ಸರ್ವಪಕ್ಷಗಳ ಸಭೆ: ಜಾಗತಿಕ ಸನ್ನಿವೇಶವನ್ನು ಭಾರತದ ಪರವಾಗಿ ಬದಲಾಯಿಸಬೇಕು- ಮೋದಿ, ಪ್ರತಿಪಕ್ಷಗಳಿಂದ ಸಿಎಎ ವಿಷಯ ಪ್ರಸ್ತಾಪ

ಸಂಸತ್ ಬಜೆಟ್ ಅಧಿವೇಶನಕ್ಕೆ ಒಂದು ದಿನ ಮೊದಲು ಗುರುವಾರ ನಡೆದ ಸರ್ವಪಕ್ಷಗಳ ಸಭೆ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಎತ್ತಿ ತೋರಿಸಿದೆ.
ಸರ್ವಪಕ್ಷ ಸಭೆಯಲ್ಲಿ ಮೋದಿ
ಸರ್ವಪಕ್ಷ ಸಭೆಯಲ್ಲಿ ಮೋದಿ

ನವದೆಹಲಿ: ಸಂಸತ್ ಬಜೆಟ್ ಅಧಿವೇಶನಕ್ಕೆ ಒಂದು ದಿನ ಮೊದಲು ಗುರುವಾರ ನಡೆದ ಸರ್ವಪಕ್ಷಗಳ ಸಭೆ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಎತ್ತಿ ತೋರಿಸಿದೆ.
  
ವಿರೋಧ ಪಕ್ಷಗಳ ನಾಯಕರು ಎತ್ತಿದ ವಿವಿಧ ವಿಷಯಗಳಿಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಪ್ರತಿಪಕ್ಷಗಳು ಪ್ರಸ್ತಾಪಿಸಿರುವ ಪ್ರಮುಖ ವಿಷಯಗಳನ್ನು ಒಪ್ಪುತ್ತೇನೆ. ಈ ಎಲ್ಲ ವಿಷಯಗಳ ಬಗ್ಗೆ ಮುಕ್ತ ಚರ್ಚೆ ನಡೆಯಬೇಕೆಂಬುದು ತಮ್ಮ ಇಚ್ಛೆಯಾಗಿದೆ.’ ಎಂದು ಹೇಳಿದ್ದಾರೆ. 
  
ಸರ್ವಪಕ್ಷಗಳ ಸಭೆಯಲ್ಲಿ ಸಿಎಎ ವಿರೋಧಿ ಪ್ರತಿಭಟನೆಯ ವಿಷಯವನ್ನು ಪ್ರತಿಪಕ್ಷಗಳು ಪ್ರಮುಖವಾಗಿ ಪ್ರಸ್ತಾಪಿಸಿವೆ.  ಪ್ರತಿಭಟನಾಕಾರರ ಮೇಲೆ ಸರ್ಕಾರ ದರ್ಪ ತೋರುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದವು.
  
‘ವಿರೋಧ ಪಕ್ಷಗಳ ನಾಯಕರು ಸೇರಿದಂತೆ ಅನೇಕರು ದೇಶಕ್ಕೆ ಸಂಬಂಧಿಸಿದ ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಚರ್ಚಿಸಲು ಕೇಳಿಕೊಂಡಿದ್ದಾರೆ. ಇದನ್ನು ಸ್ವಾಗತಿಸುತ್ತೇನೆ. ಪ್ರತಿಪಕ್ಷಗಳು ಸೂಚಿಸಿದಂತೆ ಸರ್ಕಾರ ಆರ್ಥಿಕ ಸಮಸ್ಯೆಗಳನ್ನು ಚರ್ಚಿಸಬೇಕಾಗಿದೆ.’
  
ಸದ್ಯದ 'ಜಾಗತಿಕ ಸನ್ನಿವೇಶ'ದಿಂದ ಭಾರತ ಹೇಗೆ ಲಾಭ ಗಳಿಸಬಹುದು ಎಂಬುದರತ್ತ ಗಮನಹರಿಸಬೇಕು ಎಂದು ಪ್ರಧಾನಿ ಎಲ್ಲ ನಾಯಕರನ್ನು ಕೋರಿದರು. ಬಜೆಟ್ ಅಧಿವೇಶನದಲ್ಲಿ ಮತ್ತು ಹೊಸ ವರ್ಷದ ಆರಂಭದಲ್ಲಿ, ನಾವು ದೇಶದ ಆರ್ಥಿಕತೆಗೆ ಸರಿಯಾದ ಮಾರ್ಗ ರೂಪಿಸಲು ಸಾಧ್ಯವಾದರೆ, ಅದು ದೇಶಕ್ಕೆ ಹಿತ ಆಗುತ್ತದೆ.’ ಎಂದು ಮೋದಿ ಹೇಳಿದರು.
  
ಸರ್ಕಾರ ಅಹಂಕಾರ ತೋರುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ನಿರಾಕರಿಸಿದರು. ಜಮ್ಮು-ಕಾಶ್ಮೀರದಲ್ಲಿ ವಶಕ್ಕೆ ಪಡೆಯಲಾಗಿರುವ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಸೇರಿದಂತೆ ಇತರರನ್ನು ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ಒತ್ತಾಯಿಸಿದರು.
  
ದೆಹಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ನಾಯಕರು ನೀಡಿದ ಕೆಲ ಹೇಳಿಕೆಗಳನ್ನು ಸಹ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಕಾಂಗ್ರೆಸ್ ನ ಮತ್ತೊಬ್ಬ ಮುಖಂಡ ಆನಂದ್ ಶರ್ಮಾ ಹೇಳಿದ್ದಾರೆ.

ಚುನಾವಣಾ ಆಯೋಗ ಗುರುವಾರ ಆಕ್ಷೇಪಾರ್ಹ ಭಾಷಣ ಮಾಡಿರುವ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಮತ್ತು ಬಿಜೆಪಿ ಸಂಸದ ಪರ್ವೇಶ್ ಸಿಂಗ್ ವರ್ಮಾ ಅವರನ್ನು ನಾಲ್ಕು ದಿನ ಚುನಾವಣಾ ಪ್ರಚಾರದಿಂದ ನಿಷೇಧಿಸಿದೆ. . 
  
ಸಂಸತ್ತಿನ ಅಧಿವೇಶನಗಳನ್ನು ಸರ್ಕಾರ ಕ್ರಮೇಣ ಮೊಟಕುಗೊಳಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಆಜಾದ್ ಆರೋಪಿಸಿದ್ದಾರೆ. ಆದರೆ, ಸಂಸದೀಯ ವ್ಯವಹಾರಗಳ ಸಚಿವ ಜೋಶಿ ಈ ಆರೋಪವನ್ನು ನಿರಾಕರಿಸಿದರು. ಡಿಎಂಕೆ ಸದಸ್ಯ ಟಿ ಆರ್ ಬಾಲು ತಮಿಳುನಾಡಿನ ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದರು.
  
ಕಳೆದ ಎರಡು ಅಧಿವೇಶನಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ‘ಕಳೆದ ಎರಡು ಅಧಿವೇಶನಗಳಲ್ಲಿ ಹೆಚ್ಚಿನ ಫಲಶ್ರುತಿ ದೊರೆತಿದೆ. ಇದರ ಪರವಾಗಿ ಸಾರ್ವಜನಿಕರ ಪ್ರತಿಕ್ರಿಯೆಯನ್ನು ನೋಡಿದ್ದೇವೆ. ಜನರ ಪ್ರತಿನಿಧಿಗಳಾಗಿ, ಸದನದ ಉತ್ಪಾದಕತೆಯನ್ನು ಹೆಚ್ಚಿಸುವುದು ನಮ್ಮ ಜವಾಬ್ದಾರಿಯಾಗಿದೆ. ಸರ್ಕಾರ ಎಲ್ಲ ಸಮಸ್ಯೆಗಳನ್ನು ಮುಕ್ತ ಮನಸ್ಸಿನಿಂದ ಚರ್ಚಿಸಲಿದೆ.’ ಎಂದು ಹೇಳಿದ್ದಾರೆ. 
  
ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಹ  ಪಾಲ್ಗೊಂಡಿದ್ದರು. 
  
ಶುಕ್ರವಾರದಿಂದ ಆರಂಭವಾಗುವ ಬಜೆಟ್ ಅಧಿವೇಶನದಲ್ಲಿ ಸರ್ಕಾರ ಕನಿಷ್ಠ 45 ಮಸೂದೆಗಳನ್ನು ಮಂಡಿಸುವ  ಸಾಧ್ಯತೆಯಿದೆ. 2020-21ರ ಹಣಕಾಸು ವರ್ಷದ ಬಜೆಟ್ ಅನ್ನು ಫೆ. 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಸಿಎಎ ವಿರೋಧಿ ಪ್ರತಿಭಟನೆ ಮತ್ತು ದೇಶದ ವಿವಿಧೆಡೆ ವಿಶ್ವವಿದ್ಯಾಲಯಗಳ ಕ್ಯಾಂಪಸ್‍ಗಳಲ್ಲಿ ನಡೆಯುತ್ತಿರುವ ಹಿಂಸಾಚಾರಗಳ ನಡುವೆಯೇ ಸಂಸತ್ ಬಜೆಟ್ ಅಧಿವೇಶನ ನಡೆಯಲಿದೆ. ಚಳಿಗಾಲದ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಎಲ್ಲ ಪ್ರಕ್ರಿಯೆಗಳ ನಂತರ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕರಿಸಲಾಗಿರುವುದರಿಂದ ಹೊಸ ಕಾನೂನಿನ ಬಗ್ಗೆ ಪ್ರತಿಪಕ್ಷಗಳು ಸಂಸತ್ ನ ಹೊರಗೆ ತಮ್ಮ ನಿಲುವಿನ ಕುರಿತು 'ಆತ್ಮಾವಲೋಕನ' ಮಾಡಿಕೊಳ್ಳಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಜೋಶಿ ಉತ್ತರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com