ಏಪ್ರಿಲ್ 2023ರಿಂದ ಖಾಸಗಿ ರೈಲುಗಳ ಸಂಚಾರ ಆರಂಭ: ವಿನೋದ್‍ ಯಾದವ್

ದೇಶದಲ್ಲಿ ಖಾಸಗಿ ರೈಲುಗಳು ಏಪ್ರಿಲ್ 2023ರಿಂದ ಸಂಚಾರ ಆರಂಭಿಸುವ ನಿರೀಕ್ಷೆಯಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಅವರು ಗುರುವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಲ್ಲಿ ಖಾಸಗಿ ರೈಲುಗಳು ಏಪ್ರಿಲ್ 2023ರಿಂದ ಸಂಚಾರ ಆರಂಭಿಸುವ ನಿರೀಕ್ಷೆಯಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಅವರು ಗುರುವಾರ ತಿಳಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿನೋದ್ ಯಾದವ್ ಅವರು, ಖಾಸಗಿ ರೈಲುಗಳನ್ನು ಓಡಿಸಲು ಈ ವರ್ಷದ ನವೆಂಬರ್ ವೇಳೆಗೆ ಆರ್ಥಿಕ ಬಿಡ್‌ಗಳನ್ನು ಆಹ್ವಾನಿಸುವ ನಿರೀಕ್ಷೆಯಿದೆ. 2021ರ ಫೆಬ್ರವರಿ-ಮಾರ್ಚ್ ವೇಳೆಗೆ ಆರ್ಥಿಕ ಬಿಡ್‌ಗಳ ಆಧಾರದ ಮೇಲೆ ಕ್ಲಸ್ಟರ್‌ಗಳನ್ನು ಹಂಚಿಕೆ ಮಾಡಲಾಗುತ್ತದೆ. ಆ ನಂತರ ಏಪ್ರಿಲ್ 2023 ರ ವೇಳೆಗೆ ದೇಶದಲ್ಲಿ ಖಾಸಗಿ ರೈಲುಗಳು ಸಂಚರಿಸಲಾರಂಭಿಸುವ ಸಾಧ್ಯತೆ ಇದೆ ಎಂದಿದ್ದಾರೆ.

ಆದರೂ, ಸದ್ಯ ಅಸ್ತಿತ್ವದಲ್ಲಿರುವ ಖಾಸಗಿ ರೈಲುಗಳನ್ನು ಸ್ಥಗಿತಗೊಳಿಸಿದ ನಂತರ ಯಾವುದೇ ಹೊಸ ಮಾರ್ಗದಲ್ಲಿ ಖಾಸಗಿ ರೈಲುಗಳನ್ನು ಆರಂಭಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ರೈಲುಗಳು ಈಗಿರುವ ರೈಲುಗಳಿಗೆ ಹೆಚ್ಚುವರಿಯಾಗಿರುತ್ತವೆ. ಹೆಚ್ಚಿನ ಬೇಡಿಕೆ ಇರುವ ಹಾಗೂ ಕಾಯುವಿಕೆ(ವೈಟಿಂಗ್‍) ಪಟ್ಟಿಯಲ್ಲಿ ಟಿಕೆಟ್‍ ರದ್ದುಪಡಿಸಿದ ಸ್ಥಳಗಳಲ್ಲಿ ಖಾಸಗಿ ರೈಲುಗಳಿಗೆ ಅದೇ ಮಾರ್ಗಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದರು.

150 ಖಾಸಗಿ ಪ್ರಯಾಣಿಕ ರೈಲುಗಳ ಸಂಚಾರಕ್ಕೆ 100 ಮಾರ್ಗಗಳನ್ನು ಭಾರತೀಯ ರೈಲ್ವೆ ಅಯ್ದುಕೊಂಡಿದೆ. ಈ ಮಾರ್ಗಗಳಿಗೆ ಮುಂದಿನ ತಿಂಗಳು ಬಿಡ್ ನಡೆಸುವ ಸಾಧ್ಯತೆ ಇದೆ.

ರೇಲ್ವೆ ಖಾಸಗೀಕರಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪ್ರತಿಪಕ್ಷ ಕಾಂಗ್ರೆಸ್, ರೈಲ್ವೆಯನ್ನು ಖಾಸಗೀಕರಣಗೊಳಿಸುವುದಿಲ್ಲ ಎಂಬ ಭರವಸೆಯನ್ನು ಮೋದಿ ಸರ್ಕಾರ ಮುರಿಯುತ್ತಿದೆ ಎಂದು ಆರೋಪಿಸಿದೆ.

ಕೇಂದ್ರ 109 ರೈಲುಗಳನ್ನು ಖಾಸಗಿ ಕಂಪೆನಿಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಗುರುವಾರ ಆರಂಭಿಸಿದ್ದು, ಈ ಕ್ರಮದ ಬಗ್ಗೆ ಸಮರ್ಥನೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಇಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಗ್ವಿ, ರೈಲ್ವೆ ಅತ್ಯಂತ ಲಾಭದಾಯಕ ಇಲಾಖೆಯಾಗಿದ್ದು, ದೇಶದ ಬಡವರ ಪ್ರಯಾಣಕ್ಕೆ ಆಧಾರವಾಗಿದೆ. ಉದ್ಯೋಗ ಒದಗಿಸುವುದರಲ್ಲಿ ರೈಲ್ವೆ ವಿಶ್ವದಲ್ಲೇ ಏಳನೇ ಸ್ಥಾನದಲ್ಲಿದೆ. ಆದರೂ, ಸರ್ಕಾರ ಈ ದೊಡ್ಡ ಜಾಲವನ್ನು ಖಾಸಗೀಕರಣಗೊಳಿಸುತ್ತಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com