ದೆಹಲಿಯಲ್ಲಿ ಕೊವಿಡ್-19 ಪರಿಸ್ಥಿತಿ ಸುಧಾರಣೆ, 26 ಸಾವಿರ ಸಕ್ರಿಯ ಪ್ರಕರಣಗಳು ಮಾತ್ರ ಇವೆ: ಸಿಎಂ ಕೇಜ್ರಿವಾಲ್

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕಕ್ಕೆ ತುತ್ತಾಗಿದ್ದ ರಾಷ್ಟ್ರ ರಾಜಧಾನಿ  ದೆಹಲಿಯಲ್ಲಿ ಪರಿಸ್ಥಿತಿ ಈಗ ಸಾಕಷ್ಟು ಸುಧಾರಿಸುತ್ತಿದ್ದು, ರಾಜ್ಯದಲ್ಲಿ ಪ್ರಸ್ತುತ 26 ಸಾವಿರ ಸಕ್ರಿಯ ಪ್ರಕರಣಗಳು ಮಾತ್ರ ಇವೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಸಿಎಂ ಅರವಿಂಜ್ ಕೇಜ್ರಿವಾಲ್
ದೆಹಲಿ ಸಿಎಂ ಅರವಿಂಜ್ ಕೇಜ್ರಿವಾಲ್

ನವದೆಹಲಿ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕಕ್ಕೆ ತುತ್ತಾಗಿದ್ದ ರಾಷ್ಟ್ರ ರಾಜಧಾನಿ  ದೆಹಲಿಯಲ್ಲಿ ಪರಿಸ್ಥಿತಿ ಈಗ ಸಾಕಷ್ಟು ಸುಧಾರಿಸುತ್ತಿದ್ದು, ರಾಜ್ಯದಲ್ಲಿ ಪ್ರಸ್ತುತ 26 ಸಾವಿರ ಸಕ್ರಿಯ ಪ್ರಕರಣಗಳು ಮಾತ್ರ ಇವೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಮಾರಕ ಕೊರೋನಾ ವೈರಸ್ ಹೊಡೆತಕ್ಕೆ ಸಿಲುಕಿ ನರಳುತ್ತಿದ್ದ ದೆಹಲಿಯಲ್ಲಿ ಇದೀಗ ಪರಿಸ್ಥಿತಿ ಕೊಂಚ ಸುಧಾರಣೆ ಕಾಣುತ್ತಿದ್ದು, ಇದೇ ವಿಚಾರವಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

'ಕಳೆದ ಒಂದು ತಿಂಗಳ ಹಿಂದೆ ಲಾಕ್ ಡೌನ್ ತೆರವು ಮಾಡಿದ ಬಳಿಕ ದೆಹಲಿಯಲ್ಲಿ ಭಾರಿ ಪ್ರಮಾಣದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿತ್ತು. ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯದ ತಜ್ಞರು ಅಭಿಪ್ರಾಯಪಟ್ಟಂತೆ ದೆಹಲಿಯಲ್ಲಿ ಜೂನ್ ತಿಂಗಳ ಅಂತ್ಯಕ್ಕೆ ಸೋಂಕಿತರ ಸಂಖ್ಯೆ 1 ಲಕ್ಷಕ್ಕೇರುವ ಸಾಧ್ಯತೆ ಇದೆ. ಅಂತೆಯೇ ಸಕ್ರಿಯ ಪ್ರಕರಣಗಳ ಸಂಖ್ಯೆ 70 ಸಾವಿರಕ್ಕೆ ಏರಿಕೆಯಾಗಲಿದೆ. 15 ಸಾವಿರ ಬೆಡ್ ಗಳ ಕೊರತೆ ಎದುರಾಗಲಿದೆ ಎಂದು ಅಂದಾಜಿಸಲಾಗಿತ್ತು. ಈ ಪರಿಸ್ಥಿತಿಯನ್ನು ಮನಗಂಡ ತಮ್ಮ ಸರ್ಕಾರ ಮತ್ತು ತಾವು ಕೈಕಟ್ಟಿ ಕೂರಲಿಲ್ಲ. ಎಲ್ಲ ಸರ್ಕಾರಿ ಆಸ್ಪತ್ರೆಗಳನ್ನು ಅತ್ಯಂತ ವೇಗವಾಗಿ ದುರಸ್ತಿ ಮಾಡಿ ಅಲ್ಲಿನ ಬೆಡ್ ಗಳ ಸಾಮರ್ಥ್ಯವನ್ನು ಗರಿಷ್ಠ ಪ್ರಮಾಣದ ವರೆಗೂ ಹೆಚ್ಚಳ ಮಾಡಿದೆವು. ನಾವು ಯಾರಬಳಿ ನೆರವು ಪಡೆಯಬಹುದೋ ಎಲ್ಲರ ಬಳಿಯೂ ಹೋಗಿ ನೆರವು ಕೋರಿದೆವು. ಖಾಸಗಿ ಆಸ್ಪತ್ರೆಗಳು, ಸಣ್ಣ ಪುಟ್ಟ ನರ್ಸಿಂಗ್ ಹೋಮ್ ಗಳು, ಹೆಲ್ತ್ ಕೇರ್ ಸೆಂಟರ್ ಗಳು ಸೇರಿದಂತೆ ಹೊಟೆಲ್ ಗಳು ಕಲ್ಯಾಣ ಮಂಟಪಗಳು ಎಲ್ಲರೊಂದಿಗೆ ಮಾತನಾಡಿ ಬೆಡ್ ಗಳ ವ್ಯವಸ್ಥೆ ಮಾಡಿಸಿದೆವು. 

ಸಾಮಾಜ ಸೇವೆ ಸಂಸ್ಥೆಗಳೊಂದಿಗೆ ಕೈ ಜೋಡಿಸಿದೆವು. ಎನ್ ಜಿಒಗಳು, ಧಾರ್ಮಿಕ ಸಂಸ್ಥೆಗಳು, ಕೇಂದ್ರ ಸರ್ಕಾರ ನಮ್ಮ ಜೊತೆ ಕೈ ಜೋಡಿಸಿದವು. ಈ ನಡುವೆ ಹೊಟೆಲ್ ಮಾಲೀಕರು ಸರ್ಕಾರದ ವಿರುದ್ಧ ಪ್ರಕರಣ ಹೂಡಿದರು. ದೇವರ ಆಶೀರ್ವಾದದಿಂದಾಗಿ ಆ ಕೇಸ್ ನಮ್ಮ ಪರವಾಯಿತು. ನಾವು ಕೊರೋನಾ ನಿಯಂತ್ರಣಕ್ಕೆ ಬೇಕಾದ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಂಡೆವು. ಇಂದು ಅದರ ಫಲಿತಾಂಶ ನಿಧಾನವಾಗಿ ಲಭ್ಯವಾಗುತ್ತಿದ್ದು, ದೆಹಲಿಯಲ್ಲಿ ಪ್ರಸ್ತುತ ಪರಿಸ್ಥಿತಿ ಸುಧಾರಿಸುತ್ತಿದೆ. ಕೇವಲ ಒಂದು ತಿಂಗಳ ಅಂತರದಲ್ಲಿ ತಾರಕ್ಕೇರಿದ್ದ ಸೋಂಕಿತರ ಪ್ರಮಾಣ ಇದೀಗ ಅಂದಾಜಿಗಿಂತ ಶೇ.50ರಷ್ಟು ಕಡಿಮೆಯಾಗಿದೆ.

ದೆಹಲಿ ಜನತೆಯ ಬೆಂಬಲದಿಂದಾಗಿ ಅತ್ಯಂತ ಕಠಿಣಾತಿ ಸಂದರ್ಭವನ್ನು ನಾವು ಮೆಟ್ಟಿ ನಿಂತಿದ್ದೇವೆ. ಜೂನ್ 30ರ ವೇಳೆಗೆ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷಕ್ಕೇರುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಒಟ್ಟಾರೆ ಸೋಂಕಿತರ ಸಂಖ್ಯೆ ಜುಲೈ 1ರವೇಳೆಗೆ 60 ಸಾವಿರದಷ್ಟಿದೆ. ಈ ಪೈಕಿ ಸುಮಾರು 35 ಸಾವಿರ ಮಂದಿ ಸೋಂಕಿತರು ಗುಣಮುಖರಾಗಿದ್ದು, ರಾಜ್ಯದಲ್ಲಿ ಪ್ರಸ್ತುತ 25 ಸಾವಿರ ಸಕ್ರಿಯ ಪ್ರಕರಣಗಳು ಮಾತ್ರ ಇವೆ. ಜೂನ್ 30ರವೇಳೆಗೆ ದೆಹಲಿಯಲ್ಲಿ 70 ಸಾವಿರ ಸಕ್ರಿಯ ಪ್ರಕರಣಗಳಿರಲಿವೆ ಎಂದು ಹೇಳಲಾಗಿತ್ತು. ಆದರೆ ಈ ಸಂಖ್ಯೆಯನ್ನು 25 ಸಾವಿರಕ್ಕೆ ನಿಯಂತ್ರಿಸಿದ್ದೇವೆ. ಈ ಯಶಸ್ಸು ದೆಹಲಿಯ ಎಲ್ಲ ಜನತೆ, ಕೋವಿಡ್ ವಾರಿಯರ್ಸ್, ದೆಹಲಿ ಪೊಲೀಸರಿಗೆ ಸಲ್ಲಬೇಕು. ನಿಮ್ಮ ಬೆಂಬಲ ಹೀಗೆಯೇ ಮುಂದುವರೆದರೆ ಕೊರೋನಾವನ್ನು ದೆಹಲಿಯಿಂದ ಸಂಪೂರ್ಣವಾಗಿ ಸೋಲಿಸುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com