ಚೀನಾ ಮೇಲೆ ಡಿಜಿಟಲ್ ಏರ್'ಸ್ಟೈಕ್: ಗೂಗಲ್ ಪ್ಲೇ ಸ್ಟೋರ್, ಆ್ಯಪ್'ಸ್ಟೋರ್'ನಿಂದ ಟಿಕ್'ಟಾಕ್ ಆ್ಯಪ್ ಔಟ್

ದೇಶದ ಸಾರ್ವಭೌಮತೆ ಹಾಗೂ ಐಕ್ಯತೆಗೆ ಭಂಗ ತರುವ ಚಟುವಟಿಕೆಗಳಲ್ಲಿ ತೊಡಗಿದ್ದ ಕಾರಣ ನೀಡಿ 59 ಆ್ಯಪ್'ಗಳಿಗೆ ಭಾರತ ನಿಷೇಧ ಹೇರಿದ್ದು, ಗಡಿಯಲ್ಲಿ ತಗಾದೆ ತೆಗೆದಿರುವ ಚೀನಾ ರಾಷ್ಟ್ರಕ್ಕೆ ಸರಿಯಾಗಿಯೇ ಬಿಸಿ ಮುಟ್ಟಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದ ಸಾರ್ವಭೌಮತೆ ಹಾಗೂ ಐಕ್ಯತೆಗೆ ಭಂಗ ತರುವ ಚಟುವಟಿಕೆಗಳಲ್ಲಿ ತೊಡಗಿದ್ದ ಕಾರಣ ನೀಡಿ 59 ಆ್ಯಪ್'ಗಳಿಗೆ ಭಾರತ ನಿಷೇಧ ಹೇರಿದ್ದು, ಗಡಿಯಲ್ಲಿ ತಗಾದೆ ತೆಗೆದಿರುವ ಚೀನಾ ರಾಷ್ಟ್ರಕ್ಕೆ ಸರಿಯಾಗಿಯೇ ಬಿಸಿ ಮುಟ್ಟಿಸಿದೆ. ಚೀನಾ ಮೇಲೆ ಡಿಜಿಟಲ್ ಏರ್'ಸ್ಟ್ರೈಕ್ ಆರಂಭಗೊಂಡಿದ್ದು, ನಿಷೇಧಿಕ ಟಿಕ್'ಟಾಕ್ ಆ್ಯಪ್'ನ್ನು ಗೂಗಲ್ ಪ್ಲೇಸ್ಟೋರ್ ಹಾಗೂ ಆ್ಯಪ್ ಸ್ಟೋರ್ ಗಳಿಂದ ತೆಗೆದುಹಾಕಲಾಗಿದೆ. 

ಭಾರತ ಸರ್ಕಾರ ನಿಷೇಧಿಸಿರುವ ಈ 59 ಆ್ಯಪ್'ಗಳನ್ನು ಇನ್ನು ಮುಂದೆ ಪ್ಲೇಸ್ಟೋರ್ ಅಥವಾ ಆ್ಯಪ್ ಸ್ಟೋರ್ ನಿಂದ ಡೌನ್'ಲೋಡ್ ಮಾಡಿಕೊಳ್ಳಲು ಸಾಧ್ಯವಿಲ್ಲ. 

ಚೀನಾ ಟಿಕ್'ಟಾಕ್ ಆ್ಯಪ್'ನ್ನು ಭಾರತೀಯರು ಭಾರೀ ಸಂಖ್ಯೆಯಲ್ಲಿ ಬಳಕೆ ಮಾಡುತ್ತಿದ್ದರು. ಸುಮಾರು 10 ಕೋಟಿ ಜನರು ಈ ಆ್ಯಪ್'ನ್ನು ಬಳಕೆ ಮಾಡುತ್ತಿದ್ದು. ಈಗಾಗಲೇ ಡೌನ್'ಲೋಡ್ ಮಾಡಿಕೊಂಡಿರುವವರು ಟಿಕ್ ಟಾಕ್ ಆ್ಯಪ್ ಬಳಕೆ ಮಾಡಬಹುದು. ಆದರೆ, ಮತ್ತೆ ಆ್ಯಪ್'ನ್ನು ಡೌನ್ ಲೋಡ್ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. 

ನಿಮ್ಮ ಮೊಬೈಲ್ ನಲ್ಲಿ ಟಿಕ್ ಟಾಕ್ ಆ್ಯಪ್ ಇದ್ದರೆ ಮಾತ್ರ ಗೂಗಲ್ ಪ್ಲೇಸ್ಟೋರ್ ನಲ್ಲಿ ಕಾಣಿಸುತ್ತದೆ. ಒಮ್ಮೆ ಅನ್ ಇನ್ಸ್ಟಾಲ್ ಮಾಡಿದರೂ ಮತ್ತೆ ಪ್ಲೇಸ್ಟೋರ್ ನಲ್ಲಿ ಕಾಣಿಸುವುದಿಲ್ಲ. 

ನಿಷೇಧದ ಬಿಸಿ ತಟ್ಟುತ್ತಿದ್ದಂತೆಯೇ ನಿನ್ನಯಷ್ಟೇ ಹೇಳಿಕೆ ನೀಡಿದ್ದ ಚೀನಾ, ಅಂತರಾಷ್ಟ್ರೀಯ ಹೂಡಿಕೆದಾರರ ನ್ಯಾಯಸಮ್ಮತ ಹಾಗೂ ಕಾನೂನುಬದ್ಧ ಹಕ್ಕುಗಳನ್ನು ಭಾರತ ಎತ್ತಿಹಿಡಿಯಬೇಕು. ಭಾರತ ನೀಡಿರುವ ನೋಟಿಸ್ ನಿಂದ ನಾವು ತೀವ್ರ ಕಳವಳಗೊಂಡಿದ್ದೇವೆ. ಭಾರತದ ನಡೆ ಹಾಗೂ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೇವೆ. ವಿದೇಶದಲ್ಲಿ ಉದ್ಯಮ ಸಹಕಾರದಲ್ಲಿ ತೊಡಗಿಸಿಕೊಂಡಾಗ ಅಂತರಾಷ್ಟ್ರೀಯ ಕಾನೂನುಗಳು, ಸ್ಥಳೀಯ ಕಾಯ್ದೆಗಳು ಹಾಗೂ ನಿಯಂತ್ರಣಗಳಿಗೆ ಬದ್ಧವಾಗಿರುವಂತೆ ಚೀನಾ ಸರ್ಕಾರ ಯಾವಾಗಲೂ ಚೀನಾ ಕಂಪನಿಗಳಿಗೆ ಸೂಚಿಸುತ್ತದೆ ಎಂದು ಹೇಳಿತ್ತು. 

ಭಾರತ ಹಾಗೂ ಚೀನಾ ನಡುವಣ ಪ್ರಾಯೋಗಿಕ ಸಹಕಾರ ಎರಡೂ ದೇಶಗಳಿಗೂ ಲಾಭ ತರುವಂತಹದ್ದು, ಆ್ಯಪ್ ನಿಷೇಧ ಬೆಳವಣಿಗೆ ಭಾರತಕ್ಕೂ ಒಳ್ಳೆಯದಲ್ಲ ಎಂದು ತಿಳಿಸಿತ್ತು. 

ಇದರಂತೆ ಟಿಕ್ ಟಾಕ್ ಕೂಡ ಸ್ಪಷ್ಟನೆ ನೀಡಿ, ಭಾರತ ಸರ್ಕಾರ ನಿಷೇದ ಹೇರಿ ಹೊರಡಿಸಿರುವ ಆದೇಶವನ್ನು ಪಾಲಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದೇವೆ. ಭಾರತೀಯ ಬಳಕೆದಾರರು ಮಾಹಿತಿಯನ್ನು ಚೀನಾ ಸೇರಿದಂತೆ ಯಾವುದೇ ದೇಶದ ಸರ್ಕಾರಗಳ ಜೊತೆ ಹಂಚಿಕೊಂಡಿಲ್ಲ. ಇನ್ನು ಮುಂದೆಯೂ ಯಾವುದೇ ಸರ್ಕಾರದಿಂದ ಕೋರಿಕೆ ಬಂದರೂ ನಾವು ನೀಡುವುದಿಲ್ಲ. ಬಳಕೆದಾರರ ಖಾಸಗಿತನ ಹಾಗೂ ಸಮಗ್ರತೆಗೆ ನಾವು ಅತ್ಯುನ್ನತ ಮಹತ್ವ ನೀಡುತ್ತೇವೆ ಎಂದು ಸ್ಪಷ್ಟನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com