ಸಿಎಎ ಮಹಾತ್ಮಾ ಗಾಂಧಿ ಕನಸನ್ನು ನನಸು ಮಾಡಿದೆ, ಹಿಂಸಾಚಾರ ದೇಶವನ್ನು ದುರ್ಬಲಗೊಳಿಸುತ್ತದೆ: ರಾಷ್ಟ್ರಪತಿ ಕೋವಿಂದ್

ಸಂಸತ್ತಿನ ಬಜೆಟ್ ಅಧಿವೇಶನ ಶುಕ್ರವಾರ ಆರಂಭವಾಗಿದೆ. ಇದಕ್ಕೂ ಮುನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದರು.

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಶುಕ್ರವಾರ ಆರಂಭವಾಗಿದೆ. ಇದಕ್ಕೂ ಮುನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದರು.


ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಇಂದು ಭಾಷಣ ಮಾಡಿದ ರಾಷ್ಟ್ರಪತಿಗಳು ಸರ್ಕಾರದ ಅಭಿಪ್ರಾಯ, ಕನಸು ಆಶೋತ್ತರಗಳನ್ನು ಮಂಡಿಸಿದರು. ಈ ದಶಕ ಭಾರತದ ಬೆಳವಣಿಗೆ ಮುಖ್ಯವಾದುದು, ಮಹಾತ್ಮಾ ಗಾಂಧಿಯವರ ಕನಸುಗಳನ್ನು ಈ ದಶಕ ನನಸು ಮಾಡಲಿದೆ ಎಂದು ಭಾಷಣದ ಆರಂಭಕ್ಕೆ ಹೇಳಿದರು. ಎಲ್ಲರಿಗಾಗಿ ನವ ಭಾರತ ನಿರ್ಮಾಣ ಮಾಡುವ ಅಗತ್ಯವಿದೆ ಎಂದರು.


ಭಾಷಣದ ಮುಖ್ಯಾಂಶಗಳು ಹೀಗಿವೆ: ಸುಪ್ರೀಂ ಕೋರ್ಟ್ ಅಯೋಧ್ಯೆ ತೀರ್ಪು ನೀಡಿದ ನಂತರ ದೇಶದ ನಾಗರಿಕರು ತೋರಿಸಿದ ವರ್ತನೆ ಮತ್ತು ನಿರ್ವಹಿಸಿದ ಶಾಂತಿಯ ಧೋರಣೆ ನಿಜಕ್ಕೂ ಶ್ಲಾಘನೀಯ ಮತ್ತು ಗಮನಾರ್ಹ. ಅದು ಈ ದೇಶದ ನಾಗರಿಕರ ವರ್ತನೆ ಮತ್ತು ಬೌದ್ಧಿಕ ಪರಿಪಕ್ವತೆಯನ್ನು ತೋರಿಸುತ್ತದೆ. 


-ಪಾಕಿಸ್ತಾನದಲ್ಲಿ ನೆಲೆಸಲು ಇಚ್ಛೆಯಿಲ್ಲದ ಹಿಂದೂಗಳು ಭಾರತಕ್ಕೆ ಬರಬಹುದು ಎಂದು ಮಹಾತ್ಮಾ ಗಾಂಧಿ ಹೇಳಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ತರುವ ಮೂಲಕ ನನ್ನ ಸರ್ಕಾರ ಬಾಪು ಅವರ ಆಶಯಗಳನ್ನು ಈಡೇರಿಸಿದೆ. ರಾಷ್ಟ್ರಪತಿಗಳು ಹೀಗೆ ಹೇಳುತ್ತಿದ್ದಂತೆ ವಿರೋಧ ಪಕ್ಷದ ನಾಯಕರಿಂದ ಸದನದಲ್ಲಿ ಗದ್ದಲ, ಸರ್ಕಾರದ ವಿರುದ್ಧ ಘೋಷಣೆ.


-ಸಂವಿಧಾನ ವಿಧಿ 370 ಮತ್ತು 35ಎಯನ್ನು ರದ್ದುಪಡಿಸುವ ಮೂಲಕ ಸರ್ಕಾರ ಕೇವಲ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿರುವುದು ಮಾತ್ರವಲ್ಲದೆ ಜಮ್ಮು,ಕಾಶ್ಮೀರ ಮತ್ತು ಲಡಾಕ್ ಬೆಳವಣಿಗೆಗೆ ಸಮಾನ ಅವಕಾಶವನ್ನು ಕೇಂದ್ರ ಸರ್ಕಾರ ನೀಡಿದಂತಾಗಿದೆ.


-ಪರಸ್ಪರ ಚರ್ಚೆ, ಸಂವಾದ, ಮಾತುಕತೆಗಳು ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಸರ್ಕಾರ ನಂಬಿದೆ. ಹಾಗೆಂದು ಪ್ರತಿಭಟನೆ ಹೆಸರಿನಲ್ಲಿ ಹಿಂಸಾಚಾರ ನಡೆಸುವುದು ದೇಶ ಮತ್ತು ಸಮಾಜವನ್ನು ಕುಗ್ಗಿಸುತ್ತದೆ. 


-ಈ ಸಂಸತ್ತಿನಲ್ಲಿ ಹಲವು ಮಹತ್ವಪೂರ್ಣ ಮಸೂದೆಗಳು ಮಂಡನೆಯಾಗಿ ಅನುಮೋದನೆಗೊಂಡಿವೆ. ತ್ರಿವಳಿ ತಲಾಖ್, ಗ್ರಾಹಕರ ರಕ್ಷಣೆ ಮಸೂದೆ, ಚಿಟ್ ಫಂಡ್ ತಿದ್ದುಪಡಿ ಕಾನೂನು, ಮೋಟಾರು ವಾಹನ ಕಾಯ್ದೆ, ತೃತೀಯ ಲಿಂಗಿಗಳ ರಕ್ಷಣೆ ಕಾಯ್ದೆಗಳು ಸರ್ಕಾರದ ಪ್ರಮುಖ ಸಾಧನೆಗಳು.


-ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ಕಿರುಕುಳವನ್ನು ಖಂಡಿಸುತ್ತೇವೆ. ಎಲ್ಲರಿಗೂ ಪೌರತ್ವ ವಿಚಾರದಲ್ಲಿ ಸರ್ಕಾರ ಮುಕ್ತವಾಗಿದೆ. ಸರ್ಕಾರದ ಕಾನೂನು ಪ್ರಕ್ರಿಯೆ ಮತ್ತು ಮಾರ್ಗಸೂಚಿಗಳು ನಾಗರಿಕರು ಪಾಲಿಸಬೇಕಷ್ಟೆ. 


-ಜಾಗತಿಕ ಮಟ್ಟದಲ್ಲಿ ಭಾರತದ ಮಟ್ಟವನ್ನು ಹೆಚ್ಚಿಸುವ ಅನೇಕ ಸುಧಾರಣಾ ಕ್ರಮಗಳನ್ನು ನನ್ನ ಸರ್ಕಾರ ತಂದಿದೆ.


-ಈ ದಶಕದಲ್ಲಿ ಮತ್ತು ಅದರಿಂದಾಚೆಗೂ ನಮಗೆಲ್ಲರಿಗೂ ಭಾರತದ ಸಂವಿಧಾನ ದಾರಿದೀಪವಾಗಿದೆ.


-ಇದು ನವ ಭಾರತ ನಿರ್ಮಾಣಕ್ಕೆ ಜನತೆ ತೀರ್ಪು ನೀಡಿ ಆರಿಸಿದ ಸರ್ಕಾರ. ಆ ಗುರಿಯನ್ನು ಸಾಧಿಸುವುದರತ್ತ ನನ್ನ ಸರ್ಕಾರ ಕೆಲಸ ಮಾಡುತ್ತಿದೆ.


-ನನ್ನ ಸರ್ಕಾರ ತಂದಿರುವ ಎಲ್ಲಾ ಉಪಕ್ರಮಗಳು ಮತ್ತು ಯೋಜನೆಗಳು ಈ ದೇಶದ ಬಡವರು, ನಿರ್ಗತಿಕರು, ಮಧ್ಯಮ ವರ್ಗದವರಿಗೆ ಅನುಕೂಲವಾಗಿದ್ದು ಇಲ್ಲಿ ಜಾತಿ, ಧರ್ಮ ಎಂದು ತಾರತಮ್ಯ ಇರುವುದಿಲ್ಲ.


-ಸರ್ಕಾರದ ಯೋಜನೆಗಳ ಸೌಲಭ್ಯ ಮತ್ತು ಪ್ರಯೋಜನಗಳನ್ನು ಎಲ್ಲಾ ವರ್ಗದವರು ಬಳಸಿಕೊಳ್ಳುತ್ತಿದ್ದಾರೆ.


-ದಾಖಲೆಯ ಅವಧಿಯಲ್ಲಿ ನನ್ನ ಸರ್ಕಾರ ಕರ್ತಾರ್ ಪುರ್ ಸಾಹಿಬ್ ಕಾರಿಡಾರ್ ನಿರ್ಮಾಣ ಮಾಡಿದೆ. ಗುರುನಾನಕ ದೇವ್ ಅವರ 550ನೇ ಪ್ರಕಾಶ ಪರ್ವದ ಶುಭ ಸಂದರ್ಭದಲ್ಲಿ ಅದನ್ನು ದೇಶಕ್ಕೆ ಸಮರ್ಪಿಸಲಾಗಿದೆ.ಸಿಖ್ಖರ ಸ್ಥಾಪಕ ಗುರು ಅವರ ಮಂದಿರಕ್ಕೆ ಆ ಧರ್ಮೀಯರು ಭೇಟಿ ನೀಡಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com