2002 ಗುಜರಾತ್ ಗಲಭೆ ಪ್ರಕರಣ: 17 ಅಪರಾಧಿಗಳಿಗೆ 'ಸುಪ್ರೀಂ' ಜಾಮೀನು, ಮಧ್ಯಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ಆದೇಶ

2002ರಲ್ಲಿ ಗೋಧ್ರಾ ಹತ್ಯಾಕಾಂಡದ ನಂತರ ಅದಕ್ಕೆ ಪ್ರತೀಕಾರವಾಗಿ 33 ಮಂದಿ ಮುಸಲ್ಮಾನರನ್ನು ಸಜೀವ ದಹನಗೊಳಿಸಿದ ಸರ್ದಾರ್ ಪುರ ಘಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ 17 ಮಂದಿ ಅಪರಾಧಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಗೋಧ್ರಾ ರೈಲ್ವೆ ನಿಲ್ದಾಣ ಬಳಿ 2002ರಲ್ಲಿ  ಸಬರ್ಮತಿ ಎಕ್ಸ್ ಪ್ರೆಸ್ ರೈಲಿಗೆ ಬೆಂಕಿ ಹಚ್ಚಿರುವುದು
ಗೋಧ್ರಾ ರೈಲ್ವೆ ನಿಲ್ದಾಣ ಬಳಿ 2002ರಲ್ಲಿ ಸಬರ್ಮತಿ ಎಕ್ಸ್ ಪ್ರೆಸ್ ರೈಲಿಗೆ ಬೆಂಕಿ ಹಚ್ಚಿರುವುದು

ನವದೆಹಲಿ; 2002ರಲ್ಲಿ ಗೋಧ್ರಾ ಹತ್ಯಾಕಾಂಡದ ನಂತರ ಅದಕ್ಕೆ ಪ್ರತೀಕಾರವಾಗಿ 33 ಮಂದಿ ಮುಸಲ್ಮಾನರನ್ನು ಸಜೀವ ದಹನಗೊಳಿಸಿದ ಸರ್ದಾರ್ ಪುರ ಘಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ 17 ಮಂದಿ ಅಪರಾಧಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.


ಅಲ್ಲದೆ ಈ ಅಪರಾಧಿಗಳನ್ನು ಮಧ್ಯಪ್ರದೇಶಕ್ಕೆ ಸ್ಥಳಾಂತರಿಸಿ ಸಮುದಾಯ ಸೇವೆ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಬಿ ಆರ್ ಗವೈ ಹಾಗೂ ಸೂರ್ಯಕಾಂತ್ ಅವರನ್ನೊಳಗೊಂಡ ನ್ಯಾಯಪೀಠ ಅಪರಾಧಿಗಳನ್ನು ಎರಡು ಗುಂಪುಗಳಾಗಿ ವಿಭಾಗಿಸಿ ಒಂದು ಗುಂಪಿಗೆ ಗುಜರಾತ್ ನಿಂದ ಮಧ್ಯ ಪ್ರದೇಶದ ಇಂದೋರ್ ಗೆ ಹೋಗಿ ಅಲ್ಲಿ ನೆಲೆಸುವಂತೆ ಹೇಳಿದೆ.ಮತ್ತೊಂದು ಗುಂಪಿಗೆ ಮಧ್ಯ ಪ್ರದೇಶದಿಂದ ಜಬಲ್ ಪುರ್ ಗೆ ಸ್ಥಳಾಂತರಗೊಳ್ಳುವಂತೆ ನ್ಯಾಯಪೀಠ ಸೂಚಿಸಿದೆ. 


ಇಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ ನ್ಯಾಯಪೀಠ, ವಾರದಲ್ಲಿ 6 ಗಂಟೆಗಳ ಕಾಲ ಅಪರಾಧಿಗಳು ಸಮುದಾಯ ಸೇವೆಯಲ್ಲಿ ನಿರತರಾಗಿ ಪ್ರತಿ ವಾರ ಸ್ಥಳೀಯ ಪೊಲೀಸ್ ಠಾಣೆಗೆ ವರದಿ ಸಲ್ಲಿಸಬೇಕು ಎಂದು ಹೇಳಿದೆ. ನ್ಯಾಯಾಲಯ ವಿಧಿಸಿರುವ ಜಾಮೀನು ಷರತ್ತುಗಳನ್ನು ನಿಷ್ಠೆಯಿಂದ ಅಪರಾಧಿಗಳು ಪಾಲಿಸುತ್ತಿದ್ದಾರೆಯೇ ಇಲ್ಲವೇ ಎಂದು ನೋಡಿಕೊಳ್ಳಲು ಇಂದೋರ್ ಮತ್ತು ಜಬಲ್ ಪುರದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ.

ಅಪರಾಧಿಗಳು ತಮ್ಮ ಜೀವನೋಪಾಯಕ್ಕಾಗಿ ಅವರಿಗೆ ಹೊಂದಿಕೆಯಾಗುವ ಉದ್ಯೋಗಗಳನ್ನು ನೀಡುವಂತೆ ಸಹ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ಅಪರಾಧಿಗಳು ನ್ಯಾಯಾಲಯ ವಿಧಿಸಿರುವ ಷರತ್ತುಗಳನ್ನು ಸರಿಯಾಗಿ ಪಾಲಿಸುತ್ತಿದ್ದಾರೆಯೇ, ಇಲ್ಲವೇ ಎಂದು ನೋಡಿಕೊಂಡು ಮೂರು ತಿಂಗಳ ನಂತರ ವರದಿ ಸಲ್ಲಿಸುವಂತೆ ಮಧ್ಯ ಪ್ರದೇಶ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. 


ಸರ್ದಾರ್ ಪುರ್ ದಂಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿದ್ದ ಅಪರಾಧಿಗಳು ಗುಜರಾತ್ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಹಿಂದೆ ಗುಜರಾತ್ ಹೈಕೋರ್ಟ್, ಸರ್ದಾರ್ ಪುರ ಗಲಭೆ ಪ್ರಕರಣದಲ್ಲಿ 14 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ 17 ಮಂದಿಯನ್ನು ಅಪರಾಧಿಗಳೆಂದು ಘೋಷಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com