ಒಕ್ಕೂಟ ಮಂಡಿಸಿದ್ದ ಗೊತ್ತುವಳಿ ನಿರ್ಣಯದ ವಿರುದ್ಧ ಭಾರತ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದೆ. 

ಪೌರತ್ವ ತಿದ್ದುಪಡಿ ಕಾಯ್ದೆ ನಮ್ಮ ದೇಶದ ಆಂತರಿಕ ವಿಚಾರ. ಸಾಂವಿಧಾನಿಕವಾಗಿ ಆಯ್ಕೆಯಾದ ಸರ್ಕಾರ ತೆಗೆದುಕೊಂಡ ನಿರ್ಣಯದ ವಿರುದ್ಧ ಮೂಗು ತೂರಿಸುವ, ಅದರ ಅಧಿಕಾರವನ್ನು ಪ್ರಶ್ನಿಸುವ ಹಕ್ಕು ಯೂರೋಪಿಯನ್ ಒಕ್ಕೂಟದ ಸಂಸತ್'ಗೆ ಇಲ್ಲ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದೆ. 

ಅಲ್ಲದೆ, ಈ ನಿರ್ಣಯ ತೆಗೆದುಕೊಳ್ಳುವ ಕಾರಣಕರ್ತರಾದ ಪ್ರಯೋಜಕರು ಇದರ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಂಡು ಮುಂದಿನ ನಿರ್ಧಾರ ತೆಗೆದುಕೊಂಡರೆ ಒಳಿತು ಎಂದೂ ಕೂಡ ತಿಳಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಪೌರತ್ವ ಕಾಯ್ದೆ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿರುವ ನಡುವಲ್ಲೇ, ಯುರೋಪಿಯನ್ ಸಂಸತ್ತು ಕೂಡ ನಿನ್ನೆ ಕಾಯ್ದೆ ವಿರುದ್ಧ ಕ್ಯಾತೆ ತೆಗೆದಿತ್ತು. 

ಯುರೋಪ್ ಒಕ್ಕೂಟದ ಸಮಾಜವಾದಿ ಹಾಗೂ ಪ್ರಜಾಸತ್ತಾತ್ಮಕ ಸಮೂಹದ ಸಂಸದರು, ಒಕ್ಕೂಟದ ಸಂಸತ್ತಿನಲ್ಲಿ ಭಾರತದ ಪೌರತ್ವ ಕಾಯ್ದೆ ವಿರುದ್ಧ ಗೊತ್ತುವಳಿ ಮಂಡಿಸಿದ್ದರು. ಅಲ್ಲದೇ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ್ದಕ್ಕೆ ಸಂಬಂಧಿಸಿದಂತೆಯೂ ಗೊತ್ತುವಳಿಯೊಂದನ್ನು ಮಂಡಿಸಲಾಗಿತ್ತು. 

ಧರ್ಮದ ಆಧಾರದಲ್ಲಿ ನೀಡಲಾಗುತ್ತಿರುವ ಪೌರತ್ವವು ತಾರತಮ್ಯದಿಂದ ಕೂಡಿದೆ ಹಾಗೂ ವಿಭಜಕ ನೀತಿಯನ್ನು ಅನುಸರಿಸುತ್ತಿದೆ. ಹೀಗಾಗಿ ಕಾಯ್ದೆ ವಿರುದ್ಧ ಹೋರಾಟ ಮಾಡುತ್ತಿರುವ ಜೊತೆ ಭಾರತ ಸರ್ಕಾರ ಮಾತುಕತೆ ನಡೆಸಬೇಕು ಹಾಗೂ ಕಾಯ್ದೆಯನ್ನು ಹಿಂಪಡೆಯಬೇಕು ಎಂದು 24 ದೇಶಗಳ 154 ಸಂಸದರು ಗೊತ್ತುವಳಿ ಮಂಡಿಸಿ ಒತ್ತಾಯಿಸಿದ್ದರು. ಮಂಡನೆಯಾಗಿರುವ ಈ ಗೊತ್ತುವಳಿ ಜನವರಿ 29 ರಂದು ಐರೋಪ್ಯ ಒಕ್ಕೂಟದ ಸಂಸತ್ತಿನಲ್ಲಿ ಚರ್ಚೆಗೆ ಬರುವ ಹಾಗೂ ಜ.30ರಂದು ಮತದಾನ ನಡೆಯುವ ನಿರೀಕ್ಷೆಗಳಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com