ಜಾಮಿಯಾ ಗುಂಡಿನ ದಾಳಿ: ಕಠಿಣ ಕ್ರಮಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ಅಮಿತ್ ಶಾ ಖಡಕ್ ಸೂಚನೆ!

ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಹತ್ಯೆ ದಿನದಂದೆ ದೆಹಲಿಯ ಜಾಮಿಯಾ ಬಳಿ ಸಿಎಎ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನಾ ನಿರತರ ಮೇಲೆ ಗೋಪಾಲ್ ಎಂಬಾತ ಗುಂಡು ಹಾರಿಸಿದ್ದು ಈ ಸಂಬಂಧ ಆರೋಪಿ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಪ್ರತ್ಯಕ್ಷ ಚಿತ್ರ
ಪ್ರತ್ಯಕ್ಷ ಚಿತ್ರ

ನವದೆಹಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಹತ್ಯೆ ದಿನದಂದೆ ದೆಹಲಿಯ ಜಾಮಿಯಾ ಬಳಿ ಸಿಎಎ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನಾ ನಿರತರ ಮೇಲೆ ಗೋಪಾಲ್ ಎಂಬಾತ ಗುಂಡು ಹಾರಿಸಿದ್ದು ಈ ಸಂಬಂಧ ಆರೋಪಿ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಜಾಮಿಯಾ ಮಿಲ್ಲಿಯ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಳಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಏಕಾಏಕಿ ಆಗಮಿಸಿದ ಗೋಪಾಲ್ ಎಂಬಾತ ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದ ಪರಿಣಾಮ ಜಾಮಿಯಾ ವಿವಿಯ ವಿದ್ಯಾರ್ಥಿಯೊಬ್ಬನಿಗೆ ಗಾಯವಾಗಿತ್ತು. 

ಈ ಸಂಬಂಧ ಮಾತನಾಡಿರುವ ಅಮಿತ್ ಶಾ ಅವರು, ಇಂತಹ ಘಟನೆಗಳನ್ನು ಕೇಂದ್ರ ಸರ್ಕಾರ ಸಹಿಸುವುದಿಲ್ಲ ಮತ್ತು ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ವೀಡಿಯೊವೊಂದರಲ್ಲಿ, ಆರೋಪಿ ಬಂದೂಕು ಹಿಡಿದು ‘ಯೆ ಲೋ ಆಜಾದಿ’(ಸ್ವಾತಂತ್ರ್ಯ ತೊಗಳ್ಳಿ)  ಎಂದು ಕೂಗುತ್ತಿರುವುದು ಕಂಡುಬಂದಿದೆ.

ಮಂಗಳವಾರ ಶಹೀನ್ ಬಾಗ್‍ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಾಕಾರರತ್ತ ವ್ಯಕ್ತಿಯೊಬ್ಬ ಬಂದೂಕು ಗುರಿಯಾಗಿಸಿದ ಎರಡು ದಿನಗಳ ನಂತರ ಈ ಘಟನೆ ನಡೆದಿದೆ. ಇಂದು ಬಂಧಿತನಾದ ವ್ಯಕ್ತಿ ಪರವಾನಗಿ ಪಡೆದ ಬಂದೂಕು ಹೊಂದಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಘಟನೆಯ ನಂತರ, ಇಂದು, ಆ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com